ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಟಿಡಿ ಹಣ ಪಡೆದಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಅವರು ಸ್ಪಷ್ಟನೆ ನೀಡಿದ್ದಾರೆ.
ಮೈಸೂರು, (ಡಿ.01): ಸಿದ್ದರಾಮಯ್ಯ ಅವರಿಗೆ ಜಿ.ಟಿ. ದೇವೇಗೌಡ ಏನು ಅಂತಾ 25 ವರ್ಷದಿಂದ ಗೊತ್ತಿದೆ. ಈ 25 ವರ್ಷದಲ್ಲಿ ವರ್ಗಾವಣೆ, ಕಾಮಗಾರಿ, ಯಾವುದೇ ರೂಪದಲ್ಲಿ ದುಡ್ಡು ಪಡೆದಿರುವುದಾಗಿ ಹೇಳಲಿ ಅದನ್ನ ಸಾಬೀತುಪಡಿಸಲಿ. ಆಗ ನಾನು ರಾಜಕಾರಣದಲ್ಲೇ ಇರುವುದಿಲ್ಲ ಎಂದು ಸಿದ್ದರಾಮಯ್ಯಗೆ ಜಿಟಿ ದೇವೇಗೌಡ ತಿರುಗೇಟು ಕೊಟ್ಟಿದ್ದಾರೆ.
ಜಿ.ಟಿ.ದೇವೇಗೌಡ ನಮ್ಮಿಂದಲೇ ಹಣ ಪಡೆದು ಬಿಜೆಪಿ ಪರ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗಂಭೀರ ಆರೋಪ ಮಾಡಿದ್ದರು.
ಜಿಟಿಡಿ ನಮ್ಮಿಂದ ಹಣ ಪಡೆದು ಬಿಜೆಪಿ ಪರ ಕೆಲಸ ಮಾಡಿದರು: ಹೊಸ ಬಾಂಬ್
ಇನ್ನು ಈ ಬಗ್ಗೆ ಮೈಸೂರಿನಲ್ಲಿಂದು ಪ್ರತಿಕ್ರಿಯಿಸಿದ್ದು, ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಜೊತೆ ಮಾತನಾಡಿದ್ದೆ. ನಮ್ಮ ಮುಖಂಡರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬೆಂಬಲಿಸುವಂತೆ ಹೇಳಿದ್ದರು. ಬೂತ್ ಖರ್ಚು ವ್ಯವಸ್ಥೆಗಾಗಿ ಯತೀಂದ್ರ ಹಾಗೂ ನಮ್ಮ ಪಕ್ಷದ ರಾಜು ಹಣ ವಿತರಣೆ ಮಾಡಿದರು. ಚುನಾವಣೆಯಲ್ಲಿ ನಾನು ಹಣಕಾಸಿನ ವ್ಯವಹಾರ ಮಾಡಿಲ್ಲ. ನಾನು ವೈಯಕ್ತಿಕವಾಗಿ ಹಣ ನೀಡಿಲ್ಲ. ಅವರು ಸಹ ನನಗೆ ಹಣ ನೀಡಿಲ್ಲ. ಸ್ಪಷ್ಟವಾಗಿ ಆತ್ಮಸಾಕ್ಷಿಯಾಗಿ ನಾನು ಇದನ್ನು ಹೇಳುತ್ತಿದ್ದೇನೆ. ಸಿದ್ದರಾಮಯ್ಯ ತಮ್ಮ ಹೇಳಿಕೆಗೆ ವಿವರಣೆ ನೀಡಬೇಕಿದೆ ಎಂದು ಜಿಟಿಡಿ ಸ್ಪಷ್ಟಪಡಿಸಿದರು.
ಕಳೆದ ಲೋಕಸಭೆ ಚುನಾವಣೆ ವಿಚಾರದಲ್ಲಿ ಮೈಸೂರು, ಮಂಡ್ಯ, ತುಮಕೂರಿನ ಸೋಲು ಅನುಮಾನಗಳಿಗೆ ಕಾರಣವಾಗಿತ್ತು. ಆ ಚುನಾವಣೆಯಲ್ಲಿ ಜನರೇ ಅಭ್ಯರ್ಥಿಗಳನ್ನು ಸೋಲಿಸಿದ್ದು. ಹಣವಾಗಲಿ, ಮುಖಂಡರಾಗಲಿ ಯಾರನ್ನು ಸೋಲಿಸಲಿಲ್ಲ. ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಆಗಲಿಲ್ಲ. ದಿಢೀರ್ ಹೊಂದಾಣಿಕೆ ಆದ್ದರಿಂದ ಅದು ಕೆಲಸ ಮಾಡಲಿಲ್ಲ ಎಂದರು.
ಮೋದಿ ಹವಾದಿಂದ ಎಲ್ಲರೂ ಗೆದ್ದಿದ್ದಾರೆ. ಮೋದಿಯ ಹುಚ್ಚು ಹೊಳೆಯಿಂದ ಗೆಲ್ಲದವರು ಗೆದ್ದಿದ್ದಾರೆ. ಗೆಲ್ಲುವವರೆಲ್ಲಾ ಸೋತಿದ್ದಾರೆ. ಇದಕ್ಕೆ ಬೇರೆ ಯಾರು ಕಾರಣ ಅಲ್ಲ, ಇದನ್ನ ಸಿದ್ದರಾಮಯ್ಯ ಒಬ್ಬರೇ ಅಲ್ಲ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.