
ಬೆಂಗಳೂರು (ಮೇ 18): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿ 135 ಸ್ಥಾನಗಳೊಂದಿಗೆ ಬಹುಮತ ಗಳಿಸಿದ್ದ ಕಾಂಗ್ರಸ್ ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ಅವರೇ ನಮ್ಮ ನಾಯಕ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಘೋಷಣೆ ಮಾಡಿದರು. ಈ ಮೂಲ ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಶನಿವಾರ (ಮೇ 20ರಂದು) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನಡುವೆ ಮುಖ್ಯಮಂತ್ರಿ ಹುದ್ದೆಗಾಗಿ ಭಾರಿ ಪೈಪೋಟಿ ನಡೆದಿದ್ದು, ಇಂದು ಸಿದ್ದರಾಮಯ್ಯ ಅವರೇ ಸಿಎಂ ಆಗುವುದಕ್ಕೆ ಹೈಕಮಾಂಡ್ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ನಮ್ಮ ನಾಯಕನೆಂದು ಘೋಷಣೆ ಮಾಡಲಾಯಿತು. ಶಾಸಕಾಂಗ ನಾಯಕನ ಆಯ್ಕೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿರ್ಣಯ ಮಂಡಿಸಿದರು.
ಸರ್ಕಾರ ರಚನೆಗೆ ಸಿದ್ದರಾಮಯ್ಯಗೆ ಗ್ರೀನ್ ಸಿಗ್ನಲ್ ನೀಡಿದ ರಾಜ್ಯಪಾಲರು
ವಿವಿಧ ಸಮುದಾಯಗಳ ನಾಯಕರಿಂದ ನಿರ್ಣಯಕ್ಕೆ ಅನುಮೋದನೆ: ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನೆರೆದಿದ್ದ ಎಲ್ಲ 135 ಶಾಸಕರು ಕೂಡ ಅಧ್ಯಕ್ಷರ ನಿರ್ಣಯಕ್ಕೆ ಅನುಮೋದನೆ ನಿಡಿದರು. ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕನೆಂದು ಒಪ್ಪಿಕೊಂಡು ಘೋಷಣೆ ಮಾಡಿದರು. ಈ ವೇಳೆ ಸಿದ್ದರಾಮಯ್ಯ ಹೆಸರು ಪ್ರಸ್ತಾಪ ಮಾಡಿದ ಡಿ.ಕೆ ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಹೆಸರು ತಾವೇ ಘೋಷಣೆ ಮಾಡಿದೆ. ಈ ವೇಳೆ ಡಿ.ಕೆ. ಶಿವಕುಮಾರ್ ಪ್ರಸ್ತಾವನೆಗೆ ಡಾ.ಜಿ ಪರಮೇಶ್ವರ, ಎಚ್ ಕೆ ಪಾಟೀಲ್, ಎಂಬಿ ಪಾಟೀಲ್, ಆರ್ ವಿ ದೇಶಪಾಂಡೆ, ಲಕ್ಷ್ಮೀ ಹೆಬ್ಬಾಳ್ಕರ್ , ತನ್ವೀರ್ ಸೇಠ್, ಕೆ ಎಚ್ ಮುನಿಯಪ್ಪ ಅನುಮೋದನೆ ನೀಡಿದರು. ಜೊತೆಗೆ, ವಿವಿಧ ಸಮುದಾಯಗಳ ನಾಯಕರಿಂದ ಅನುಮೋದನೆ ಕೂಡ ಲಭ್ಯವಾಯಿತು. ಆ ಮೂಲಕ ಸಮುದಾಯಗಳ ಬೆಂಬಲದಿಂದ ಕರ್ನಾಟಕದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗಿದೆ ಎಂದು ಸಂದೇಶವನ್ನು ರವಾನೆ ಮಾಡಲಾಯಿತು.
ಶಾಸಕರೆಲ್ಲರೂ ಪ್ರಮಾಣ ವಚನಕ್ಕೆ ಬನ್ನಿ:
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಶಾಸಕಾಂಗ ಸಭೆಯಲ್ಲೂ ಅಧಿಕಾರ ಹಂಚಿಕೆಯ ಬಗ್ಗೆ ಮಾಹಿತಿ ನೀಡಿದರು. ಸಿಎಂ, ಡಿಸಿಎಂ ಜೊತೆಗೆ ಸಚಿವರೂ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ. ನಾಳೆ ನಾನು ಮತ್ತು ಸಿದ್ದರಾಮಯ್ಯ ದೆಹಲಿಗೆ ತೆರಳುತ್ತೇವೆ. ಶನಿವಾರ ಪ್ರಮಾಣ ವಚನ ಕಾರ್ಯಕ್ರಮ ಇದೆ. ನೀವು ಶಾಸಕರೆಲ್ಲರು ಕಾರ್ಯಕ್ರಮಕ್ಕೆ ಬರಬೇಕು. ಬೇರೆ ಬೇರೆ ರಾಜ್ಯಗಳ ನಾಯಕರು ಬರ್ತಾರೆ. ನಾವೆಲ್ಲರೂ ಒಗ್ಗಟ್ಟಾಗಿಯೇ ಇರಬೇಕು ಎಂದು ಹೇಳಿದರು.
