ಜಲಜೀವನ್ ಮಿಷನ್‌ನ ಕಳಪೆ ಕಾಮಗಾರಿ, ವರದಿ ನೀಡಿ: ಸಂಸದ ಬಿ.ವೈ.ರಾಘವೇಂದ್ರ

Published : Sep 24, 2025, 06:36 PM IST
BY Raghavendra

ಸಾರಾಂಶ

ಜನಸಾಮಾನ್ಯರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿ ಉಡುಪಿ ಜಿಲ್ಲೆಯ 19ಕ್ಕೂ ಹೆಚ್ಚು ಗ್ರಾ.ಪಂ.ಗಳಲ್ಲಿ ನಡೆಸಲಾದ ಕಾಮಗಾರಿಗಳು ಸಮಾಧಾನಕರವಾಗಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಉಡುಪಿ (ಸೆ.24): ಜನಸಾಮಾನ್ಯರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿ ಉಡುಪಿ ಜಿಲ್ಲೆಯ 19ಕ್ಕೂ ಹೆಚ್ಚು ಗ್ರಾ.ಪಂ.ಗಳಲ್ಲಿ ನಡೆಸಲಾದ ಕಾಮಗಾರಿಗಳು ಸಮಾಧಾನಕರವಾಗಿಲ್ಲ ಎಂದು ಗ್ರಾ.ಪಂ.ಗಳೇ ನಿರ್ಣಯ ತೆಗೆದುಕೊಂಡು ಜಿಲ್ಲಾಡಳಿತಕ್ಕೆ ಕಳಹಿಸಿದೆ. ಈ ಬಗ್ಗೆ ತಕ್ಷಣ ವರದಿ ನೀಡಬೇಕು ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಅವರು ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಜಲ್ ಜೀವನ್ ಮಿಷನ್‌ನಡಿ 687 ಕೋಟಿ ರು. ವೆಚ್ಚದಲ್ಲಿ 525 ಕಾಮಗಾರಿ ಕೈಗೊಂಡಿದ್ದು, 487 ಪೂರ್ಣಗೊಂಡಿವೆ. 38 ಕಾಮಗಾರಿಗಳು ಪ್ರಗತಿಯಲ್ಲಿವೆ. ಶೇ.93ರಷ್ಟು ಸಾಧನೆಯಾಗಿದೆ ಎಂದು ವರದಿ ನೀಡಲಾಗಿದೆ. ಆದರೆ ಉಡುಪಿ ತಾಲೂಕಿನ 19 ಪಂಚಾಯಿತಿಗಳಲ್ಲಿ ಕಾಮಗಾರಿಗಳು ಸರಿಯಾಗಿಲ್ಲವೆಂದು ಎಂದು ದೂರು ಬಂದಿದೆ ಎಂದವರು ಅಧಿಕಾರಿಗಳ‍ನ್ನು ತರಾಟೆಗೆ ತೆಗೆದುಕೊಂಡರು. ಪಿಎಂ ಜನ್‌ಮನ್ ಯೋಜನೆಯಡಿ ಬುಡಕಟ್ಟು ಜನಾಂಗಕ್ಕೆ ಸಮುದಾಯ ಭವನಗಳ ನಿರ್ಮಾಣಕ್ಕೆ ಜಮೀನು ಮಂಜೂರಾಗಿದೆ. ಕೊರಗ ಜನಾಂಗದವರ ಮನೆ ನಿರ್ಮಾಣಕ್ಕೆ 3.73 ಲಕ್ಷ ರು. ವೆಚ್ಚದಲ್ಲಿ 308 ಮನೆ, 4.50 ಲಕ್ಷ ರು. ವೆಚ್ಚದಲ್ಲಿ 100 ಮನೆ ಮಂಜೂರಾಗಿವೆ. ಆದರೆ ಪೂರ್ಣ ಪ್ರಮಾಣದಲ್ಲಿ ಮನೆ ನಿರ್ಮಾಣ ಆಗಿಲ್ಲ, ಅನುದಾನ ಸಾಕಾಗದಿದ್ದಲ್ಲಿ ಎನ್‌ಜಿಓಗಳ ಸಹಭಾಗಿತ್ವದಲ್ಲಿ ನಿರ್ಮಿಸಿ ಹಸ್ತಾಂತರಿಸಿ ಎಂದವರು ಹೇಳಿದರು.

