
ಬೆಂಗಳೂರು (ಜೂ.24): ಆಡಳಿತಾರೂಢ ಬಿಜೆಪಿಗೆ ಅಧಿಕಾರ ದಾಹ ಹೆಚ್ಚಾಗಿದ್ದು, ಬೇರೆ ಪಕ್ಷ ಅಧಿಕಾರದಲ್ಲಿ ಇರುವುದನ್ನು ಅದಕ್ಕೆ ಸಹಿಸುವುದಕ್ಕೆ ಆಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯ ಅಧಿಕಾರ ದಾಹ ಎಷ್ಟುಕೆಟ್ಟದಾಗಿದೆ ಎಂದರೆ ಮುಂದಿನ ದಿನದಲ್ಲಿ ಸ್ಪಷ್ಟ ಬಹುಮತ ಬಂದ ಸರ್ಕಾರವೂ ಉಳಿಯುವುದು ಅನುಮಾನ. ಪೂರ್ಣ ಬಹುಮತ ಪಡೆದ ಇತರೆ ಯಾವುದೇ ಪಕ್ಷದ ಸರ್ಕಾರ ಅವಧಿ ಮುಗಿಸುವುದಕ್ಕೂ ಬಿಡುವುದಿಲ್ಲ ಎನ್ನಿಸುತ್ತದೆ.
ಮೇಲ್ನೋಟಕ್ಕೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಶಾಸಕರ ವಿಶ್ವಾಸ ಗಳಿಸಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಅದರ ಹಿಂದೆ ಇರುವುದು ಬಿಜೆಪಿಯೇ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಕಿಡಿಕಾರಿದರು. ಕರ್ನಾಟಕದಲ್ಲಿ ನನಗೂ ಇದರ ಅನುಭವ ಆಗಿದೆ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ನನ್ನ ಮೇಲೂ ಆರೋಪ ಮಾಡಿದರು. ಶಾಸಕರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಸುಳ್ಳು ಪ್ರಚಾರ ಮಾಡಿದರು. ಕಾಂಗ್ರೆಸ್ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ 19 ಸಾವಿರ ಕೋಟಿ ರು. ಕೊಟ್ಟಿದ್ದೇನೆ.
ಮುಂಬರುವ ಎಲೆಕ್ಷನ್‌ನಲ್ಲಿ ಕುಮಾರಸ್ವಾಮಿ ಯಾವ ಕ್ಷೇತ್ರದಿಂದ ಸ್ಪರ್ಧೆ?: ಎಚ್‌ಡಿಕೆ ಹೇಳಿದ್ದಿಷ್ಟು
ಆ ಪಕ್ಷದ ಶಾಸಕಾಂಗ ಪಕ್ಷದ ನಾಯಕರಿಗೆ ಆ ಮಾಹಿತಿ ಇದ್ದ ಪಟ್ಟಿಯನ್ನು ನೀಡಿದ್ದೆ. ಆದರೂ ಶಾಸಕರನ್ನು ಆಪರೇಷನ್ ಕಮಲ ಮಾಡಿ ಸರ್ಕಾರವನ್ನು ತೆಗೆದರು ಎಂದು ಬೇಸರ ವ್ಯಕ್ತಪಡಿಸಿದ ಅವರು, ಮಹಾರಾಷ್ಟ್ರದ ಬಿಜೆಪಿ ನಡವಳಿಕೆ ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರ. ಈ ಅನಾಚಾರವನ್ನು ಬಿಜೆಪಿ ದೇಶವ್ಯಾಪಿ ವಿಸ್ತಾರ ಮಾಡುತ್ತಿದೆ. ಸಂವಿಧಾನ ರಕ್ಷಣೆ ಎನ್ನುವುದು ಇವತ್ತು ಉಳಿದಿಲ್ಲ. ಎಷ್ಟೇ ಒಳ್ಳೆಯ ಸರ್ಕಾರ ಮಾಡಿದರೂ ಬೆಲೆ ಇಲ್ಲದಂತಾಗಿದೆ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿಗೆ ಚುನಾವಣೆ ಹತ್ತಿರವಾದಂತೆ ಕರ್ನಾಟಕ ನೆನಪಾಗಿದೆ: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಧಾನಿ ಮೋದಿಗೆ ಕರ್ನಾಟಕ ನೆನಪಿಗೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು. ಮರಳವಾಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೇರೊಬ್ಬರು ಮಾಡಿದ ಕೆಲಸವನ್ನು ತಮ್ಮದೆಂದು ಬಿಂಬಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ ಎಂದು ಟೀಕಿಸಿದರು. ಪ್ರಧಾನಿ ಮೋದಿ ಅವರಿಗೆ ಪ್ರೊಗ್ರೆಸ್ ರಿಪೋರ್ಟ್ ಕೊಡಲಾಗಿದೆ. ಅದರಲ್ಲಿ 33 ಸಾವಿರ ಕೋಟಿ ರು. ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಿದರು ಎಂದು ಹೇಳುತ್ತಿದ್ದಾರೆ.
‘ಜನತಾ ಮಿತ್ರ’ ಕಾರ್ಯಕ್ರಮ ಜು.1ಕ್ಕೆ ಮುಂದೂಡಿಕೆ: ಎಚ್‌ಡಿಕೆ
ಮೋದಿ ಅವರು ತಾವೇ ರೂಪಿಸಿದ ಹೊಸ ಯೋಜನೆಗಳಿಗೆ ಚಾಲನೆ ನೀಡಿದರೋ ಅಥವಾ ಹಿಂದಿನ ಸರ್ಕಾರಗಳು ರೂಪಿಸಿದ್ದ ಯೋಜನೆಗಳಿಗೆ ಚಾಲನೆ ನೀಡಿದರೋ ಎಂಬುದನ್ನು ಬಿಜೆಪಿ ನಾಯಕರು ಜನರಿಗೆ ತಿಳಿಸಬೇಕು ಎಂದರು. ಪ್ರಧಾನಿಯವರು ಉಪನಗರ ರೈಲು ಬಗ್ಗೆ ಮಾತನಾಡಿದ್ದಾರೆ. 2018ರಲ್ಲಿ ಅಧಿಕಾರಕ್ಕೆ ಬರುವವರೆಗೆ ಈ ಯೋಜನೆ ಧೂಳು ಹಿಡಿಯುತ್ತಿತ್ತು. ನಾನು 14 ತಿಂಗಳು ಸಿಎಂ ಆಗಿದ್ದಾಗ ರೇಲ್ವೆ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೆ. ಇದಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೂ ಸಹಕಾರ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.