ದಾವಣಗೆರೇಲಿ ನಮ್ಮವರಿಂದಲೇ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಷಡ್ಯಂತ್ರ: ಸಲೀಂ ಅಹ್ಮದ್ ಸ್ಫೋಟಕ ಹೇಳಿಕೆ

Kannadaprabha News   | Kannada Prabha
Published : Apr 11, 2026, 09:03 AM IST
Karnataka Bypolls Conspiracy by our own people in Davanagere says saleem ahme

ಸಾರಾಂಶ

ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಪಕ್ಷದ ಕೆಲವು ಮುಖಂಡರೇ ಷಡ್ಯಂತ್ರ ನಡೆಸಿದ್ದಾರೆ ಎಂದು ಸಲೀಂ ಅಹಮದ್ ಗಂಭೀರ ಆರೋಪ ಮಾಡಿದ್ದಾರೆ. ಈ ಪಿತೂರಿಯ ನಡುವೆಯೂ, ಅಲ್ಪಸಂಖ್ಯಾತರ ಮತಗಳಿಂದ ಕಾಂಗ್ರೆಸ್ ಭಾರಿ ಬಹುಮತದಿಂದ ಗೆಲ್ಲಲಿದೆ ಎಂಬ ವಿಶ್ವಾಸವನ್ನು  ವ್ಯಕ್ತಪಡಿಸಿದ್ದಾರೆ.

 ಬೆಂಗಳೂರು (ಏ.11): ‘ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ನಮ್ಮ ಪಕ್ಷದ ಕೆಲ ಮುಖಂಡರೇ ಷಡ್ಯಂತ್ರ ಮಾಡಿದ್ದರು. ಈ ಷಡ್ಯಂತ್ರದ ನಡುವೆಯೂ ಅಲ್ಪಸಂಖ್ಯಾತರು ಸೇರಿ ಎಲ್ಲಾ ಮತದಾರರು ಕಾಂಗ್ರೆಸ್​ಗೆ ಮತ ಚಲಾಯಿಸಿದ್ದು, ಎರಡೂ ಕ್ಷೇತ್ರಗಳಲ್ಲಿ ಭಾರಿ ಬಹುಮತದಿಂದ ಕಾಂಗ್ರೆಸ್‌ ಗೆಲ್ಲಲಿದೆ’ ಎಂದು ವಿಧಾನ ಪರಿಷತ್‌ನ ಸರ್ಕಾರದ ಮುಖ್ಯಸಚೇತಕ ಸಲೀಂ ಅಹಮದ್‌ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ‘ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷ ನಡೆಸಿದ ಆಂತರಿಕ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಅತ್ಯಂತ ಹೆಚ್ಚಿನ ಮತಗಳೊಂದಿಗೆ ಗೆಲುವು ಸಾಧಿಸಲಿದೆ ಎಂದರು.

ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ ಎಲ್ಲಾ ಅಲ್ಪಸಂಖ್ಯಾತ ನಾಯಕರಿಗೆ ಕ್ಷೇತ್ರದ ಜವಾಬ್ದಾರಿ ನೀಡಿದ್ದರು. ಜೊತೆಗೆ ನನಗೆ ಹಾಗೂ ರಿಜ್ವಾನ್ ಅರ್ಷದ್ ಅವರಿಗೆ ಇತರೆ ಜವಾಬ್ದಾರಿಯನ್ನೂ ನೀಡಿದ್ದರು. ಅದನ್ನು ಸುಸೂತ್ರವಾಗಿ ನಾವು ಮಾಡಿದ್ದೇವೆ. ಆದರೆ ಪಕ್ಷದ ಒಂದಷ್ಟು ಹಿರಿಯ ಮುಖಂಡರು ಪಕ್ಷ ಸೋಲಿಸಲು ದೊಡ್ಡಷಡ್ಯಂತ್ರ ಮತ್ತು ಹುನ್ನಾರ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಮಾಹಿತಿಯಿದೆ ಎಂದು ಗಂಭೀರ ಆರೋಪ ಮಾಡಿದರು.

