90 ದಿನಗಳ ಒಳಗೆ ಗ್ಯಾರಂಟಿ ಯೋಜನೆ ಜಾರಿಗೆ ಒತ್ತಾಯ, ಸಂಪೂರ್ಣ ಜಾರಿ ಮಾಡದಿದ್ದರೆ ತಾಲ್ಲೂಕು ಹೋಬಳಿ ಮಟ್ಟದಲ್ಲಿ ಸರ್ಕಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ, ಚಿಕ್ಕಮಗಳೂರಿನಲ್ಲಿ ಎಚ್ಚರಿಕೆ ಜೆಡಿಎಸ್ ಪಕ್ಷ ರಾಜ್ಯ ವಕ್ತಾರ ಸುಧಾಕರ್ ಶೆಟ್ಟಿ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಜೂ.24): 90 ದಿನಗಳ ಒಳಗೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಜನರಿಗೆ ನೀಡಿರುವ ಎಲ್ಲಾ ಗ್ಯಾರಂಟಿಗಳನ್ನು ಸಂಪೂರ್ಣ ಜಾರಿ ಮಾಡದಿದ್ದರೆ ತಾಲ್ಲೂಕು ಹೋಬಳಿ ಮಟ್ಟದಲ್ಲಿ ಸರ್ಕಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ ಹಮ್ಮಿಕೊಳ್ಳುತ್ತದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ಸುಧಾಕರ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
undefined
ಇಂದು(ಶನಿವಾರ) ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಮತದಾರರಿಗೆ ಕೊಟ್ಟ ಗ್ಯಾರಂಟಿ ಭರವಸೆಗಳನ್ನು ಸರ್ಕಾರ ಅಸ್ಥಿತ್ವಕ್ಕೆ ಬಂದ ಬಳಿಕ ಅನುಷ್ಠಾನಕ್ಕೆ ತರಲು ಹಲವಾರು ನಿಬಂಧನೆಗಳನ್ನು ವಿಧಿಸುತ್ತಿರುವುದನ್ನು ಖಂಡಿಸಿದರು. 5 ಗ್ಯಾರಂಟಿಗಳನ್ನು ಕೊಡುವಾಗ ಯಾವುದೇ ನಿಬಂಧನೆ ವಿಧಿಸದೆ ಈಗ ಅಧಿಕಾರಕ್ಕೆ ಬಂದ ನಂತರ ನಿಬಂಧನೆಗಳನ್ನು ವಿಧಿಸುತ್ತಿರುವುದು ಸರಿಯಲ್ಲ ಭರವಸೆಗಳನ್ನು ಜನರಿಗೆ ಯಥಾವತ್ತಾಗಿ ಜಾರಿ ಮಾಡಬೇಕೆಂದು ಆಗ್ರಹಿಸಿದರು.
ಕಾರ್ಯಕರ್ತರು ಎದ್ದರೆ ಕಾಂಗ್ರೆಸ್ ಧೂಳಿಪಟವಾಗುತ್ತೆ; ಆರ್.ಅಶೋಕ್
ಅನುಷ್ಠಾನಕ್ಕೆ ತರುವಾಗ ಇಲ್ಲದ ನಿಬಂಧನೆಗಳು :
ಈಗಾಗಲೇ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ವ್ಯಾಪ್ತಿಗೆ 2 ಕೋಟಿ 13 ಲಕ್ಷ ಮನೆಗಳು ಬರುತ್ತದೆ ಆದರೆ ಮನೆ ಯಜಮಾನಿ ಬ್ಯಾಂಕ್ ಖಾತೆಗೆ 2 ಸಾವಿರ ರೂ. ಜಮಾ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್ ಅನುಷ್ಠಾನಕ್ಕೆ ತರುವಾಗ ಇಲ್ಲದ ನಿಬಂಧನೆಗಳನ್ನು ವಿಧಿಸಿ ಸೌಲಭ್ಯದಿಂದ ಜನರು ವಂಚಿತರಾಗುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಜಿಎಸ್‌ಟಿ ನೊಂದಣಿ ಮಾಡಿದವರಿಗೆ ಹಾಗೂ ಆದಾಯ ತೆರಿಗೆ ಪಾವತಿಸುವವರನ್ನು ಗೃಹಲಕ್ಷ್ಮಿ ಯೋಜನೆ ವ್ಯಾಪ್ತಿಯಿಂದ ಕೈ ಬಿಡಲು ಹುನ್ನಾರ ನಡೆಸುತ್ತಿದ್ದಾರೆ ಆದರೆ ಚುನಾವಣೆ ಸಂದರ್ಭದಲ್ಲಿ ಯಾವುದೇ ಷರತ್ತುಗಳಿಲ್ಲದೆ 5 ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದಿದ್ದು ಜಿಎಸ್‌ಟಿ ನೊಂದಣಿ ಆದವರು ಶ್ರೀಮಂತರೆಂಬ ಭಾವನೆ ಸರ್ಕಾರಕ್ಕಿದೆ ಎಂದು ಟೀಕಿಸಿದರು.
