* ಹೊರಟ್ಟಿ ಬೆನ್ನಲ್ಲೇ ಜೆಡಿಎಸ್ ಬಹಳಷ್ಟು ನಾಯಕರು ಬಿಜೆಪಿ ಕಡೆ ಒಲವು
* ಮಾಜಿ ಮಾಜಿ ಮುಖ್ಯಮಂತ್ರಿ ಸ್ಫೋಟಕ ಸುಳಿವು
* ಕಾಂಗ್ರೆಸ್, ಜೆಡಿಎಸ್ ಪಕ್ಷದ ಶಾಸಕರು, ಮುಖಂಡರು ಬಿಜೆಪಿಯತ್ತ ವಲಸೆ ಬರಲು ನಿರ್ಧರಿಸಿದ್ದಾರೆ ಎಂದ ಸದಾನಂದ ಗೌಡ
ಮಂಗಳೂರು, (ಏ.03): ಕರ್ನಾಟಕ ವಿಧಾನಸೆ ಚುನಾವಣೆ (Karnataka Assemby Election 2023) ಇನ್ನು ಒಂದು ವರ್ಷ ಬಾಕಿ ಇದೆ. ಆಗಲೇ ಪಕ್ಷಾಂತರ ವರಸೆ ಶುರುವಾಗಿದೆ. ಜೆಡಿಎಸ್‌ನ ಹಿರಿಯ ನಾಯಕ ಬಸವರಾಜ ಹೊರಟ್ಟಿ ಸಹ ಬಿಜೆಪಿ ಸೇರುವುದು ಪಕ್ಕಾ ಆಗಿದೆ. ಸೇರ್ಪಡೆ ದಿನಾಂಕವನ್ನು ಶೀಘ್ರದಲ್ಲೇ ಘೋಷಣೆ ಮಾಡುವುದಾಗಿ ಅವರೇ ಕೇಳಿದ್ದಾರೆ.
ಇದರ ಮಧ್ಯೆ ಜೆಡಿಎಸ್‌ನ ಬಹಳಷ್ಟು ಮಂದಿ ಬಿಜೆಪಿ ಕಡೆ ಒಲವು ತೋರಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ, ಸಂಸದ ಡಿ.ವಿ.ಸದಾನಂದ ಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.
ಮಂಗಳೂರಿನಲ್ಲಿ ಇಂದು(ಭಾನುವಾರ) ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ ಪಕ್ಷದ ಶಾಸಕರು, ಮುಖಂಡರು ಬಿಜೆಪಿಯತ್ತ ವಲಸೆ ಬರಲು ನಿರ್ಧರಿಸಿದ್ದು, ಸೂಕ್ತ ಸಂದರ್ಭದಲ್ಲಿ ಅವರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಿದರು.
ಜೆಡಿಎಸ್ ತನ್ನ ಅಸ್ತಿತ್ವ ಕಳೆದುಕೊಳ್ಳುವ ಈ ಹಂತದಲ್ಲಿದೆ. ಅಲ್ಲಿಂದಲೇ ಬಹಳಷ್ಟು ಮಂದಿ ಬಿಜೆಪಿ ಕಡೆ ಒಲವು ತೋರಿಸುತ್ತಿದ್ದಾರೆ. ಈ ಬಗ್ಗೆ ಬಿಜೆಪಿಯಲ್ಲಿ ಕಾರ್ಯತಂತ್ರ ರೂಪಿಸಲಾಗಿದೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಒಂದಷ್ಟು ಹೊಸ ಮುಖ ಪರಿಚಯಿಸಲಾಗುತ್ತದೆ. ಅಲ್ಲಿ ಕನಿಷ್ಟ 25 ಸ್ಥಾನಗಳು ಬಿಜೆಪಿಯ ಪಾಲಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
150 ಸ್ಥಾನ ಗೆಲ್ಲಲು ಶಾ ಸೂಚನೆ
ಮುಂದಿನ ಅವಧಿಯಲ್ಲೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ. ಅದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದ ನಾಯಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೇರಲು ರಾಜಕೀಯ ಕಾರ್ಯತಂತ್ರ ಅತ್ಯಗತ್ಯ. ಈ ಚುನಾವಣೆಯಲ್ಲಿ ರಾಜ್ಯದಲ್ಲಿ 150ಕ್ಕೂ ಅಧಿಕ ಸ್ಥಾನ ಗೆಲ್ಲುವ ಗುರಿ ಹಾಕಿಕೊಳ್ಳಲಾಗಿದೆ. ಅದಕ್ಕಾಗಿಯೇ ಪಕ್ಷದ ಕಾರ್ಯಕಾರಿಣಿಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲು ಬೇಕಾದ ನೀಲ ನಕ್ಷೆಯನ್ನು ಏಪ್ರಿಲ್ 16 ರೊಳಗೆ ಸಿದ್ಧಪಡಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯ ಬಿಜೆಪಿ ನಾಯಕರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
ಶುಕ್ರವಾರ ಅಮಿತ್ ಶಾ ನೇತೃತ್ವದಲ್ಲಿ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಕಾರ್ಯತಂತ್ರ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಹಾಲಿ ಇರುವ 120 ಶಾಸಕರ ಸಂಖ್ಯೆಯನ್ನು ಮುಂದಿನ ಚುನಾವಣೆಯಲ್ಲಿ 150 ಕ್ಕೆ ಹೆಚ್ಚಿಸಲು ಬೇಕಾದ ನೀಲ ನಕ್ಷೆಯನ್ನು ಸಿದ್ಧಪಡಿಸಿ ಏಪ್ರಿಲ್ 16ಕ್ಕೆ ರಾಜ್ಯಕ್ಕೆ ಆಗಮಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರ ಕೈಗೆ ನೀಡುವಂತೆ ಅಮಿತ್ ಶಾ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಎರಡು ಬಾರಿ ಆದಂತೆ ಬಿಜೆಪಿಗೆ ಬಹುಮತದ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಟಾರ್ಗೆಟ್ 150 ಎಂದು ಕೇವಲ ಬಾಯಿ ಮಾತಲ್ಲೆ ಹೇಳಿದರೆ ಸಾಲದು. ಅಷ್ಟು ಶಾಸಕರನ್ನು ಗೆಲ್ಲಿಸಿಕೊಂಡು ಬರಲು ಎಲ್ಲ ನಾಯಕರಿಗೂ ಜವಾಬ್ದಾರಿ ಹಂಚಿಕೆ ಮಾಡಬೇಕು. ಹಳೇ ಮೈಸೂರು ಭಾಗ, ಉತ್ತರ ಕರ್ನಾಟಕ, ಕರಾವಳಿ, ಮಧ್ಯ ಕರ್ನಾಟಕ ಭಾಗಗಳಲ್ಲಿ ನೂನ್ಯತೆಗಳನ್ನು ಪತ್ತೆ ಹಚ್ಚಿ ಪಕ್ಷವನ್ನು ಬಲಗೊಳಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.