ಯಾರು ಏನೇ ಮಾಡಿದರೂ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಪರ ಮತ ಚಲಾಯಿಸಿದ್ದಾರೆ. ಇದರ ಬಗ್ಗೆ ಎಐಸಿಸಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಯವರಿಗೆ ಮಾಹಿತಿಯಿದೆ. ಎಲ್ಲಾ ಅಲ್ಪಸಂಖ್ಯಾತ ಮುಖಂಡರ ಒಪ್ಪಿಗೆ ಮೇರೆಗೆ ಸಮರ್ಥ್ ಅವರಿಗೆ ಟಿಕೆಟ್ ನೀಡಲಾಯಿತು.

ಗುರುಗಳಿಂದ ಕಾಂಗ್ರೆಸ್‌ ಪರ ಸಂದೇಶ:

ನಮ್ಮನ್ನೆಲ್ಲ ಕೂರಿಸಿಕೊಂಡು ಒಪ್ಪಿಗೆ ಪಡೆಯಲಾಯಿತು. ಆದರೂ ಒಂದಷ್ಟು ತಪ್ಪು ಗ್ರಹಿಕೆ ಉಂಟಾಯಿತು. ಖ್ವಾಜ ಬಂದೇ ನವಾಜ್ ಗುರುಗಳು ಬಂದು ಕಾಂಗ್ರೆಸ್ ಪರವಾಗಿ ಸಂದೇಶ ನೀಡಿದರು. ಬಿಜೆಪಿಗೆ ಅವಕಾಶ ಸಿಗುವುದು ಬೇಡ ಎಂದಿದ್ದರು. ಜತೆಗೆ ನಾವೆಲ್ಲಾ ಒಟ್ಟಾಗಿ ಪ್ರಚಾರ ಮಾಡಿದ್ದರಿಂದ ಸಮಸ್ಯೆಯಾಗಿಲ್ಲ ಎಂದು ಸಲೀಂ ಅಹಮದ್‌ ಹೇಳಿದರು.

ದಾವಣಗೆರೆಯಲ್ಲಿ ವಿಶೇಷವಾಗಿ ಶಾಮನೂರು ಶಿವಶಂಕರಪ್ಪ ಅವರು ಕೈಗೊಂಡಿದ್ದ ಅಭಿವೃದ್ಧಿ ಕೆಲಸಗಳು ಪಕ್ಷದ ಕೈ ಹಿಡಿಯಲಿದೆ. ವಿರೋಧ ಪಕ್ಷಗಳು ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡಿದರು. ಆದರೂ ಜನ ನಮ್ಮ ಪರ ಇದ್ದರು. ಅದರಲ್ಲೂ ಅಲ್ಪಸಂಖ್ಯಾತರ ಮತಗಳು ಹೆಚ್ಚು ಕಾಂಗ್ರೆಸ್ ಪಕ್ಷದ ಪರ ಇದ್ದವು. ಆದ ಕಾರಣ ಪಕ್ಷದ ಎಲ್ಲಾ ಮುಖಂಡರ ಪರವಾಗಿ ಪ್ರತಿಯೊಬ್ಬ ಕಾರ್ಯಕರ್ತರು, ಮುಖಂಡರಿಗೆ, ಮತದಾರರಿಗೆ ಧನ್ಯವಾದಗಳನ್ನು ಅರ್ಪಣೆ ಮಾಡುತ್ತೇವೆ ಎಂದರು.

