ಸಿಎಂ ಆಯ್ಕೆ ಕಸರತ್ತು ತೀವ್ರಗೊಳ್ಳುತ್ತಿದೆ. ಡಿಕೆ ಶಿವಕುಮಾರ್ ಜೊತೆ ಸಭೆ ನಡೆಸಿದ ಮಲ್ಲಿಕಾರ್ಜುನ ಖರ್ಗೆ ಗೊಂದಲಕ್ಕೀಡಾಗಿದ್ದಾರೆ. ಕೊಡುವುದಾದರೆ ಸಿಎಂ ಹದ್ದೆ ಕೊಡಿ, ಇಲ್ಲದಿದ್ದರೆ ಶಾಸಕನಾಗಿಯೇ ಇರುತ್ತೇನೆ. ಎಂದು ಡಿಕೆ ಶಿವಕುಮಾರ್, ಖರ್ಗೆಗೆ ಹೇಳಿದ್ದಾರೆ. ಡಿಕೆಶಿ ಹಾಗೂ ಖರ್ಗೆ ನಡುವಿನ 50 ನಿಮಿಷದ ಮಾತುಕತೆ ವಿವರ ಇಲ್ಲಿದೆ.
ನವದೆಹಲಿ(ಮೇ.16): ಕರ್ನಾಟಕದಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಇದೀಗ ದೇಶದಲ್ಲಿ ಸಿಎಂ ಆಯ್ಕೆ ವಿಚಾರದಲ್ಲಿ ದೇಶದಲ್ಲಿ ಸದ್ದು ಮಾಡುತ್ತಿದೆ. ಫಲಿತಾಂಶ ಘೋಷಣೆಯಾಗಿ 3 ದಿನಗಳೇ ಉರುಳಿದರೂ ಸಿಎಂ ಆಯ್ಕೆ ಮಾತ್ರ ಕಗ್ಗಾಂಟಾಗುತ್ತಿದೆ. ಇದೀಗ ದೆಹಲಿಯಲ್ಲಿ ಹಲವು ಸುತ್ತಿಮ ಮಾತುಕತೆಗಳು ನಡೆದಿದೆ. ಕೊನೆಯದಾಗಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಜೊತೆ ಪ್ರತ್ಯೇಕ ಸಭೆ ನಡೆಸಲಾಗುತ್ತಿದೆ. ಈಗಾಗಲೇ ಡಿಕೆ ಶಿವಕುಮಾರ್ ಜೊತೆ ಸುಮಾರು 50 ನಿಮಿಷಗಳ ಕಾಲ ಮಲ್ಲಿಕಾರ್ಜುನ ಖರ್ಗೆ ಸಭೆ ನಡೆಸಿದ್ದಾರೆ. ಈ ವೇಳೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದ್ದಾರೆ. ಕೊಡುವುದಾದರೆ ಮುಖ್ಯಮಂತ್ರಿ ಸ್ಥಾನ ಕೊಡಿ. ಇಲ್ಲದಿದ್ದರೆ ನಾನು ಶಾಸಕನಾಗಿಯೇ ಇರುತ್ತೇನೆ. ಯಾವುದೇ ಸ್ಥಾನ ಬೇಡ ಎಂದು ಡಿಕೆ ಶಿವಕುಮಾರ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಹೇಳಿದ್ದಾರೆ.
