ಜನಾರ್ದನ ರೆಡ್ಡಿಯಿಂದ ಹೊಸ ಪಕ್ಷ ಸ್ಥಾಪನೆ?: ಬಿಜೆಪಿಯಿಂದ ಮುನಿಸಿಕೊಂಡಿರುವ ರೆಡ್ಡಿ

By Govindaraj SFirst Published Dec 5, 2022, 3:20 AM IST
Highlights

ಮಾಜಿ ಸಚಿವ ಜನಾರ್ದನ ರೆಡ್ಡಿ ಹೊಸದೊಂದು ರಾಜಕೀಯ ಪಕ್ಷ ಅಸ್ವಿತ್ವಕ್ಕೆ ತರಲು ಸಿದ್ಧತೆ ನಡೆಸಿದ್ದಾರೆ. ಈ ಮೂಲಕ ತನ್ನನ್ನು ಕಡೆಗಣಿಸುತ್ತಿರುವ ಬಿಜೆಪಿಗೆ ಪಾಠ ಕಲಿಸಲು ರೆಡ್ಡಿ ರಾಜಕೀಯ ಮರು ಅಖಾಡಕ್ಕೆ ಸಜ್ಜಾಗುತ್ತಿದ್ದಾರೆ ಎಂಬ ಗುಸುಗುಸು ಜಿಲ್ಲೆಯಲ್ಲಿ ಕೇಳಿಬರುತ್ತಿದೆ. 

ಬಳ್ಳಾರಿ (ಡಿ.05): ಮಾಜಿ ಸಚಿವ ಜನಾರ್ದನ ರೆಡ್ಡಿ ಹೊಸದೊಂದು ರಾಜಕೀಯ ಪಕ್ಷ ಅಸ್ವಿತ್ವಕ್ಕೆ ತರಲು ಸಿದ್ಧತೆ ನಡೆಸಿದ್ದಾರೆ. ಈ ಮೂಲಕ ತನ್ನನ್ನು ಕಡೆಗಣಿಸುತ್ತಿರುವ ಬಿಜೆಪಿಗೆ ಪಾಠ ಕಲಿಸಲು ರೆಡ್ಡಿ ರಾಜಕೀಯ ಮರು ಅಖಾಡಕ್ಕೆ ಸಜ್ಜಾಗುತ್ತಿದ್ದಾರೆ ಎಂಬ ಗುಸುಗುಸು ಜಿಲ್ಲೆಯಲ್ಲಿ ಕೇಳಿಬರುತ್ತಿದೆ.  ಅಕ್ರಮ ಗಣಿಗಾರಿಕೆ ಆರೋಪದಡಿ ಜಾಮೀನು ಪಡೆದು ಜೈಲಿಂದ ಹೊರ ಬಂದ ಬಳಿಕ ಬಿಜೆಪಿ ಅವರಿಂದ ಅಂತರ ಕಾಯ್ದುಕೊಂಡಿದೆ. ಪಕ್ಷದಲ್ಲಿ ಸಕ್ರಿಯವಾಗಲು ಹಾತೊರೆದರೂ ಹೈಕಮಾಂಡ್‌ ಹಸಿರು ನಿಶಾನೆ ತೋರಿಸದಿರುವುದು ರೆಡ್ಡಿ ಅಸಮಾಧಾನಕ್ಕೆ ಕಾರಣವಾಗಿದೆ.  ಹೀಗಾಗಿ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಹೊಸ ಪಕ್ಷ ಹುಟ್ಟು ಹಾಕುವ ಯೋಚನೆಯಲ್ಲಿದ್ದಾರೆಂದು ಹೇಳಲಾಗುತ್ತಿದೆ.

