
ಬೆಂಗಳೂರು (ಜೂ.3): ರಾಜ್ಯ ರಾಜಕೀಯದಲ್ಲಿಂದು ಹಬ್ಬದ ವಾತಾವರಣವಿದೆ. ಲೋಕಭವನದ ಗಾಜಿನಮನೆಯಲ್ಲಿಂದು ಮುಖ್ಯಮಂತ್ರಿ ಪದಗ್ರಹಣ ನಡೆಯಲಿದೆ ರಾಜ್ಯ 24ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಇಂದು ಅಪಾರ ಬೆಂಬಲಿಗರೊಂದಿಗೆ ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಐತಿಹಾಸಿಕ ಸಮಾರಂಭಕ್ಕೆ ದೆಹಲಿಯಿಂದ ಗಣ್ಯರ ದಂಡೇ ಆಗಮಿಸುತ್ತಿದೆ. ಇತ್ತ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಬೆಂಬಲಿಗರು ನಗರಕ್ಕೆ ಆಗಮಿಸಿದ್ದಾರೆ. ಈ ನಡುವೆ ಹೊಸ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡವರು ಖುಷಿಯಲ್ಲಿದ್ದರೆ, ಸಚಿವ ಸ್ಥಾನದ ಭರವಸೆಯಲ್ಲಿದ್ದ ಕೆಲವು ನಾಯಕರಿಗೆ ಕೈತಪ್ಪಿರುವ ಹಿನ್ನೆಲೆ ಬೆಂಬಲಿಗರು ಅಸಮಾಧಾನ ಆಕ್ರೋಶ ತೀವ್ರಗೊಳ್ಳುತ್ತಿದೆ.
ಶಾಸಕ ವಿಜಯಾನಂದ ಕಾಶಪ್ಪನವರ್ ಈ ಬಾರಿ ಹೊಸ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವ ಭರವಸೆಯಲ್ಲಿದ್ದರು. ಬೆಂಬಲಿಗರು ಕೂಡ ಅದೇ ನೀರಿಕ್ಷೆಯಲ್ಲಿದ್ದರು ಆದರೆ ಲೆಕ್ಕಾಚಾರ ಉಲ್ಟಾ ಆಗಿದೆ ಶಾಸಕ ವಿಜಯಾನಂದ ಕಾಶೆಪ್ಪನವರಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಅಸಮಾಧಾನ ವ್ಯಕ್ತವಾಗಿ ಬೆಂಬಲಿಗರು ಅಭಿಮಾನಿಗಳು ಕಾಂಗ್ರೆಸ್ ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
ಪ್ರಮಾಣ ವಚನಕ್ಕೆ ಇನ್ನು ಕೆಲವೇ ಗಂಟೆಗಳಿರುವ ಬೆನ್ನಲ್ಲೇ ಪೊಲೀಸರು ಹೈಅಲರ್ಟ್ ಆಗಿ ಸುತ್ತಮುತ್ತ ಯಾವುದೇ ಪ್ರತಿಭಟನೆ, ಮೆರವಣಿಗೆಗಳು ನಡೆಯದಂತೆ ಕಟ್ಟುನಿಟ್ಟಿನ ನಿರ್ಬಂಧಿಸಿದ್ದಾರೆ. ಈ ನಡುವೆ ರಾಜಭವನದ ರಸ್ತೆಯಲ್ಲೇ ಕಾಶೆಪ್ಪನವರ್ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಸಚಿವ ಸ್ಥಾನ ನೀಡಲೇಬೇಕೆಂದು, ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಘೋಷಣೆಗಳನ್ನು ಕೂಗಲಾರಂಭಿಸಿದರು.
ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುವ ಮುನ್ನವೇ ಭದ್ರತಾ ದೃಷ್ಟಿಯಿಂದ ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ಪಡೆದು ಸ್ಥಳದಿಂದ ತೆರವುಗೊಳಿಸಿದರು.
ಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಪ್ರತಿಭಟನೆ ಅಥವಾ ಅಹಿತಕರ ಘಟನೆ ನಡೆಯದಂತೆ ಲೋಕಭವನದ ಸುತ್ತಮುತ್ತ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪ್ರತಿಭಟನೆ ನಡೆಸುತ್ತೆದ್ದ ಕಾಶೆಪ್ಪನವರ ಬೆಂಬಲಿಗರನ್ನ ಲೋಕಭವನದ ಸಮೀಪದಿಂದ ದೂರ ಕಳುಹಿಸಿದರು.
ಸದ್ಯ ಪ್ರಮಾಣ ವಚನಕ್ಕೆ ಮುನ್ನ ಡಿಕೆ ಶಿವಕುಮಾರ್ ಅವರು ಯಡಿಯೂರಪ್ಪ, ದೇವೇಗೌಡ, ಸಿದ್ದರಾಮಯ್ಯ ಸೇರಿದಂತೆ ಪ್ರತಿಯೊಬ್ಬ ಹಿರಿಯ ನಾಯಕರ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ಅಹ್ವಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.