ನನ್ನ ಮೇಲೆ ವಿಶ್ವಾಸ ಇಟ್ಟಿದ್ದಕ್ಕೆ ಧನ್ಯವಾದ: ಕಾಂಗ್ರಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ತಮ್ಮ ಭಾಷಣದ ಆರಂಭದಲ್ಲಿ ಶಾಸಕರಿಗೆ ಧನ್ಯವಾದ ತಿಳಿಸಿದರು. ಐದು ಯೋಜನೆಗಳನ್ನ ಅನುಷ್ಠಾನಕ್ಕೆ ತರ್ತೇವೆ. ಇದರಲ್ಲಿ ಯಾವುದೇ ಗೊಂದಲ ಬೇಡ. ನೀವೆಲ್ಲರೂ ನನ್ನ ಮೇಲೆ ವಿಶ್ವಾಸ ಇಟ್ಟಿದ್ದೀರಿ. ಇದಕ್ಕೆ ಎಲ್ಲರಿಗೂ ಧನ್ಯವಾದಗಳು. ಪ್ರಾಮಾಣಿಕವಾಗಿ ನಂಬಿಕೆ ಉಳಿಸಿಕೊಳ್ಳುತ್ತೇನೆ. ಕೊಟ್ಟ ಭರವಸೆ ಈಡೇರಿಸುತ್ತೇನೆ. ಎಲ್ಲರೂ ಸಹಕಾರ ಕೊಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
ನನ್ನ ಸೋಲಿಗೆ ಪಕ್ಷದ ಕೆಲ ಮುಖಂಡರೇ ಕಾರಣ: ಮಾಜಿ ಸಚಿವ ಸೋಮಣ್ಣ
ಡಿ.ಕೆ ಶಿವಕುಮಾರ್ ಪದತ್ಯಾಗ ಮಾಡಿದ್ದಾರೆ: ಎಐಸಿಸಿ ವೀಕ್ಷಕ, ಕೇಂದ್ರದ ಮಾಜಿ ಸಚಿವ ಸುಶೀಲ್ ಕುಮಾರ್ ಶಿಂಧೆ ಮಾತನಾಡಿ, ಡಿ.ಕೆ ಶಿವಕುಮಾರ್ ಪದತ್ಯಾಗ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ನಮ್ಮ ಪಕ್ಷದ ಸರ್ಕಾರ ಬಂದಾಗ ನಾನು ಪಕ್ಷದ ಅಧ್ಯಕ್ಷನಾಗಿದ್ದೆನು. ಆಗ ನನಗೆ ಅವಕಾಶ ಕೊಟ್ಟಿರಲಿಲ್ಲ. ಬಳಿಕ ರಾಜ್ಯಪಾಲರನ್ನಾಗಿ ಮಾಡಿದರು. ಡಿ.ಕೆ ಶಿವಕುಮಾರ್ ತ್ಯಾಗವನ್ನು ಪಕ್ಷ ಮರೆಯೋದಿಲ್ಲ. ಅವರ ತ್ಯಾಗಕ್ಕೆ ದೊಡ್ಡ ಹುದ್ದೆ ಕೂಡ ಸಿಗಲಿದೆ ಎಂದರು. ನಂತರ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಸುರ್ಜೇವಾಲ ಮಾತನಾಡಿ, ನಮ್ಮ ಗೆಲುವಿಗೆ ನಾವು ಕಾರ್ಯಕರ್ತರಿಗೆ ಅಭಿನಂದನೆಗಳು ತಿಳಿಸಬೇಕು. ಇದು ಕಾಂಗ್ರೆಸ್ ಗೆ ಐತಿಹಾಸಿಕ ಗೆಲುವಾಗಿದೆ. ನೂತನವಾಗಿ ಆಯ್ಕೆಯಾದ ಶಾಸಕರಿಗೂ ಅಭಿನಂದನೆಗಳು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.