ಜೆಡಿಎಸ್‌ ಮುಖಂಡ ಕಾಂಗ್ರೆಸ್‌ ಸೇರ್ಪಡೆ : ಮತ್ತೆ 3000 ಮಂದಿ ಶೀಘ್ರ ಕೈಗೆ

By Kannadaprabha News  |  First Published Nov 19, 2020, 8:52 AM IST

ಪ್ರಮುಖ ಜೆಡಿಎಸ್ ಮುಖಂಡರೋರ್ವರು ಕಾಂಗ್ರೆಸ್ ಸೇರ್ಪಡೆಯಾಗಿದ್ದು  ಶೀಘ್ರದಲ್ಲೇ ಸಾವಿರಾರು ಮಂದಿ ಸೇರುವ ಸುಳಿವು ನೀಡಿದ್ದಾರೆ


ಬೆಂಗಳೂರು (ನ.19):  ಬಸವಕಲ್ಯಾಣದ ಜೆಡಿಎಸ್‌ ಮುಖಂಡ ಎಚ್‌.ಪಿ.ಸುಬ್ಬಾರೆಡ್ಡಿ ಅವರು  ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆಗೊಂಡರು. ನಗರದ ಕ್ವೀನ್ಸ್‌ ರಸ್ತೆಯ ಪಕ್ಷದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅವರಿಗೆ ಪಕ್ಷದ ಬಾವುಟ ನೀಡಿ ಕಾಂಗ್ರೆಸ್‌ ನಾಯಕರು ಬರಮಾಡಿಕೊಂಡರು.

ಈ ವೇಳೆ ಮಾತನಾಡಿದ ಈಶ್ವರ್‌ ಖಂಡ್ರೆ ಅವರು, ಸುಬ್ಬಾರೆಡ್ಡಿ ಅವರು ಕಾಂಗ್ರೆಸ್‌ ಸೇರಿದ್ದು ಪಕ್ಷಕ್ಕೆ ಮತ್ತಷ್ಟುಬಲ ಬಂದಂತಾಗಿದೆ. ನ.28ರಂದು ಅವರು ಬಸವಕಲ್ಯಾಣದಲ್ಲಿ ಬೃಹತ್‌ ಸಮಾರಂಭದ ಮೂಲಕ ತಮ್ಮ ಬೆಂಬಲಿಗರನ್ನು ಕಾಂಗ್ರೆಸ್‌ಗೆ ಕರೆತರಲಿದ್ದಾರೆ. ಸುಬ್ಬಾರೆಡ್ಡಿ ಅವರೇ ಹೇಳುವ ಪ್ರಕಾರ ಜೆಡಿಎಸ್‌ ಹಾಗೂ ಬಿಜೆಪಿಯಿಂದ ಸುಮಾರು 3 ಸಾವಿರ ಮಂದಿ ಅಂದು ಕಾಂಗ್ರೆಸ್‌ ಸೇರಲಿದ್ದಾರೆ. ಬಸವಕಲ್ಯಾಣ ಕ್ಷೇತ್ರದಲ್ಲಿ ಪಕ್ಷದ ಟಿಕೆಟ್‌ ವಿಚಾರವಾಗಿ ನಾರಾಯಣರಾವ್‌ ಕುಟುಂಬದೊಂದಿಗೆ ಮಾತನಾಡುತ್ತೇನೆ. ನ.28ರಂದು ಈ ಬಗ್ಗೆ ಮತ್ತೊಂದು ಸಭೆ ಮಾಡಿ ನಡೆಸಿ ಎಲ್ಲರ ಒಪ್ಪಿಗೆ ಪಡೆದು ಒಮ್ಮತದ ಅಭ್ಯರ್ಥಿಯನ್ನೇ ಕಣಕ್ಕಿಳಿಸುತ್ತೇವೆ ಎಂದರು.

Tap to resize

Latest Videos

ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಕಲ್ಯಾಣಕ್ಕೆ ವಿಜಯೇಂದ್ರ ಅಷ್ಟೇ ಅಲ್ಲ ಯಾರೇ ಬರಲಿ ಏನೂ ಮಾಡಲಾಗುವುದಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಶಕ್ತಿ ನಮಗಿದೆ ಎಂದರು.

ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆ? ...

ಎಚ್‌.ಪಿ.ಸುಬ್ಬಾರೆಡ್ಡಿ ಮಾತನಾಡಿ, 2005ರಿಂದ ಜೆಡಿಎಸ್‌ ಪಕ್ಷಕ್ಕೆ ನಿಷ್ಠನಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದೆ. ಪ್ರತಿ ಹಳ್ಳಿಗೂ ತೆರಳಿ ಪಕ್ಷವನ್ನು ಕಟ್ಟುವ ಕೆಲಸ ಮಾಡಿದ್ದೇನೆ. ಆದರೆ ಕಳೆದ ಚುನಾವಣೆಯಲ್ಲಿ ಮರಾಠ ಮತಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಜೆಡಿಎಸ್‌ ನನ್ನ ಬದಲು ಪಿಜಿಆರ್‌ ಸಿಂಧ್ಯ ಅವರಿಗೆ ಟಿಕೆಟ್‌ ನೀಡಿತ್ತು. ಇದರಿಂದ ಬೇಸರಗೊಂಡು ಪರೋಕ್ಷವಾಗಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಬಿ.ನಾರಾಯಣರಾವ್‌ ಪರ ಕಾರ್ಯನಿರ್ವಹಿಸಿ ಅವರ ಗೆಲುವಿಗೆ ಕಾರಣನಾಗಿದ್ದೆ. ಜೆಡಿಎಸ್‌ನ ವ್ಯವಸ್ಥೆಯನ್ನು ಧಿಕ್ಕರಿಸಿ ಇದೀಗ ಯಾವುದೇ ಆಕಾಂಕ್ಷೆ ಇಲ್ಲದೆ ಕಾಂಗ್ರೆಸ್‌ ಸೇರ್ಪಡೆಯಾಗಿದ್ದೇನೆ. ಉಪ ಚುನಾವಣೆಯಲ್ಲಿ ಪಕ್ಷ ಟಿಕೆಟ್‌ ಕೊಟ್ಟರೆ ಗೆದ್ದು ಬರುವ ಸಾಮರ್ಥ್ಯ ನನಗಿದೆ ಎಂದರು.

ನಿಗಮಕ್ಕೆ 5 ಸಾವಿರ ಕೋಟಿ ರು. ಕೊಡಿ

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಘೋಷಿಸಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ. ಆದರೆ ಬರೀ ನಿಗಮ ಘೋಷಿಸಿದ್ದಾರೆ, ಅನುದಾನ ಘೋಷಿಸಿಲ್ಲ. ಕೂಡಲೇ ಸರ್ಕಾರ 5000 ಕೋಟಿ ರು. ಅನುದಾನ ನೀಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಇದೇ ವೇಳೆ ಆಗ್ರಹಿಸಿದರು.

ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಹಿಂದುಳಿದ ಸಮುದಾಯಗಳಂತೆ ವೀರಶೈವ ಲಿಂಗಾಯತ ಸಮುದಾಯ ಕೂಡ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದೆ. ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ಪ್ರತ್ಯೇಕ ನಿಗಮ ಸ್ಥಾಪಿಸಿದ್ದು ಸರಿಯಾಗಿದೆ. ಈ ಕೆಲಸ ಹಿಂದೆಯೇ ಆಗಬೇಕಿತ್ತು, ತಡವಾಗಿ ಆಗಿದೆ ಎಂದು ಹೇಳಿದರು.

click me!