
ಮೈಸೂರು : ಕೇಂದ್ರ ಸರ್ಕಾರ ₹3705 ಕೋಟಿ ತೆರಿಗೆ ಪಾಲು ಹಂಚಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಡಿದೆದ್ದಿದ್ದಾರೆ. ‘ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿಯೇ ಕರ್ನಾಟಕಕ್ಕೆ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿರುವ ಅವರು, ಅಗತ್ಯ ಬಿದ್ದರೆ ನ್ಯಾಯಾಲಯದ ಮೆಟ್ಟಿಲೇರಿ ನಮ್ಮ ಪಾಲನ್ನು ನಾವು ಪಡೆಯುತ್ತೇವೆ’ ಎಂದಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಅವರು ಮಾತನಾಡಿ ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ಹಣದಲ್ಲಿ ಕಡಿಮೆ ಪಾಲು ಬಂದಿರುವ ಬಗ್ಗೆ ಪ್ರತಿಕ್ರಿಯಿಸಿದರು. ‘ರಾಜ್ಯಕ್ಕೆ ಮೊದಲಿನಿಂದಲೂ ಕೇಂದ್ರದಿಂದ ಅನ್ಯಾಯವಾಗುತ್ತಿದೆ. ನಾವು ಕೊಟ್ಟಿದ್ದನ್ನು ನ್ಯಾಯ ಸಮ್ಮತವಾಗಿ ನಮಗೆ ವಾಪಸ್ ಕೊಡಿ ಎಂದು ಕೇಳುವುದು ತಪ್ಪಾ?’ ಎಂದು ಪ್ರಶ್ನಿಸಿದರು.
ದಿನಬಳಕೆ ವಸ್ತುಗಳ ಮೇಲೆ ಜಿಎಸ್ಟಿ ಕಡಿಮೆ ಮಾಡಿದ್ದರಿಂದ ನಮಗೆ 15 ಸಾವಿರ ಕೋಟಿ ರು.ನಷ್ಟ ಆಗುತ್ತಿದೆ. ಜಿಎಸ್ಟಿ ಕಡಿಮೆ ಮಾಡಿದ್ದನ್ನು ನಾವು ಸ್ವಾಗತಿಸಬೇಕು. ಆದರೆ, ನಷ್ಟವನ್ನೂ ನಾವೇ ಅನುಭವಿಸಬೇಕು. ಕಳೆದ 8 ವರ್ಷದಿಂದ ಕೇಂದ್ರ ಸರ್ಕಾರ ದಿನಬಳಕೆ ವಸ್ತುಗಳ ಮೇಲೆ ಜಿಎಸ್ಪಿಯನ್ನು ಹೆಚ್ಚಿಗೆ ಮಾಡಿ, ರಾಜ್ಯದಿಂದ ಅತಿ ಹೆಚ್ಚು ಜಿಎಸ್ಟಿ ವಸೂಲಿ ಮಾಡಿದೆ. ಆ ಹಣವನ್ನು ಈಗ ವಾಪಸ್ ಕೊಡುತ್ತಾರಾ?. ಜಾಸ್ತಿ ಮಾಡುವುದೂ ಇವರೇ, ಕಡಿಮೆ ಮಾಡುವುದೂ ಇವರೇ. ಇದರಲ್ಲಿ ಯಾವ ದೊಡ್ಡತನವೂ ಇಲ್ಲ. ಇದರಲ್ಲಿ ಬೆನ್ನು ತಟ್ಟಿಕೊಳ್ಳುವಂತದ್ದು ಏನಿದೆ?. ಬಿಹಾರದಲ್ಲಿ ಚುನಾವಣೆ ಇರುವ ಕಾರಣ, ಜಿಎಸ್ಟಿಯನ್ನು ಕಡಿತ ಮಾಡಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಎಂದು ಆರೋಪಿಸಿದರು.
ಎನ್‌ಡಿಎ ಆಡಳಿತವಿರುವ ರಾಜ್ಯಗಳ ಅನುಕೂಲಕ್ಕೆ ತಕ್ಕಂತೆ ಜಿಎಸ್ಟಿ ಪರಿಹಾರವನ್ನು ನೀಡಲಾಗುತ್ತಿದೆ. ಆದರೆ, ರಾಜ್ಯದ ಬಿಜೆಪಿ ಸಂಸದರು, ಸಚಿವರು ಮೋದಿ ಮುಂದೆ ಈ ವಿಷಯದ ಬಗ್ಗೆ ಮಾತನಾಡುವುದೇ ಇಲ್ಲ. ಬಿಜೆಪಿ ಸಂಸದರು, ಸಚಿವರಿಗೆ ಮೋದಿಯನ್ನು ಹೊಗಳುವುದೇ ಕೆಲಸ. ರಾಜ್ಯದ ಹಿತ ಚಿಂತನೆಯನ್ನು ಅವರು ಮಾಡುವುದಿಲ್ಲ ಎಂದು ಕಿಡಿಕಾರಿದರು.
ಉತ್ತರ ಪ್ರದೇಶಕ್ಕೆ ಶೇ.18ರಷ್ಟು ನೀಡುತ್ತಿದ್ದು, ರಾಜ್ಯಕ್ಕೆ ಕೇವಲ ಶೇ.3.5ರಷ್ಟು ನೀಡುತ್ತಿರುವುದು ಅನ್ಯಾಯ. ಕರ್ನಾಟಕ 4.5 ಲಕ್ಷ ಕೋಟಿ ರು.ಗಳನ್ನು ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ನೀಡಿದರೆ, ನಮಗೆ ರುಪಾಯಿಗೆ ಕೇವಲ 14 ಪೈಸೆ ಮಾತ್ರ ದೊರೆಯುತ್ತಿದೆ. ಕಳೆದ ಬಾರಿಯಂತೆ ಈ ಬಾರಿಯೂ ಅಗತ್ಯಬಿದ್ದರೆ ನ್ಯಾಯಾಲಯದ ನೆರವು ಪಡೆದು, ಕೇಂದ್ರದ ಅನುದಾನ ಪಡೆಯಲಾಗುವುದು ಎಂದರು.
ಕೇಂದ್ರದ ಕಡಿಮೆ ಅನುದಾನದ ನಡುವೆ ಗ್ಯಾರಂಟಿಗಳ ವೆಚ್ಚವನ್ನು ಭರಿಸುವುದು ಸರ್ಕಾರಕ್ಕೆ ಸವಾಲಾಗಿದ್ದರೂ, ಸವಾಲನ್ನು ದಿಟ್ಟತನದಿಂದ ಎದುರಿಸುತ್ತೇವೆ ಎಂದು ತಿಳಿಸಿದರು.
ಸಿಎಂ ಸಿಡಿಮಿಡಿ
- ಉ.ಪ್ರ.ಗೆ ಶೇ.18ರಷ್ಟು ಪಾಲು ನೀಡಿ, ನಮಗೆ ಶೇ.3.5 ಪಾಲು ಸರಿಯೆ?
- ಜಿಎಸ್ಟಿ ಕಡಿಮೆ ಮಾಡಿದ್ದರಿಂದ ಕರ್ನಾಟಕಕ್ಕೆ ₹15 ಸಾವಿರ ಕೋಟಿ ನಷ್ಟ
- ಜಿಎಸ್ಟಿ ಇಳಿಸಿದದ್ದನ್ನೂ ಸ್ವಾಗತಿಸಬೇಕು, ನಷ್ಟ ಕೂಡ ಅನುಭವಿಸಬೇಕು
- ಇದು ಕರ್ನಾಟಕದ ಸ್ಥಿತಿ. ಬಿಜೆಪಿಗರು ಕರ್ನಾಟಕದ ಹಿತಚಿಂತನೆ ಮಾಡಲ್ಲ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.