
ಬೆಂಗಳೂರು: ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ತಂದ ಶ್ರೇಯಸ್ಸು ಹೊತ್ತಿರುವ ಪ್ರಭಾವಿ ಸಚಿವ ಡಿ.ಕೆ. ಶಿವಕುಮಾರ್ ಅವರು ಪಕ್ಷದಲ್ಲೂ ಹತೋಟಿ ಸಾಧಿಸುವ ಪ್ರಯತ್ನಗಳಿಗೆ ಒಂದಾದ ಮೇಲೊಂದರಂತೆ ಹಿನ್ನಡೆ ಉಂಟಾಗತೊಡಗಿದೆ. ಜಾರಕಿಹೊಳಿ ಸಹೋದರರ ವಿರೋಧದಿಂದಾಗಿ ಬೆಳಗಾವಿಯ ವ್ಯವಹಾರಗಳಿಂದ ದೂರವಿರುವಂತಾಗಿತ್ತು. ಇದೀಗ ಬಳ್ಳಾರಿ ಲೋಕಸಭಾ ಉಪ ಚುನಾವಣೆ ಅಭ್ಯರ್ಥಿ ಆಯ್ಕೆಗೆ ನಾಯಕತ್ವ ನೀಡಲು ಮುಂದಾಗಿದ್ದಕ್ಕೂ ಜಿಲ್ಲೆಯ ಶಾಸಕರ ವಿರೋಧ ತಡೆಯೊಡ್ಡಿದೆ.
ಕುತೂಹಲಕಾರಿ ಸಂಗತಿಯೆಂದರೆ, ಈ ಎರಡು ಜಿಲ್ಲೆಗಳಲ್ಲೂ ಶಿವಕುಮಾರ್ ವಿರೋಧಿಸಿದ ಶಾಸಕರು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಆಶ್ರಯಕ್ಕೆ ಬರುತ್ತಿದ್ದು, ಸಿದ್ದರಾಮಯ್ಯ ಮಧ್ಯಸ್ಥಿಕೆ ವಹಿಸಿದ ನಂತರ ಪರಿಸ್ಥಿತಿ ಹತೋಟಿಗೆ ಬರುತ್ತಿದೆ. ತನ್ಮೂಲಕ ರಾಜ್ಯ ಮಟ್ಟದಲ್ಲಿ ಪಕ್ಷಕ್ಕೆ ನಾಯಕತ್ವ ನೀಡುವ ಡಿ.ಕೆ. ಶಿವಕುಮಾರ್ ಅವರ ಪ್ರಯತ್ನಗಳಿಗೆ ಹಿನ್ನಡೆ ಉಂಟಾಗಿ ಸಿದ್ದರಾಮಯ್ಯ ಅವರೇ ‘ಬಾಸ್’ ಎಂಬ ಸಂದೇಶ ಸ್ಪಷ್ಟವಾಗಿ ರವಾನೆಯಾಗಿದೆ.
ಸತತವಾಗಿ ಡಿ.ಕೆ. ಶಿವಕುಮಾರ್ ನಾಯಕತ್ವಕ್ಕೆ ಶಾಸಕರು ಈ ರೀತಿ ನೇರ ವಿರೋಧ ಸೃಷ್ಟಿಯ ಹಿಂದೆ ಸಿದ್ದರಾಮಯ್ಯ ಅವರ ಪಾತ್ರವಿದೆ ಎಂದೇ ಶಿವಕುಮಾರ್ ಆಪ್ತ ವಲಯ ಆರೋಪಿಸುತ್ತಿದೆ. ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ತಂದು ಅದರ ಶ್ರೇಯಸ್ಸು ಪಡೆದಿದ್ದು ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ತಮ್ಮ ಬೆಂಬಲಿಗರನ್ನು ಪ್ರಭಾವಶಾಲಿಯಾಗಿ ಮಾಡುವಲ್ಲಿ ತೊಡಗಿಕೊಂಡಿರುವ ಶಿವಕುಮಾರ್ ಅವರ ವೇಗಕ್ಕೆ ತಡೆಯೊಡ್ಡುವ ಉದ್ದೇಶದಿಂದಲೇ ಸಿದ್ದರಾಮಯ್ಯ ಹಾಗೂ ಅವರ ಆಪ್ತರು ಶಾಸಕರ ವಿರೋಧವನ್ನು ಸೃಷ್ಟಿಮಾಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಸಮ್ಮಿಶ್ರ ಸರ್ಕಾರ ರೂಪುಗೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸಿದ ಶ್ರೇಯಸ್ಸು ಹೊಂದಿದ್ದರೂ ಕಾಂಗ್ರೆಸ್ ಶಾಸಕರು ಡಿ.ಕೆ. ಶಿವಕುಮಾರ್ ನಾಯಕತ್ವವನ್ನು ಒಪ್ಪಿಕೊಂಡಿಲ್ಲ ಎಂಬ ಸಂದೇಶ ರವಾನೆಯಾಗುವಂತೆ ಮಾಡಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಬಳ್ಳಾರಿ ಜಿಲ್ಲಾ ಉಸ್ತುವಾರಿಯಾಗಿರುವ ಡಿ.ಕೆ. ಶಿವಕುಮಾರ್ ಅವರಿಗೆ ಸಹಜವಾಗಿಯೇ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಹೊಣೆ ನೀಡಲಾಗಿತ್ತು.