ಸಿಎಂ ಆಯ್ಕೆ ಕಗ್ಗಂಟಾಗುತ್ತಿದ್ದಂತೆ ದೆಹಲಿಗೆ ಬರುವಂತೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯಗೆ ಬುಲಾವ್ ನೀಡಲಾಗಿತ್ತು. ಇದರಂತೆ ಇಂದು ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್ ಮಹತ್ವದ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ತೆರಳಿ 50 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ಡಿಕೆ ಶಿವಕುಮಾರ್ ಸಿಎಂ ಸ್ಥಾನಕ್ಕೆ ಪಟ್ಟು ಬಿಗಿಗೊಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟಿದ್ದೇನೆ. ಪ್ರತಿ ಜಿಲ್ಲೆಯಲ್ಲಿ ಕಾರ್ಯಕರ್ತರನ್ನು ಸಂಘಟಿಸಿದ್ದೇನೆ. ಹಗಲು ರಾತ್ರಿ ಕೆಲಸ ಮಾಡಿದ್ದೇನೆ. ಇದರ ಫಲವಾಗಿ ಕಾಂಗ್ರೆಸ್ ಇಂದು ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾರಕ್ಕೆ ಬಂದಿದೆ. ಸಿದ್ದಾರಾಮಯ್ಯ ಪಕ್ಷಕ್ಕೆ ಬಂದ ಬಳಿಕ ಪಕ್ಷ ಸಂಘಟನೆ ಮಾಡಿಲ್ಲ. ಕಾಂಗ್ರೆಸ್ ಪಕ್ಷ ಸೇರಿಕೊಂಡ ಬಳಿಕ ಸಿದ್ದರಾಮಯ್ಯ ಅಧಿಕಾರ ಅನುಭವಿಸುತ್ತಿದ್ದಾರೆ. ಆದರೆ ಇದುವರೆಗೂ ನಾನು ಯಾವುದೇ ಆಕ್ಷೇಪ ಎತ್ತಿಲ್ಲ. ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ವಿಪಕ್ಷ ನಾಯಕನಾಗಿಯೂ ಕೆಲಸ ಮಾಡಿದ್ದಾರೆ. ಈ ಬಾರಿ ಸಿದ್ದರಾಮಯ್ಯಗೆ ಪಕ್ಷ ಸಂಘಟನೆಯ ಜವಾಬ್ದಾರಿ ನೀಡಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಸ್ಥಾನ ಕೊಡುವುದಾದರೆ ಸಿಎಂ ಸ್ಥಾನ ಕೊಡಿ, ಇಲ್ಲದಿದ್ದರೆ ಯಾವುದೇ ಸಚಿವ ಸ್ಥಾನ ಬೇಡ. ನಾನು ಶಾಸಕನಾಗಿ ಇರುತ್ತೇನೆ ಎಂದಿದ್ದಾರೆ. 50 ನಿಮಿಷ ಮಾತುಕತೆಯಲ್ಲಿ ಡಿಕೆ ಶಿವಕುಮಾರ್ ಹೈಕಮಾಂಡ್‌ಗೆ 2 ಆಯ್ಕೆ ಮುಂದಿಟ್ಟಿದ್ದಾರೆ. ನನ್ನನ್ನು ಮುಖ್ಯಮಂತ್ರಿ ಮಾಡಿ, ಇಲ್ಲಾ ನೀವೇ ಮುಖ್ಯಮಂತ್ರಿ ಜವಾಬ್ದಾರಿ ನಿರ್ವಹಿಸಿ. ಡಿಕೆಶಿ ಮಾತುಕತೆ ಬಳಿಕ ಕಾಂಗ್ರೆಸ್ ಹೈಕಮಾಂಡ್ ಮತ್ತಷ್ಟು ಗೊಂದಲಕ್ಕೀಡಾಗಿದೆ.
ಡಿಕೆ ಶಿವಕುಮಾರ್ ಬಳಿ ಸಿದ್ದರಾಮಯ್ಯ ಕೂಡ ಇದೇ ವಾದ ಮುಂದಿಟ್ಟಿದ್ದರೆ. ಸಂಪೂರ್ಣ ಅವಧಿಗೆ ತನಗೆ ಸಿಎಂ ಸ್ಥಾನ ನೀಡಬೇಕು ಎಂದಿದ್ದಾರೆ. ತನಗೆ ಶಾಸಕರ ಬೆಂಬಲ ಹೆಚ್ಚಿದೆ. ಸದ್ಯದ ಕರ್ನಾಟಕದ ಪರಿಸ್ಥಿತಿಗೆ ತಾನು ಸಿಎಂ ಆಗುವುದೇ ಸೂಕ್ತ ಎಂದಿದ್ದಾರೆ. ಇವರಿಬ್ಬರ ಜೊತೆಗಿನ ಸಭೆ ಬಳಿಕ ನಾಳೆ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ.