ಈ ಸಲಹೆ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡದ ಬಿಜೆಪಿ ನಾಯಕರು, ಈ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಬುಧವಾರ ಪಕ್ಷದ ನಿಲುವನ್ನು ತಿಳಿಸುವ ಸಾಧ್ಯತೆಯಿದೆ. ಹೀಗಾಗಿ, ಈಗ ಜೆಡಿಎಸ್ ನೀಡಿರುವ ಸಲಹೆಯನ್ನು ಪರಿಗಣಿಸಿ ಪಾದಯಾತ್ರೆ ಮುಂದೂಡುತ್ತಾರೆಯೋ?, ಅಥವಾ ನಿಗದಿಯಾಗಿರುವಂತೆ ಶನಿವಾರದಿಂದಲೇ ಆರಂಭಿಸಲು ಮುಂದಾಗುತ್ತಾರೋ? ಎಂಬುದನ್ನು ಕಾದು ನೋಡಬೇಕಾಗಿದೆ.
ಬೆಂಗಳೂರು(ಜು.31): ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆ ಮತ್ತು ಮಳೆಯ ಅವಾಂತರಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆ.3ರಿಂದ (ಶನಿವಾರ) ಬೆಂಗಳೂರಿನಿಂದ ಮೈಸೂರಿಗೆ ನಡೆಸಲು ಉದ್ದೇಶಿಸಿರುವ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಜೆಡಿಎಸ್, ಮಿತ್ರ ಪಕ್ಷ ಬಿಜೆಪಿಗೆ ಸಲಹೆ ನೀಡಿದೆ.
ಆದರೆ, ಈ ಸಲಹೆ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡದ ಬಿಜೆಪಿ ನಾಯಕರು, ಈ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಬುಧವಾರ ಪಕ್ಷದ ನಿಲುವನ್ನು ತಿಳಿಸುವ ಸಾಧ್ಯತೆಯಿದೆ. ಹೀಗಾಗಿ, ಈಗ ಜೆಡಿಎಸ್ ನೀಡಿರುವ ಸಲಹೆಯನ್ನು ಪರಿಗಣಿಸಿ ಪಾದಯಾತ್ರೆ ಮುಂದೂಡುತ್ತಾರೆಯೋ?, ಅಥವಾ ನಿಗದಿಯಾಗಿರುವಂತೆ ಶನಿವಾರದಿಂದಲೇ ಆರಂಭಿಸಲು ಮುಂದಾಗುತ್ತಾರೋ? ಎಂಬುದನ್ನು ಕಾದು ನೋಡಬೇಕಾಗಿದೆ.
ಮುಡಾದಲ್ಲಿ ಹಗರಣ ನಡೆದಿಲ್ಲ; ಸಿಎಂ ಅವರೇ ಸ್ಪಷ್ಟಪಡಿಸಿದ್ದಾರೆ: ಗೃಹಸಚಿವ ಪರಮೇಶ್ವರ್
ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಮಳೆ ಅವಾಂತರಗಳು ಹೆಚ್ಚಾಗಿವೆ. ಪ್ರಕೃತಿ ಈಗ ವಿಕೋಪಕ್ಕೆ ತಿರುಗಿದೆ. ರಾಜ್ಯದಲ್ಲಿ ಮಳೆ ಅಬ್ಬರದಿಂದ ಸಾಕಷ್ಟು ಪ್ರಮಾಣದಲ್ಲಿ ಅನಾಹುತಗಳು ನಡೆದಿವೆ. ಹೀಗಾಗಿ, ಮಳೆ ಕಡಿಮೆಯಾದ ನಂತರ, ಎಲ್ಲಾ ಅನುಕೂಲ ಪರಿಸ್ಥಿತಿಗಳನ್ನು ನೋಡಿಕೊಂಡು ಪಾದಯಾತ್ರೆ ಮಾಡಬಹುದು ಎಂದು ಜೆಡಿಎಸ್ ಅಭಿಪ್ರಾಯಪಟ್ಟಿದೆ.
