ನೆಲಮಂಗಲ ಬಳಿ JDS ಬೃಹತ್ ಸಮಾವೇಶ, HDK ಸ್ಥಳ ಪರಿಶೀಲನೆ

By Suvarna NewsFirst Published May 10, 2022, 5:21 PM IST
Highlights
  • ಜನತಾ ಜಲಧಾರೆ ಸಮಾರೋಪ,  ಸಿದ್ಧತೆ ಪರಿಶೀಲನೆ ನಡೆಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ
  • ಸಮಾವೇಶದಲ್ಲಿ ಗಂಗಾ ಪೂಜೆ & ಗಂಗಾ ಆರತಿ; ನೀರಾವರಿ ಯೋಜನೆಗಳ ಜಾರಿಗೆ ಸಂಕಲ್ಪ
  • 4-5 ಲಕ್ಷ ಜನರು ಭಾಗಿ, ಹೆಚ್.ಡಿ.ದೇವೇಗೌಡರ ಉಪಸ್ಥಿತಿ

ವರದಿ : ಟಿ.ಮಂಜುನಾಥ್, ಹೆಬ್ಬಗೋಡಿ ಏಷ್ಯಾನೆಟ್ ಸುವರ್ಣನ್ಯೂಸ್

ನೆಲಮಂಗಲ (ಮೇ.10) : 2023ಕ್ಕೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗಳಿಗಾಗಿ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ರಾಜಕೀಯ ಚಟುವಟಿಕೆ ಗರಿಗೆದರಿವೆ, ವಿವಿಧ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಎಲ್ಲಾ ತಂತ್ರಗಳನ್ನು ಹಣಿಯುತ್ತಿದ್ದಾರೆ, ಈ ನಿಟ್ಟಿನಲ್ಲಿ ಜೆಡಿಎಸ್ ಕೂಡ ಜನತಾ ಜಲಧಾರೆ ಮೂಲಕ ಪಕ್ಷದ ಸಂಘಟನೆ ಮತ್ತು ಮತದಾರರನ್ನಾ ತಲುಪುವ ಪ್ರಯತ್ನ ನಡೆಸುತ್ತಿದೆ, ಜನತಾ ಜಲಧಾರೆಯ ಸಮಾರೋಪ ದೊಡ್ಡ ಮಟ್ಟದಲ್ಲಿ ಅಯೋಜಿಸಿದೆ.

Latest Videos

ಕಳೆದ ತಿಂಗಳು 16ರಂದು ಹನುಮ ಜಯಂತಿ ದಿನ ಆರಂಭವಾದ ಜನತಾ ಜಲಧಾರೆ ಕಾರ್ಯಕ್ರಮ ರಾಜ್ಯಾದ್ಯಂತ ಯಸ್ವಿಯಾಗಿ ನಡಿದಿದ್ದು, ಮೇ  13ರಂದು ನೆಲಮಂಗಲ ಸಮೀಪ ಜೆಡಿಎಸ್ ಮಹತ್ವಾಕಾಂಕ್ಷೆಯ 'ಜನತಾ ಜಲಧಾರೆ' ಸಮಾರೋಪ ಸಮಾರಂಭ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು. 

ಆ ಬೃಹತ್ ಸಮಾವೇಶದ ಸಿದ್ಧತೆ ಮತ್ತು ರೂಪುರೇಶೆಗಳ ಬಗ್ಗೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲೇ ಇಂದು ಸುದ್ದಿಗೋಷ್ಠಿ ನಡೆಸಿ ಮಾಜಿ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

ಸಮಾರೋಪ ಸಮಾರಂಭದಲ್ಲಿ ಸುಮಾರು 4-5 ಲಕ್ಷ ಜನ ಸೇರಲಿದ್ದಾರೆ. ಬೆಂಗಳೂರು ನಗರದ ನಾಗರೀಕರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ಬೆಂಗಳೂರು ಹೊರ ವಲಯದಲ್ಲಿ ಸಮಾರೋಪ  ಹಮ್ಮಿಕೊಳ್ಳಲಾಗಿದೆ. ನೆಲಮಂಗಲ ಸಮೀಪದ ಬಾವಿಕೆರೆ ಬಳಿಯ ಬೆಂಗಳೂರು - ಹಾಸನ ಹೆದ್ದಾರಿಯ ಪಕ್ಕದ  ಬೃಹತ್ ಮೈದಾನದಲ್ಲಿ ಮೇ 13ರಂದು ಮಧ್ಯಾಹ್ನ 3 ಗಂಟೆಗೆ ಸಮಾವೇಶ ಆರಂಭವಾಗಲಿದೆ ಎಂದು ತಿಳಿಸಿದರು.