ಅಕ್ಕಿ ಕೊಡುತ್ತಿಲ್ಲ ಎಂಬ ದೂರು ಹೇಳುವುದು ಸರಿಯಲ್ಲ :
ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿ ಮಾಡಿದ್ದು, ಆದರೆ ಪಾಸ್ ಪಡೆದವರಿಗೆ ಮಾತ್ರ ಉಚಿತ ಬಸ್ ಪ್ರಯಾಣ ಎಂಬ ನಿಬಂಧನೆಯನ್ನು ಕೈಬಿಟ್ಟು ಕೂಡಲೇ ಎಲ್ಲಾ ವರ್ಗದ ಮಹಿಳೆಯರಿಗೆ ಈ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.ಅನ್ನಭಾಗ್ಯ ಯೋಜನೆಯಡಿ ತಲಾ 10 ಕೆ.ಜಿ ಅಕ್ಕಿ ಕೊಡುತ್ತೇವೆಂದು ಭರವಸೆ ಕೊಟ್ಟಿದ್ದು ಈಗ ಕೊಡಲು ಕೇಂದ್ರ ಸರ್ಕಾರ ನಮಗೆ ಅಕ್ಕಿ ಕೊಡುತ್ತಿಲ್ಲ ಎಂಬ ದೂರು ಹೇಳುವುದು ಸರಿಯಲ್ಲ ಘೋಷಣೆಗೆ ಮುನ್ನ ಸಾಧಕ-ಭಾದಕಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಿತ್ತು ಈಗಾಗಲೇ ರಾಜ್ಯದಲ್ಲಿ ಒಟ್ಟು 1.7 ಕೋಟಿ ಬಿಪಿಎಲ್ ಕುಟುಂಬಗಳಿವೆ ಎಲ್ಲರಿಗೂ ಕೊಟ್ಟ ಮಾತಿನಂತೆ ಅಕ್ಕಿ ವಿತರಿಸಬೇಕೆಂದು ಆಗ್ರಹಿಸಿದರು.ನಿರುದ್ಯೋಗ ಪದವೀಧರರಿಗೆ 3 ಸಾವಿರ ಕೊಡುತ್ತೇವೆಂದು ಹೇಳಿ ಈ ಬಗ್ಗೆ ಚಕಾರವೆತ್ತುತ್ತಿಲ್ಲ ಕೂಡಲೇ ಈ ಹಣವನ್ನು ನಿರುದ್ಯೋಗಿಗಳ ಖಾತೆಗೆ ಜಮಾ ಮಾಡಬೇಕು ನಿರುದ್ಯೋಗ ಸಮಸ್ಯೆ ಬೃಹದಾಕಾರವಾಗಿದ್ದು ರಾಜ್ಯದಲ್ಲಿ 1.90 ಕೋಟಿ ನಿರುದ್ಯೋಗಿಗಳಿದ್ದಾರೆ ಎಂದು ಮಾಹಿತಿ ನೀಡಿದರು.
ಗ್ಯಾರಂಟಿಗಳ ಜಾರಿಗೆ ಸಂಪನ್ಮೂಲ ಕ್ರೂಢೀಕರಿಸಲು ಕಾಲಹರಣ :
ಸರ್ಕಾರದ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿದ್ದರಿಂದ ಶಾಲಾ ವಿದ್ಯಾರ್ಥಿಗಳು ತುಂಬಾ ತೊಂದರೆ ಅನುಭವಿಸುವಂತಾಗಿದೆ. ವಿಶೇಷವಾಗಿ ಶೃಂಗೇರಿ ತಾಲ್ಲೂಕಿನಲ್ಲಿ ಈ ಸಮಸ್ಯೆ ಹೆಚ್ಚಿದ್ದು ಸರ್ಕಾರಿ ಬಸ್ ವ್ಯವಸ್ಥೆ ಇಲ್ಲ ಖಾಸಗಿ ಬಸ್‌ಗಳು ಸಂಚರಿಸುವ ಮಾರ್ಗದಲ್ಲಿ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಬೇಕು ಜೊತೆಗೆ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಸ್ಗಳ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿದರು. ಸರ್ಕಾರ ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಆದ್ಯ ಗಮನ ನೀಡಬೇಕು, ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಬೇಕು ಗ್ಯಾರಂಟಿಗಳ ಜಾರಿಗೆ ಸಂಪನ್ಮೂಲ ಕ್ರೂಢೀಕರಿಸಲು ಕಾಲಹರಣ ಮಾಡದೆ ಎಲ್ಲಾ ಸೌಲಭ್ಯಗಳನ್ನು ನೀಡಲು ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸಿದರು.