ಗೆದ್ದ 24 ಗಂಟೆಯಲ್ಲೇ ಮಂತ್ರಿಗಿರಿ: ರಿಸಲ್ಟ್ ಬಳಿಕ 'ಅರ್ಹ' ಶಾಸಕರಿಗೆ ಬಿಜೆಪಿ ಶಾಕ್!

By Web DeskFirst Published Dec 12, 2019, 11:27 AM IST
Highlights

ಸಂಪುಟ ವಿಸ್ತರಣೆ ಡಿ.20ರ ನಂತರ?| ಜಾರ್ಖಂಡ್‌ ವಿಧಾನಸಭೆ ಚುನಾವಣೆ ಹಿನ್ನೆಲೆ| ಬಳಿಕವಷ್ಟೇ ಕರ್ನಾಟಕದತ್ತ ವರಿಷ್ಠರ ಗಮನ| ಹಾಗಾಗಿ, ವಿಸ್ತರಣೆ ಪ್ರಕ್ರಿಯೆ ತುಸು ವಿಳಂಬ

ಬೆಂಗಳೂರು[ಡಿ.12]: ಉಪಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಸಂಪುಟ ವಿಸ್ತರಣೆಯಾಗಲಿದೆ ಎಂಬ ನಿರೀಕ್ಷೆ ಹುಸಿಯಾಗುವ ಲಕ್ಷಣ ಕಂಡುಬರುತ್ತಿದ್ದು, ಈ ತಿಂಗಳ 20ರ ಬಳಿಕ ಸಂಪುಟ ವಿಸ್ತರಣೆ ಕೈಗೆತ್ತಿಕೊಳ್ಳುವ ಮಾತು ಕೇಳಿಬಂದಿದೆ.

ಜಾರ್ಖಂಡ್‌ ವಿಧಾನಸಭೆ ಚುನಾವಣೆ ಈ ತಿಂಗಳ 20ರಂದು ಮುಗಿಯಲಿದ್ದು, ಅನಂತರವೇ ಬಿಜೆಪಿ ವರಿಷ್ಠರು ಕರ್ನಾಟಕ ರಾಜಕಾರಣದ ಬಗ್ಗೆ ಗಮನಹರಿಸಲಿದ್ದಾರೆ. ಈ ಕಾರಣಕ್ಕಾಗಿಯೇ ಯಡಿಯೂರಪ್ಪ ಅವರು ವರಿಷ್ಠರ ಭೇಟಿಗಾಗಿ ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ.

ಇದಕ್ಕೆ ಪೂರಕ ಎಂಬಂತೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಚಿಕ್ಕಬಳ್ಳಾಪುರದ ನೂತನ ಶಾಸಕ ಡಾ| ಕೆ.ಸುಧಾಕರ್‌, ಜಾರ್ಖಂಡ್‌ ರಾಜ್ಯದ ಚುನಾವಣೆಯ ನಂತರ ಸಂಪುಟ ವಿಸ್ತರಣೆಯಾಗಬಹುದು ಎಂದು ತಿಳಿಸಿದರು.

ಇಬ್ಬರ ತಲೆದಂಡ: ಸೋತ್ರೂ ಎಂಟಿಬಿ-ವಿಶ್ವನಾಥ್‌ಗೆ ಮಂತ್ರಿ ಭಾಗ್ಯ?

ಅನರ್ಹರನ್ನಾಗಿ ಮಾಡಿದ ಬಳಿಕ 150 ದಿನಗಳ ಅಜ್ಞಾತವಾಸ ಮುಗಿಸಿ ಈಗ ಹೊರಬಂದಿದ್ದೇವೆ. ಜಾರ್ಖಂಡ್‌ನಲ್ಲಿ ಚುನಾವಣೆ ಇರುವ ಕಾರಣ ಅದು ಮುಗಿದ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಬಹುದು. ನಾನೂ ಸೇರಿದಂತೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ 11 ಶಾಸಕರಿಗೆ ಮೊದಲ ಹಂತದಲ್ಲಿ ಸಚಿವ ಸ್ಥಾನ ನೀಡುವ ಬಗ್ಗೆ ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿದ್ದಾರೆ. ಉಳಿದವರ (ಅನರ್ಹ ಶಾಸಕರು) ಬಗ್ಗೆ ಪಕ್ಷದ ವರಿಷ್ಠರ ಜತೆ ಚರ್ಚಿಸಿದ ಬಳಿಕ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಸಂಪುಟ ಪುನಾರಚನೆ ಇಲ್ಲ- ಅಶೋಕ್‌:

ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆಯೇ ಹೊರತು ಪುನಾರಚನೆಯಾಗುವುದಿಲ್ಲ. ಹಾಲಿ ಇರುವ ಸಚಿವರ ಖಾತೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಸಚಿವ ಸಂಪುಟ ಪುನಾರಚನೆಯಾಗಲಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾದುದು. ಸಂಪುಟ ವಿಸ್ತರಣೆ ಮಾಡಲಾಗುತ್ತದೆಯೇ ವಿನಃ ಪುನಾರಚನೆ ಮಾಡುವುದಿಲ್ಲ. ಪ್ರಸ್ತುತ ಇರುವ ಸಚಿವರ ಖಾತೆಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಹೆಚ್ಚುವರಿಯಾಗಿ ನೀಡಿರುವ ಖಾತೆಗಳನ್ನು ನೂತನ ಸಚಿವರಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿದರು.

ಹಾಲಿ ಇರುವ ಉಪಮುಖ್ಯಮಂತ್ರಿ ಹುದ್ದೆಗಳನ್ನು ರದ್ದುಗೊಳಿಸುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅಶೋಕ್‌, ಉಪಚುನಾವಣೆಯ ಪ್ರಚಾರದ ವೇಳೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಯಾವ ಭರವಸೆ ನೀಡಿದ್ದಾರೋ ಆ ಭರವಸೆಗಳನ್ನು ಈಡೇರಿಸುತ್ತಾರೆ ಎಂದರು.

ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಬಗ್ಗೆ ಮುಖ್ಯಮಂತ್ರಿ ತೀರ್ಮಾನ ಕೈಗೊಳ್ಳಲಿದ್ದಾರೆ. ಹಾಲಿ ಸಚಿವರಿಗೆ ನೀಡಲಾಗಿರುವ ಹೆಚ್ಚುವರಿ ಖಾತೆಗಳನ್ನು ನೂತನ ಸಚಿವರಿಗೆ ನೀಡಲಾಗುವುದು. ಮೊದಲು ನೀಡಿದ್ದ ಖಾತೆಗಳಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಉಪಚುನಾವಣೆಯಲ್ಲಿ ಬಿಜೆಪಿಯ 12 ಮಂದಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ಅನರ್ಹರಿಗೆ ಸಚಿವ ಸ್ಥಾನ ಕೊಡಲಾಗುವುದು ಎಂದು ತಿಳಿಸಿದರು.

150 ದಿನಗಳ ಅಜ್ಞಾತವಾಸ ಮುಗಿಸಿ ಈಗ ಹೊರಬಂದಿದ್ದೇವೆ. ಜಾರ್ಖಂಡ್‌ನಲ್ಲಿ ಚುನಾವಣೆ ಇರುವ ಕಾರಣ ಅದು ಮುಗಿದ ಬಳಿಕ ಸಂಪುಟ ವಿಸ್ತರಣೆಯಾಗಬಹುದು. ನಾನೂ ಸೇರಿ ಉಪಚುನಾವಣೆಯಲ್ಲಿ ಗೆದ್ದ 11 ಶಾಸಕರಿಗೆ ಮೊದಲ ಹಂತದಲ್ಲಿ ಸಚಿವ ಸ್ಥಾನ ನೀಡುವ ಬಗ್ಗೆ ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿದ್ದಾರೆ. ಉಳಿದವರ (ಅನರ್ಹ ಶಾಸಕರು) ಬಗ್ಗೆ ಪಕ್ಷದ ವರಿಷ್ಠರ ಜತೆ ಚರ್ಚಿಸಿದ ಬಳಿಕ ತೀರ್ಮಾನ ಕೈಗೊಳ್ಳಲಿದ್ದಾರೆ.

- ಡಾ| ಕೆ.ಸುಧಾಕರ್‌, ಚಿಕ್ಕಬಳ್ಳಾಪುರ ಶಾಸಕ

‘ರಾಷ್ಟ್ರೀಯ ಪಕ್ಷಗಳಿಂದ ಅಧಿಕಾರ ಶಿಫ್ಟ್ : ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಜೆಡಿಎಸ್’

 

click me!