ಬೀಡಾಡಿ ದನಗಳ ಕಳ್ಳತನ ಹೆಚ್ಚುತ್ತಿರುವ ದೂರುಗಳಿವೆ. ಅವುಗ‍ಳ ಪಾಲನೆಗೆ ಕೊಲ್ಲೂರು ದೇವಸ್ಥಾನದ ಸಹಭಾಗಿತ್ವದಲ್ಲಿ ಗೋಶಾಲೆ ತೆರೆಯಲು ಈಗಾಗಲೇ ಜಮೀನು ಗುರುತಿಸಲಾಗಿದೆ. ತಕ್ಷಣ ಇದರ ಅನುಷ್ಠಾನ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕೆಲವು ಗ್ರಾಮೀಣ ಭಾಗಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸರಿಯಾಗಿಲ್ಲ. ಜಿಲ್ಲೆಯಲ್ಲಿ 196 ಮೊಬೈಲ್ ಟವರ್‌ಗಳಿದ್ದು, ಅವುಗಳಲ್ಲಿ 115 ಟವರ್‌ಗಳನ್ನು 2ಜಿಯಿಂದ 4 ಜಿಗೆ ಉನ್ನತೀಕರಿಸಲಾಗಿದೆ. ಇನ್ನೂ ಹೆಚ್ಚು ಟವರ್‌ ನಿರ್ಮಿಸಿ, ಟವರ್ ನಿರ್ಮಾಣ ಸಾಧ್ಯವಾಗದಿದ್ದರೇ ಸ್ಯಾಟಲೈಟ್ ಮೂಲಕ ನೆಟ್‌ವರ್ಕ್ ಒದಗಿಸಬೇಕು ಎಂದರು.

ಸಮಸ್ಯೆ ಹೇಳಿದ ಶಾಸಕರು

ಶಾಸಕರಾದ ಯಶ್ಪಾಲ್ ಎ. ಸುವರ್ಣ, ಪಿಎಂ ಜಲ್ ಜೀವನ್ ಮಿಷನ್ ಯೋಜನೆಯಡಿ ಕಳಪೆ ಕಾಮಗಾರಿಗಳ ಬಗ್ಗೆ, ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಕೊರಗ ಜನಾಂಗದವರು ಸರ್ಕಾರದ ಸೌಲಭ್ಯ ಪಡೆಯಲು ಹಿಂಜರಿಯುವ ಬಗ್ಗೆ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಬಿಪಿಎಲ್ ಕಾರ್ಡ್‌ಗಳ ರದ್ದುಗೊಳಿಸುವ ತಪ್ಪು ಮಾನದಂಡಗಳ ಬಗ್ಗೆ ಗಮನ ಸಳೆದರು. ಸಭೆಯಲ್ಲಿ ಡಿಸಿ ಸ್ವರೂಪ ಟಿ.ಕೆ., ಜಿಪಂ ಸಿಇಓ ಪ್ರತೀಕ್ ಬಾಯಲ್, ಎಸ್ಪಿ ಹರಿರಾಮ್ ಶಂಕರ್, ಕಾರ್ಕಳ ಡಿಎಫ್ಓ ಶಿವರಾಮ್ ಎಂ. ಬಾಬು, ದಿಶಾ ಸಮಿತಿಯ ಸದಸ್ಯರು, ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯಾವುದೇ ಕ್ಷಣದಲ್ಲಾದರೂ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಉದಯ ಕದಲೂರು ಓಪನ್ ಹೇಳಿಕೆ
ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