
ಬೆಂಗಳೂರು (ಜೂ.9): ರಾಜ್ಯ ಸರ್ಕಾರ(Karnataka Government)ದಲ್ಲಿ ಖಾತೆ ಕ್ಯಾತೆ ಮುಂದುವರಿದಿದ್ದು, ಸಚಿವ ರಾಮಲಿಂಗಾರೆಡ್ಡಿ(Ramainga reddy) ನಂತರ ಇದೀಗ ಕೃಷ್ಣ ಬೈರೇಗೌಡ(Krishna Byregowda) ಅವರು ತಮ್ಮ ಖಾತೆ ವಿಚಾರವಾಗಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಬಿಡಿಎ-ಬಿಎಂಆರ್‌ಡಿಎ(BDA-BMRDA) ಹೊರತುಪಡಿಸಿ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಹಂಚಿಕೆ ಮಾಡಿದ್ದಕ್ಕೆ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದು, ಬಿಡಿಎ ಮತ್ತು ಬಿಎಂಆರ್‌ಡಿಎ ಇಲ್ಲದೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಅರ್ಧ ಖಾತೆಯಾಗಲಿದೆ. ಕೆಲಸ ಮಾಡಬೇಕೆಂದರೆ ಪೂರ್ಣಪ್ರಮಾಣದಲ್ಲಿ ಖಾತೆ ನೀಡಿ. ಇಲ್ಲದಿದ್ದರೆ ರಾಮಲಿಂಗಾರೆಡ್ಡಿ ಅವರಿಗೇ ಬೆಂಗಳೂರು ನಗರಾಭಿವೃದ್ಧಿ ಖಾತೆ ವಹಿಸಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರ ಮುಂದೆ ತಿಳಿಸಿದ್ದಾರೆ ಎನ್ನಲಾಗಿದೆ.
ಅರ್ಧ ಖಾತೆ ಕುರಿತು ಮಾಧ್ಯಮಗಳ ಮುಂದೆಯೂ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಕೃಷ್ಣ ಬೈರೇಗೌಡ, ಬಿಡಿಎ-ಬಿಎಂಆರ್‌ಡಿಎ ಹೊರತುಪಡಿಸಿ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಲಾಗಿದೆ. ಮುಖ್ಯಮಂತ್ರಿ ಅವರು ಈ ರೀತಿ ಏಕೆ ಮಾಡಿದ್ದಾರೆ ಎಂಬುದು ತಿಳಿದಿಲ್ಲ. ಸಂಪೂರ್ಣ ಬೆಂಗಳೂರಿನ ಮೇಲೆ ಹಿಡಿತವಿಲ್ಲದಿದ್ದರೆ ಪರಿಣಾಮಕಾರಿಯಾಗಿ ಕೆಲಸ ಮಾಡಲಾಗದು, ನಿಗದಿತ ಗುರಿ ಮುಟ್ಟಲಾಗದು ಮತ್ತು ಫಲಿತಾಂಶ ನೀಡಲಾಗದು. ವಿಭಜಿತ ಜವಾಬ್ದಾರಿಯಿಂದ ಸರಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಖಾತೆಯಲ್ಲಾಗಿರುವ ವಿಭಜನೆಯಿಂದ ಬೇಸರಗೊಂಡಿರುವ ಕೃಷ್ಣ ಬೈರೇಗೌಡ ಖಾತೆ ಹಂಚಿಕೆಯಾಗಿ ಐದು ದಿನಗಳಾಗುತ್ತಿದ್ದರೂ ಈವರೆಗೆ ಖಾತೆ ವಹಿಸಿಕೊಂಡು ಕೆಲಸ ಆರಂಭಿಸಿಲ್ಲ. ಜತೆಗೆ ಜಿಬಿಎ ಸೇರಿ ತಮಗೆ ವಹಿಸಿರುವ ಬೆಂಗಳೂರು ನಗರಾಭಿವೃದ್ಧಿ ವ್ಯಾಪ್ತಿಯಲ್ಲಿನ ಇಲಾಖೆಗಳ ಯಾವುದೇ ಅಧಿಕಾರಿಗಳನ್ನೂ ಕೃಷ್ಣ ಬೈರೇಗೌಡ ಸಂಪರ್ಕಿಸಿಲ್ಲ. ತಮ್ಮ ಖಾತೆ ವಿಚಾರದಲ್ಲಿನ ಗೊಂದಲ ನಿವಾರಣೆಯಾಗುವವರೆಗೆ ಅಧಿಕಾರ ಸ್ವೀಕರಿಸದಿರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.