Hubballi-Dharwad 7 ತಿಂಗಳಲ್ಲಿ 75 ಕೆರೆ ನಿರ್ಮಾಣದ ಗುರಿ

ಗಂಗಾ ಆರತಿ ಜಲಾಧಾರೆ ಹೈಲೈಟ್ಸ್ : ಜನತಾ ಜಲಧಾರೆ ಕಾರ್ಯಕ್ರಮದ ಪ್ರಮುಖ ಹೈಲೆಟ್ ಗಂಗಾ ಆರತಿ. ಈ ಬಗ್ಗೆ ಮಾಹಿತಿ ನೀಡಿದ ಕುಮಾರಸ್ವಾಮಿ ಅವರು, ಧರ್ಮದ ದಂಗಲ್ ಹೆಸರಿನಲ್ಲಿ ಸರ್ವ ಜನಾಂಗದ ಶಾಂತಿ ತೋಟದಲ್ಲಿ  ಕೆಲವರು ಅಶಾಂತಿ ಸೃಷ್ಟಿಸುತ್ತಿದ್ದಾರೆ. ನಮ್ಮ ರಾಜ್ಯ ಉತ್ತರ ಪ್ರದೇಶ ಗುಜರಾತ್ ಆಗಲು ಬಿಡಲ್ಲ. ನಮ್ಮ ನೆಲದ ಪರಂಪರೆಗೆ ಧಕ್ಕೆ ಆಗದಂತೆ ಸಮಾವೇಶವನ್ನು ಆಯೋಜಿಸಿದ್ದೇವೆ ಎಂದರು.

ಜಲಧಾರೆ ಕಾರ್ಯಕ್ರಮದಲ್ಲಿ ಸಂಜೆ 6.30 ಗಂಟೆಗೆ ಗಂಗಾ ಆರತಿ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ 20 ಜನ ಪಂಡಿತರ ತಂಡ ವಾರಣಾಸಿಯಿಂದ ಬರುತ್ತಿದ್ದಾರೆ. ಸಮಾವೇಶದಲ್ಲಿ ಈ ಅಂಶ ಬಹಳ ಮಹತ್ವದ್ದು ಎಂದು ಅವರು ತಿಳಿಸಿದರು.

180 ವಿಧಾನಸಭೆ ಕ್ಷೇತ್ರದಲ್ಲಿ ಪ್ರವಾಸ ಮಾಡಲಾಗಿದೆ. ಅಷ್ಟೂ ಕಡೆ ಜಲಧಾರೆ ಕಾರ್ಯಕ್ರಮ ನಡೆದಿದೆ. 15 ಗಂಗಾ ರಥಗಳು ಯಶಸ್ವಿಯಾಗಿ ಸಂಚರಿಸಿವೆ. ಇವುಗಳ ಮೂಲಕ ರಾಜ್ಯದ ಎಲ್ಲಾ ಜೀವ ನದಿಗಳಿಂದ ಸಂಗ್ರಹ ಮಾಡಲಾಗಿರುವ ಪುಣ್ಯಜಲವನ್ನು ಒಂದು ಬೃಹತ್ ಕಲಶಕ್ಕೆ ತುಂಬಿಸಿ ಸಮಾವೇಶದಲ್ಲಿ ಪೂಜೆ ನೆರವೇರಿಸಲಾಗುವುದು ಎಂದರು ಅವರು.

ನಮ್ಮ ರಾಜ್ಯದಲ್ಲಿ ನೀರನ್ನು ಸಂಪೂರ್ಣವಾಗಿ ಬಳಕೆ ಮಾಡಲು ಗಂಗಾ ತಾಯಿ ಆಶೀರ್ವಾದ ಪಡೆಯಲು ಈ‌ ಕಾರ್ಯಕ್ರಮ ಆಯೋಜಿಸಲಾಗಿದೆ. ಆ ಸಮಾವೇಶದಲ್ಲಿ ರಾಜ್ಯದ ಜನತೆ ಐದು ವರ್ಷಗಳ ಸ್ವತಂತ್ರ ಸರಕಾರ ನೀಡಿದರೆ ನಮ್ಮ ಪಕ್ಷದಿಂದ ಕೈಗೊಳ್ಳಲಾಗುವ ನೀರಾವರಿ ಯೋಜನೆಗಳ ಬಗ್ಗೆ ಸಂಕಲ್ಪ ಮಾಡಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