ಸುಳಿವು ನೀಡಿದ್ದ ರೆಡ್ಡಿ: ಎರಡು ತಿಂಗಳ ಹಿಂದೆಯಷ್ಟೇ ನಗರದ ಕೌಲ್‌ಬಜಾರ್‌ ಪ್ರದೇಶದಲ್ಲಿ ಕ್ರಿಕೆಟ್‌ ಪಂದ್ಯವೊಂದರ ಉದ್ಘಾಟನೆ ಸಮಾರಂಭದಲ್ಲಿ, ‘ಹುಲಿ ಬೇಟೆಗಾಗಿ ಕಾಯುತ್ತದೆ. ಹಸಿವು ನೀಗಿಸಿಕೊಳ್ಳಲು ಬೇಟೆಯಾಡಲೇಬೇಕಾಗುತ್ತದೆ. ಬೇಟೆಗೆ ಸಿದ್ಧವಾದ ಮೇಲೆ ಹೊಡೆಯಲೇಬೇಕಾಗುತ್ತದೆ. ಇನ್ನು ಮೂರ್ನಾಲ್ಕು ತಿಂಗಳಲ್ಲಿ ನಾನು ಸಕ್ರಿಯ ರಾಜಕೀಯ ಬಂದೇ ಬರುತ್ತೇನೆ. ಬಳ್ಳಾರಿಯ ಸಮಗ್ರ ಅಭಿವೃದ್ಧಿಗೆ ಮತ್ತೆ ಕೆಲಸ ಮಾಡುತ್ತೇನೆ ಎಂದಿದ್ದರು ರೆಡ್ಡಿ.

ಗ್ರಾಮೀಣ ಜನರ ಆರೋಗ್ಯ ಕಾಪಾಡಲು ಆರೋಗ್ಯ ಸಚಿವರು ಮುಂದಾಗಲಿ: ಎಚ್‌ಡಿಕೆ

ನೋ ಅಂದ್ರಾ ರಾಮುಲು?: ರೆಡ್ಡಿ ನೂತನ ಪಕ್ಷಕ್ಕೆ ಆಪ್ತ ಸ್ನೇಹಿತ ಶ್ರೀರಾಮುಲು ಒಪ್ಪಿಲ್ಲ ಎನ್ನಲಾಗಿದೆ. ಅದರ ಬದಲು ಪಕ್ಷದ ಹಿರಿಯರ ಜೊತೆ ಮಾತನಾಡೋಣ, ಬಿಜೆಪಿಯಲ್ಲೇ ಉಳಿಯೋಣ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ರೆಡ್ಡಿ ಅವರ ಜತೆಗೆ ಮಾಜಿ ಶಾಸಕ ದಿವಾಕರ ಬಾಬು ಸೇರಿಕೊಂಡು ಪಕ್ಷ ಕಟ್ಟಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತಾದರೂ ಈ ಸುದ್ದಿಯನ್ನು ಸ್ವತಃ ದಿವಾಕರ ಬಾಬು ಅವರೇ ತಳ್ಳಿಹಾಕಿದ್ದಾರೆ.

ಹೊಸ ಪಕ್ಷ ಸ್ಥಾಪನೆ ರೆಡ್ಡಿ ವಿವೇಚನೆ ಬಿಟ್ಟಿದ್ದು: ಜನಾರ್ದನ ರೆಡ್ಡಿಯ ಹೊಸ ಪಕ್ಷ ನೋಂದಣಿಯಾಗಿರುವ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಈ ಕುರಿತು ರೆಡ್ಡಿ ಎಂದೂ ಚರ್ಚಿಸಿಲ್ಲ. ಹೊಸ ಪಕ್ಷ ಸ್ಥಾಪನೆ ಅವರ ವಿವೇಚನೆಗೆ ಬಿಟ್ಟವಿಚಾರ. ಅವರು ನನ್ನ ಗೆಳೆಯ, ಅವರು ಎಲ್ಲೇ ಇದ್ದರೂ ಒಳ್ಳೆಯದಾಗಲಿ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು. ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಜನಾರ್ದನ ರೆಡ್ಡಿ ಅವರು ಈ ಭಾಗದ ಪ್ರಭಾವಿ ನಾಯಕರು. ಅವರು ತಮ್ಮದೇ ಆದ ನಿಲುವು ತೆಗೆದುಕೊಳ್ಳಲು ಸಮರ್ಥರು. ಕೆಲ ವಿಚಾರದಲ್ಲಿ ಬಿಜೆಪಿ ಮೇಲೆ ಅವರಿಗೆ ಬೇಸರವಿದೆ. ಎಲ್ಲವನ್ನೂ ಬಹಿರಂಗವಾಗಿ ಹೇಳಲು ಆಗಲ್ಲ. ಆ ಬೇಸರ ಕುರಿತು ಪಕ್ಷದ ಗಮನಕ್ಕೂ ತಂದಿರುವೆ. ನನ್ನ-ಜನಾರ್ದನ ರೆಡ್ಡಿ ನಡುವೆ ಸ್ನೇಹ-ಬಾಂಧವ್ಯಕ್ಕೆ ಯಾವುದೇ ಧಕ್ಕೆಯಾಗಿಲ್ಲ ಎಂದರು.