ಶಿವಕುಮಾರ್ ಅವರು ಮೂರು ದಿನಗಳ ಶಾಸಕರ ಸಭೆಯನ್ನು ತಮ್ಮ ನಿವಾಸದಲ್ಲಿ ನಡೆಸಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲು ಯತ್ನಿಸಿದರು. ಆದರೆ, ಬಳ್ಳಾರಿಯ ಶಾಸಕರು ನಿರಂತರವಾಗಿ ಅವರ ಸಭೆಗಳಿಗೆ ಗೈರು ಹಾಜರಾದರು. ಹೀಗಾಗಿ ಅನಿವಾರ್ಯವಾಗಿ ಸಭೆಯು ಕೆಪಿಸಿಸಿ ಕಚೇರಿಗೆ ಸ್ಥಳಾಂತರವಾಗಬೇಕಾಯಿತು.
ಸಿದ್ದು ಮಾತಿಗೆ ಸೈ ಎಂದ ಬಳ್ಳಾರಿ ಶಾಸಕರು:
ಅದರಂತೆ ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಳ್ಳಾರಿಯ ಎಲ್ಲಾ ಶಾಸಕರು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ನಡೆದಿದ್ದು ಆಕಾಂಕ್ಷಿಗಳ ಬಗ್ಗೆ ಸವಿವರ ಚರ್ಚೆ ನಡೆಯಿತು.
ಶಾಸಕ ನಾಗೇಂದ್ರ ಅವರ ಸಹೋದರ ವೆಂಕಟೇಶ್ ಪ್ರಸಾದ್, ಹಿರಿಯ ಮುಖಂಡ ಉಗ್ರಪ್ಪ, ಶಿರಗುಪ್ಪದ ಮಾಜಿ ಶಾಸಕ ಬಿ.ಎಂ. ನಾಗರಾಜ್, ಸ್ಥಳೀಯ ಮುಖಂಡ ದೇವೇಂದ್ರಪ್ಪ ಅವರ ಹೆಸರು ಚರ್ಚೆಗೆ ಬಂದಿದೆ. ಅಂತಿಮವಾಗಿ ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಅಥವಾ ದೇವೇಂದ್ರಪ್ಪ (ರಾಯಚೂರು ಸಂಸದ ಬಿ.ವಿ. ನಾಯಕ ಮತ್ತು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರ ಸಂಬಂಧಿ) ಅವರಿಬ್ಬರ ಪೈಕಿ ಒಬ್ಬರಿಗೆ ಟಿಕೆಟ್ ನೀಡುವ ಕುರಿತು ತೀರ್ಮಾನವಾಗಿದೆ ಎಂದು ಮೂಲಗಳು ತಿಳಿಸಿವೆ.
‘ಸಭೆಯಲ್ಲಿ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು ಹೈಕಮಾಂಡ್ ಯಾರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುತ್ತದೆಯೋ ಅವರನ್ನು ಎಲ್ಲಾ ಶಾಸಕರು ಒಪ್ಪಬೇಕು ಮತ್ತು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಯತ್ನ ನಡೆಸಬೇಕು’ ಎಂದು ತಾಕೀತು ಮಾಡಿದರು ಎನ್ನಲಾಗಿದೆ.
ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿ. ಕೆ.ಶಿವಕುಮಾರ್ ಹಾಗೂ ಬಳ್ಳಾರಿಯ ಶಾಸಕರು ಪಾಲ್ಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.