ಜಬ್ಬಾರ್‌ ಹೆಸರಷ್ಟೇ ಶಿಫಾರಸು ಮಾಡಿ ಎಡವಿದೆವು-ರಿಜ್ವಾನ್‌:

ಶಾಸಕ ರಿಜ್ವಾನ್‌ ಅರ್ಷದ್ ಮಾತನಾಡಿ, ನಾವು ಅಲ್ಪಸಂಖ್ಯಾತ ನಾಯಕರೆಲ್ಲಾ ಸೇರಿ ಅಬ್ದುಲ್ ಜಬ್ಬಾರ್ ಅವರಿಗೆ ಟಿಕೆಟ್‌ ನೀಡುವುದು ಎಂದು ತೀರ್ಮಾನ ಮಾಡಿದೆವು. ಆದರೆ ತಳಮಟ್ಟದ ಕಾರ್ಯಕರ್ತರು, ನಾಯಕರಿಂದ ಅವರಿಂದ ಗೆಲ್ಲಲಾಗುವುದಿಲ್ಲ ಎಂಬ ಅಭಿಪ್ರಾಯ ಬಂತು. ಆದರೂ ನಾವು ಕೊನೆವರೆಗೂ ಅವರ ಹೆಸರನ್ನೇ ಹೇಳಿದ ಕಾರಣಕ್ಕೆ ನಮಗೆ ಹಿನ್ನಡೆ ಉಂಟಾಯಿತು.

ಅದರ ಬದಲು ನಾವು ನಾಲ್ಕೈದು ಹೆಸರು ಸೂಚಿಸಬೇಕಾಗಿತ್ತು‌ ಅಥವಾ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ನೀವೇ ಮುಸ್ಲಿಂ ಅಭ್ಯರ್ಥಿ ಹೆಸರು ಸೂಚಿಸಿ ಎನ್ನಬೇಕಿತ್ತು. ಇದನ್ನು ಮಾಡದೆ ಎಡವಿದೆವು ಎಂದರು.

ಪಕ್ಷ ಜವಾಬ್ದಾರಿ ನೀಡಿದ ಮೇಲೆ ಪ್ರತಿಯೊಬ್ಬ ಅಲ್ಪಸಂಖ್ಯಾತ ಶಾಸಕರು ದಾವಣಗೆರೆಗೆ ತೆರಳಿ ಕೆಲಸ ಮಾಡಿದ್ದಾರೆ. ಸಮುದಾಯದ ದ್ರೋಹಿಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳುವುದು ಸರಿಯಲ್ಲ. ಒಳಗಡೆ ಒಪ್ಪಿಕೊಂಡು ಹೊರಗಡೆ ವಿರೋಧ ಮಾಡುವುದು ಸರಿಯಲ್ಲ. ಹೀಗಿದ್ದರೆ ಮೊದಲೇ ಒಪ್ಪಿಕೊಳ್ಳಬಾರದಿತ್ತು ಎಂದು ರಿಜ್ವಾನ್‌ ಹೇಳಿದರು.

ಈ ವೇಳೆ ಶಾಸಕರಾದ ಯಾಸಿರ್ ಖಾನ್ ಪಠಾಣ್, ಪರಿಷತ್‌ ಸದಸ್ಯರಾದ ಬಲ್ಕಿಸ್ ಬಾನು, ಕೆಪಿಸಿಸಿ ಉಪಾಧ್ಯಕ್ಷ ಸಹೀದ್ ಅಹಮದ್, ಉಬೇದುಲ್ಲಾ ಷರಿಫ್, ಕೆಪಿಸಿಸಿ ಕಾರ್ಯದರ್ಶಿ ಅಘಾ ಸುಲ್ತಾನ್, ಮಕಂದರ್, ಚಾಂದ್ ಪಾಷ ಸೇರಿದಂತೆ ಹಲವರು ಹಾಜರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Dinesh Gundu Rao: ಚುನಾವಣೆ ಫಲಿತಾಂಶಕ್ಕೂ ನಾಯಕತ್ವಕ್ಕೂ ಸಂಬಂಧ ಇಲ್ಲ: ದಿನೇಶ್ ಗುಂಡೂರಾವ್‌
West bengal assembly election 2026 ಬಂಗಾಳ ಚುನಾವಣೆಗೆ ಕರ್ನಾಟಕ ರೀತಿ ಬಿಜೆಪಿಯಿಂದ ಗ್ಯಾರೆಂಟಿ ಭರವಸೆ!