Mandya Rain Effect 90ಕ್ಕೂ ಹೆಚ್ಚು ತೆಂಗಿನಮರ ನೆಲಸಮ, ಕಣ್ಣೀರಿಟ್ಟ ವೃದ್ಧೆ

ರಾಜ್ಯ ಸರ್ಕಾರ ಹಾಗೂ ಎರಡು ರಾಷ್ಟ್ರೀಯ ಪಕ್ಷಗಳು ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಜನರಿಗೆ ಭರವಸೆ ಕೊಟ್ಟರೂ ನಿಗದಿತ ಅವಧಿಯಲ್ಲಿ ಕಾರ್ಯಕ್ರಮ ಮುಗಿಸಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡಿ ಎಂದು ಮನವಿ ಮಾಡಿದ್ದಾರೆ. ಎತ್ತಿನಹೊಳೆ, ಮಹದಾಯಿ ಯೋಜನೆಗೂ ಸಕಾರಾತ್ಮಕ ಸ್ಪಂದನೆ ಸಿಗುತ್ತಿಲ್ಲ. ಯೋಜನೆಗಳನ್ನು ಜಾರಿಗೊಳಿಸದೆ  ಸಬೂಬು ಕೊಟ್ಟು ತಳ್ಳುತ್ತಿದ್ದಾರೆ. ರಾಜ್ಯದ ಸಂಪತ್ತು ದುರ್ಬಳಕೆ ಆಗುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು. 

ನಮ್ಮ ರಾಜ್ಯದಲ್ಲಿ ಸರ್ಕಾರಕ್ಕೆ ಯಾವುದೂ ಅಸಾಧ್ಯ ಇಲ್ಲ. ಸರಿಯಾದ ರೀತಿಯಲ್ಲಿ ನದಿ ನೀರು ಉಪಯೋಗಿಸುವ ಸಂಕಲ್ಪ ಬರಬೇಕು. ಈ ನಿಟ್ಟಿನಲ್ಲಿ ನಮ್ಮ ಪಕ್ಷದ ಸ್ವತಂತ್ರ ಸರ್ಕಾರ ಬಂದರೆ ಐದು ವರ್ಷದಲ್ಲಿ ಎಲ್ಲ ನದಿ ನೀರು ಬಳಕೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ನೀರಿನ ಸಮಸ್ಯೆಯನ್ನು ಸರ್ಕಾರಗಳು ಗಂಭೀರವಾಗಿ ತೆಗೆದುಕೊಂಡಿಲ್ಲ. ಹೀಗೆ ಮುಂದುವರೆದರೆ ಬೆಂಗಳೂರು ನಗರದ ಜನರಿಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ. ಅರ್ಕಾವತಿ ನದಿ ಪುನಶ್ಚೇತನ ಅಂದರು. ಅದು ನಿಂತು ಹೋಯಿತು. ಬೆಂಗಳೂರು ಹಲವು ಕೆರೆಗಳನ್ನು, ರಾಜ ಕಾಲುವೆಗಳನ್ನು  ನುಂಗಿ ಹಾಕಿದ್ದಾರೆ. ಅದನ್ನು ಸರಿಪಡಿಸಬೇಕು.  ಕಳೆದ ಎರಡು ಮೂರು ವರ್ಷಗಳಿಂದ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ಲಘುವಾಗಿ ಚರ್ಚೆ ಮಾಡಿದ್ದಾರೆ. ಅವರಿಗೆ ಉತ್ತರ ಕೊಡುವ ಕಾರ್ಯಕ್ರಮ ಇದಾಗಿದೆ‌ ಎಂದು ಹೇಳಿದರು.

ನೆಲಮಂಗಲ ಮೈದಾನದಿಂದಲೇ 2023ರ ಚುನಾವಣಾ ಪ್ರಚಾರ ಆರಂಭವಾಗಲಿದೆ. ಸಾರ್ವಜನಿಕರಿಗೆ ಅನಾನುಕೂಲ ಆಗದಂತೆ ಬೆಂಗಳೂರಿಂದ ಹಾಸನ , ಶಿವಮೊಗ್ಗ ಕಡೆ ಪ್ರಯಾಣ ಮಾಡುವ ಜನರಿಗೆ ಸ್ವಲ್ಪ ತೊಂದರೆ ಆಗಬಹುದು. ಅದಕ್ಕೆ ಪರ್ಯಾಯ ರಸ್ತೆ ಬಳಕೆ ಮಾಡುವಂತೆ ಮನವಿ ಮಾಡಿದರು.

ಸಮಾವೇಶದಲ್ಲಿ ಭಾಗಿಯಾಗುವ ಎಲ್ಲರಿಗೂ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಲಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು. ಇದೇ ವೇಳೆ ಮಾಜಿ ಮುಖ್ಯಮಂತ್ರಿಗಳು ಸಮಾವೇಶದ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು. ಶಾಸಕರಾದ ಡಾ.ಶ್ರೀನಿವಾಸ ಮೂರ್ತಿ, ಮಂಜುನಾಥ್ ಹಾಗೂ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

click me!