2 ದಿನದಲ್ಲಿ ನಿಲುವು ಬದಲು:
ಎರಡು ದಿನಗಳ ಹಿಂದೆ ಭಾನುವಾರ ಉಭಯ ಪಕ್ಷಗಳ ಹಿರಿಯ ನಾಯಕರನ್ನೊಳಗೊಂಡ ಸಮನ್ವಯ ಸಭೆಯಲ್ಲಿ ಪಾದಯಾತ್ರೆ ಬಗ್ಗೆ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿತ್ತು. ಮಂಗಳವಾರದ ಹೊತ್ತಿಗೆ ಜೆಡಿಎಸ್ ನಾಯಕರ ನಿಲುವು ಬದಲಾಗಿದ್ದು, ಪಕ್ಷದ ಕೋರ್ ಕಮಿಟಿ ಸಭೆ ನಡೆಸಿ ಮುಂದೂಡುವಂತೆ ಮನವಿ ಮಾಡಲು ನಿರ್ಣಯ ಕೈಗೊಂಡಿದ್ದಾರೆ.
ಕೋರ್ ಕಮಿಟಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಮಿಟಿ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಜಿ.ಟಿ.ದೇವೇಗೌಡ, ಶಿರೂರು ಗುಡ್ಡ ಕುಸಿದಾಗ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಕರ್ನಾಟಕದ ಅರ್ಧ ಭಾಗ ಈಗ ಮಳೆಯಿಂದ ಹಾನಿಯಾಗಿದೆ. ಇಂಥ ಸಂದರ್ಭದಲ್ಲಿ ಜನರನ್ನು ಹಾಗೂ ರೈತರನ್ನು ಬಿಟ್ಟು ಬರಲು ಆಗುತ್ತಿಲ್ಲ. ಈ ಆಪತ್ಕಾಲದಲ್ಲಿ ಜನರ ಜೊತೆಗೆ ಇರಬೇಕು ಎಂಬುದಾಗಿ ಪಾದಯಾತ್ರೆ ಮಾರ್ಗದಲ್ಲಿರುವ ಜಿಲ್ಲೆಗಳ ನಮ್ಮ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಮಂಡ್ಯ, ಮೈಸೂರು ಭಾಗದ ರೈತರು ಭತ್ತ ಬೆಳೆಯುವ ಸಂದರ್ಭ ಇದು. ಹೀಗಾಗಿ, ನಾಯಕರೆಲ್ಲ ಈ ಪಾದಯಾತ್ರೆ ಮುಂದೂಡೋಣ ಎಂದು ಕುಮಾರಸ್ವಾಮಿ ಮತ್ತು ನನ್ನ ಮೇಲೆ ಒತ್ತಡ ಹಾಕಿದ್ದಾರೆ. ಮಳೆ ಪರಿಸ್ಥಿತಿ ತಿಳಿಯಾದ ಮೇಲೆ ಪಾದಯಾತ್ರೆ ಮಾಡೋಣ. ಬಿಡದಿಯಿಂದ ಪಾದಯಾತ್ರೆ ಮಾಡೋಣ ಎಂಬ ಸಲಹೆಯನ್ನು ಮುಖಂಡರು ನೀಡಿದ್ದಾರೆ. ಅದನ್ನೇ ಕೋರ್ ಕಮಿಟಿಯಲ್ಲಿ ಚರ್ಚೆ ಮಾಡಿದ್ದೇವೆ. ಈ ವಿಷಯವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿಳಿಸುತ್ತೇವೆ. ಅಲ್ಲದೆ, ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಪಾದಯಾತ್ರೆಯ ದಿನಾಂಕವನ್ನು ಮುಂದೂಡುವಂತೆ ಮನವಿ ಮಾಡುತ್ತೇವೆ ಎಂದರು.