ರೆಡ್ಡಿ ಹೊಸ ಪಕ್ಷ ಕುರಿತು ರಾಜಕೀಯ ಚರ್ಚೆ: ಅಕ್ರಮ ಗಣಿಗಾರಿಕೆ ಆರೋಪದಡಿ ಜೈಲು ಸೇರಿದ ಬಳಿಕ ಜನಾರ್ದನ ರೆಡ್ಡಿ ಅವರಿಂದ ಅಂತರ ಕಾಯ್ದುಕೊಳ್ಳುತ್ತಿರುವ ಬಿಜೆಪಿ ನಡೆ ರೆಡ್ಡಿಗೆ ತೀವ್ರ ಬೇಸರ ಮೂಡಿಸಿದೆ. ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಗೊಳ್ಳಲು ಕಾರಣವಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವರೆಗೆ ಸತತ ಶ್ರಮಿಸಿದ್ದ ತನ್ನ ಬಗ್ಗೆ ಪಕ್ಷ ನಿರ್ಲಕ್ಷ್ಯ ಧೋರಣೆ ತೋರಿದೆ ಎಂಬ ಬೇಸರವನ್ನು ರೆಡ್ಡಿ ಆಗಾಗ್ಗೆ ಹೊರ ಹಾಕಿದ್ದಾರೆ. ಆಗಾಗ್ಗೆ ನಗರದ ವಿವಿಧೆಡೆ ವೇದಿಕೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರೆಡ್ಡಿ, ತಮ್ಮ ಭಾಷಣದ ಬಹುಭಾಗವನ್ನು ತಾನು ಮತ್ತೆ ರಾಜಕೀಯ ಮುನ್ನಲೆಗೆ ಬರುವ ಕುರಿತು ಸುಳಿವು ನೀಡಿದ್ದರು. ಹೀಗಾಗಿ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪಿಸಿ ತಾನು ಏನೆಂಬುದನ್ನು ಪಕ್ಷಕ್ಕೆ ತೋರಿಸುವ ಉಮೇದಿನಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

ನಾವು ಜಾತಿ, ಧರ್ಮಕ್ಕೆ ಸೀಮಿತವಲ್ಲ: ನಿಖಿಲ್‌ ಕುಮಾರಸ್ವಾಮಿ

ಹೀಗಾಗಿ ಹೊಸ ಪಕ್ಷದ ಸ್ಥಾಪನೆಗಾಗಿ ಬೇಕಾದ ಪೂರಕ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ರೆಡ್ಡಿ ಸ್ಥಾಪಿಸುತ್ತಿರುವ ನೂತನ ಪಕ್ಷಕ್ಕೆ ಶ್ರೀರಾಮುಲು ತೆರಳಲು ನಿರಾಕರಿಸುತ್ತಿರುವುದರಿಂದ ಈ ಇಬ್ಬರ ನಡುವೆ ಬಿರುಕು ಮೂಡಿದೆ ಎಂಬ ಮಾತುಗಳು ಕೇಳಿ ಬಂದಿವೆ. ಇದಕ್ಕೆ ಪುಷ್ಟಿನೀಡುವಂತೆ ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ತಾಜ್‌ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಿಣಿ ಅವರ ಎರಡನೇ ಪುತ್ರಿಯ ನಾಮಕರಣ ಸಮಾರಂಭಕ್ಕೆ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರು, ರೆಡ್ಡಿ ಅಭಿಮಾನಿಗಳು ಹಾಗೂ ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು. ಆದರೆ, ಶ್ರೀರಾಮುಲು ಮಾತ್ರ ಭಾಗವಹಿಸದೆ ದೂರ ಉಳಿದಿದ್ದರು. ಹೀಗಾಗಿ ರೆಡ್ಡಿ ಹಾಗೂ ಶ್ರೀರಾಮುಲು ನಡುವಿನ ಸಂಬಂಧ ಮುರಿದುಬಿದ್ದಿದೆ ಎಂಬ ಅನುಮಾನಗಳು ಸಹಜವಾಗಿ ಮೂಡಿವೆ.

click me!