ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಿಗ್ ಶಾಕ್ ಕೊಟ್ಟಿದ್ದಾರೆ.
ಶಿವಮೊಗ್ಗ, (ಜ.03): ಕರ್ನಾಟಕ ಸಂಪುಟ ವಿಸ್ತರಣೆಗೆ ಇನ್ನೂ ಮುಹೂರ್ತ ಕೂಡಿ ಬರುತ್ತಿಲ್ಲ. ಶಿವಮೊಗ್ಗ ಕಾರ್ಯಕಾರಣಿ ಸಭೆಯಲ್ಲಿ ಸಂಪುಟಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತೆ ಎಂದು ಕಾದು ಕುಳಿತ್ತಿದ್ದ ಸಚಿವಾಕಾಂಕ್ಷಿಗಳಿಗೆ ಮತ್ತೆ ನಿರಾಸೆಯಾಗಿದೆ. ಅಲ್ಲದೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೂ ಬೇಸರವನ್ನುಂಟು ಮಾಡಿದೆ.
ಹೌದು..ಬಿಜೆಪಿ ಕಾರ್ಯಕಾರಿಣಿ ಸಭೆ ಮುಗಿಯುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯೇ ಆಗಿಲ್ಲ. ಇದು ಸಿಎಂ ಯಡಿಯೂರಪ್ಪ ಅವರ ವಿವೇಚನೆಗೆ ಬಿಟ್ಟದ್ದು ಎಂದು ಸ್ಪಷ್ಟಪಡಿಸಿದರು.
ಆಪ್ತ ನಾಯಕರೊಂದಿಗೆ ಅರುಣ್ ಸಿಂಗ್ ಚರ್ಚೆ: ಬಿಜೆಪಿಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ
ಇದೇ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅರುಣ್ ಸಿಂಗ್, ಲೀಡರ್ಶಿಫ್ ಬದಲಾವಣೆ ಅನಗತ್ಯ ಚರ್ಚೆ. ಯಡಿಯೂರಪ್ಪ ಅವರೇ ರಾಜ್ಯದ ನಾಯಕರು, ಅವರೇ ಸಿಎಂ. ಪಕ್ಷದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಸಿಎಂ ಯಡಿಯೂರಪ್ಪ ಅವರೇ ಸುಪ್ರೀಂ, ಸಂಪುಟ ಸರ್ಜರಿ ಬಗ್ಗೆ ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಮುಂದಿನ ವಾರ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗಲಿದ್ದು, ಆ ಬಳಿಕ ಸಂಪುಟ ವಿಸ್ತರಣೆಯೋ ಅಥವಾ ಸಂಪುಟ ಪುನಾರಚನೆಯೋ ಎನ್ನುವುದಕ್ಕೆ ಸ್ಪಷ್ಟ ಚಿತ್ರಣ ಸಿಗಲಿದೆ. ಅಲ್ಲಿಯವರೆಗೂ ಯಾವುದೇ ವಿಸ್ತರಣೆಯೂ ಇಲ್ಲ. ಪುನಾರಚನೆಯೂ ಇಲ್ಲ. ಇದರಿಂದ ಮತ್ತೆ ಸಚಿವಾಕಾಂಕ್ಷಿಗಳು ಅಲ್ಲಿವರೆಗೂ ಕಾಯಲೇಬೇಕಿದೆ.
ಇನ್ನು ಬೇಗ ಸಚಿವ ಸಂಪುಟನೋ, ವಿಸ್ತರಣೆನೋ ಮಾಡಬೇಕೆಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತುದಿಗಾಲಲ್ಲಿ ನಿಂತಿದ್ದಾರೆ. ಅಲ್ಲದೇ ಈ ಬಗ್ಗೆ ದೆಹಲಿಗೆ ಹೋಗಿ ಬಂದರೂ ಯಾವುದೇ ಪ್ರಯೋಜನೆಯಾಗಿಲ್ಲ. ಇದೀಗ ಅರುಣ್ ಸಿಂಗ್ ಹೀಗೆ ಹೇಳಿರುವುದು ಸಿಎಂಗೆ ಮತ್ತಷ್ಟು ಬೇಸರ ತರಿಸಿದೆ.