ಎಚ್‌ಡಿಕೆ ಕೂಡಾ ಇರಲ್ಲ:
ಕುಮಾರಸ್ವಾಮಿ ಅವರು ಸಂಸತ್ ಅಧಿವೇಶನದಲ್ಲಿ ಇರುತ್ತಾರೆ. ಅವರು, ಇಲ್ಲದೆ ಈ ಪಾದಯಾತ್ರೆ ಯಶಸ್ವಿ ಆಗಲ್ಲ. ಕುಮಾರಸ್ವಾಮಿ ಅವರಿಲ್ಲದೇ ನಾವು ಪಾದಯಾತ್ರೆಯಲ್ಲಿ ಭಾಗವಹಿಸಲು ಹೇಗೆ ಸಾಧ್ಯ ಎಂಬುದಾಗಿಯೂ ಜಿಲ್ಲಾ ಮುಖಂಡರು ಹೇಳಿದ್ದಾರೆ. ಯಡಿಯೂರಪ್ಪ, ವಿಜಯೇಂದ್ರ ಅವರಿಗೆ ಈ ವಿಚಾರ ತಿಳಿಸಿ ಅಂತ ನಮ್ಮ ನಾಯಕರಿಗೆ ಹೇಳಿದ್ದೇವೆ. ಸ್ಥಳೀಯ ನಾಯಕರ ಅಭಿಪ್ರಾಯ ಪಡೆಯದೇ ಈ ತೀರ್ಮಾನ ಮಾಡಲಾಗಿತ್ತು. ಹಾಗಾಗಿ, ಈಗ ಈ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಮಳೆಯಿಂದಾಗಿ ರಾಜ್ಯದಲ್ಲಿ ಸರಣಿ ಅನಾಹುತಗಳು ಸಂಭವಿಸುತ್ತಿವೆ. ಕೇರಳದಲ್ಲಿ ಭೂಕುಸಿತ ಉಂಟಾಗಿ ಸಾಕಷ್ಟು ಸಾವು-ನೋವು ಉಂಟಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಇದೇ ರೀತಿಯ ದುರಂತ ನಡೆದಿದೆ. ಅನೇಕ ಕಡೆ ಜೀವ ಹಾನಿ, ಆಸ್ತಿ-ಪಾಸ್ತಿಗೆ ಹಾನಿ ಆಗಿದೆ. ಪಾದಯಾತ್ರೆಗೆ ಸಾವಿರಾರು ಜನ ಬರುತ್ತಾರೆ. ಆ ಸಂದರ್ಭದಲ್ಲಿ ಇದೇ ರೀತಿ ಧಾರಾಕಾರ ಮಳೆ ಸುರಿದರೆ ಕಷ್ಟವಾಗುತ್ತದೆ. ಪ್ರಕೃತಿ ನಿಯಂತ್ರಣ ನಮ್ಮ ಕೈಯಲಿಲ್ಲ. ಪಾದಯಾತ್ರೆಗೆ ಬರುವ ಜನರ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬೇಕು. ಈ ಎಲ್ಲಾ ಆಯಾಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದೆ ಎಂದರು.
ಸುಳ್ಳು ಸಂಶೋಧಕ ಸಿದ್ದರಾಮಯ್ಯನವರೇ, ನಿಮ್ಮ ಮುಖದ ಮೇಲಿನ ಕೊಳಕನ್ನು ನನ್ನ ಮೇಲೆ ಸಿಡಿಸಬೇಡಿ: ಹೆಚ್.ಡಿ. ಕುಮಾರಸ್ವಾಮಿ
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸಿ.ಬಿ.ಸುರೇಶ್ ಬಾಬು, ಮಾಜಿ ಸಚಿವರಾದ ಸಾ.ರಾ.ಮಹೇಶ್, ಎಚ್.ಕೆ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಮಂಜೇಗೌಡ, ಟಿ.ಎ.ಜವರಾಯಿ ಗೌಡ, ಮಾಜಿ ಶಾಸಕರಾದ ವೈ.ಎಸ್.ವಿ ದತ್ತ, ಸುರೇಶ್ ಗೌಡ , ರವೀಂದ್ರ ಶ್ರೀಕಂಠಯ್ಯ, ಡಾ.ಕೆ.ಅನ್ನದಾನಿ, ದೊಡ್ಡನಗೌಡ ಪಾಟೀಲ್, ವೀರಭದ್ರಪ್ಪ ಹಾಲರವಿ, ತಿಮ್ಮರಾಯಪ್ಪ ಸೇರಿ ಕೋರ್ ಕಮಿಟಿ ಸದಸ್ಯರು, ಪ್ರಮುಖ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.
ಮುಡಾ ವಿಚಾರ ಸಂಬಂಧ ಕಾಂಗ್ರೆಸ್ ವಿರುದ್ಧದ ಹೋರಾಟವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಜನರ ಹಿತಾಸಕ್ತಿ ಹಿನ್ನೆಲೆಯಲ್ಲಿ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡುವುದು ಒಳಿತು ಎಂಬುದು ಕೋರ್ ಕಮಿಟಿಯ ನಿರ್ಣಯ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.