ಚುನಾವಣೆಗೆ ಇನ್ನು ಬೆರಳೆಣಿಕೆಯಷ್ಟು ದಿನಗಳು ಬಾಕಿ ಇರುವಾಗ ಕಾಂಗ್ರೆಸ್ ಕೆಲವು ಮುಖಂಡರು ಕಾಂಗ್ರೆಸ್‌ಗೆ ರಾಜೀನಾಮೆ ಸಲ್ಲಿಸುತ್ತಿರುವುದು ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಮಂತರ್ ಗೆಲುವಿಗೆ ಬ್ರೇಕ್ ಹಾಕುವಂತೆ ಆಗುತ್ತಾ ಎನ್ನುವ ಪ್ರಶ್ನೆ ಮೂಡಿದೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ಮೇ.04): ಈ ಬಾರಿ ಚುನಾವಣೆಯಲ್ಲಿ ಎಲ್ಲರೂ ಒಂದಾಗಿದ್ದು, ಗೆದ್ದೆಗೆಲ್ಲುತ್ತೇವೆ ಎಂಬ ಅಚಲ ನಂಬಿಕೆ ಇಟ್ಟುಕೊಂಡಿದ್ದ ಕಾಂಗ್ರೆಸ್‌ಗೆ ತಮ್ಮ ಒಬ್ಬೊಬ್ಬರೇ ಮುಖಂಡರು ರಾಜೀನಾಮೆ ಸಲ್ಲಿಸುತ್ತಿರುವುದು ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂತರ್ ಗೌಡ ಅವರಿಗೆ ಮುಳುವಾಗಿಬಿಡುತ್ತಾ ಎನ್ನುವ ಅನುಮಾನ ಶುರುವಾಗಿದೆ.
undefined
ಕಳೆದ ಐದು ಚುನಾವಣೆಗಳಲ್ಲೂ ಬಿಜೆಪಿಯಿಂದ ಅಪ್ಪಚ್ಚು ರಂಜನ್ ಅವರೇ ಮಡಿಕೇರಿ ಕ್ಷೇತ್ರದಲ್ಲಿ ವಿಜಯ ಮಾಲೆ ಧರಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ಸಿನಲ್ಲಿದ್ದ ಒಳ ಜಗಳಗಳು ಕಾರಣ ಎನ್ನುವುದು ಸಾಕಷ್ಟು ಸಲ ಕಾಂಗ್ರೆಸ್ಸಿಗರೇ ಒಪ್ಪಿಕೊಂಡಿದ್ದಾರೆ. ಆದರೆ ಬರೋಬ್ಬರಿ 25 ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿ ಮಾಡಿಕೊಂಡಿರುವ ಬಿಜೆಪಿಯ ಅಪ್ಪಚ್ಚು ರಂಜನ್ ಅವರನ್ನು ಸೋಲಿಸಲು ಈ ಚುನಾವಣೆಯಲ್ಲಿ ಮಾತ್ರ ಯಾರಿಗೆ ಟಿಕೆಟ್ ಕೊಟ್ಟರೂ ಎಲ್ಲರೂ ಒಂದಾಗಿ ಕೆಲಸ ಮಾಡುತ್ತೇವೆ ಎಂದು ಕಾಂಗ್ರೆಸ್ ಮುಖಂಡರು ಟಿಕೆಟ್ ಘೋಷಣೆಗೆ ಮುನ್ನ ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಆದರೆ ಟಿಕೆಟ್ ಘೋಷಣೆ ಆದ ಬಳಿಕ ಕಳೆದ ಎರಡು ವರ್ಷಗಳ ಹಿಂದೆ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಪಕ್ಷವನ್ನು ಸೇರಿದ್ದ ಜಿವಿಜಯ ಮಂಗಳವಾರವಷ್ಟೇ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ್ದಾರೆ.
ಭಜರಂಗದಳ ಬ್ಯಾನ್ ಬಗ್ಗೆ ಹೇಳಿರುವ ಕಾಂಗ್ರೆಸ್ ಸರ್ವನಾಶ: ಡಿ.ವಿ. ಸದಾನಂದಗೌಡ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ರಾಜೀನಾಮೆ ಪತ್ರ ಬರೆದು ನಾನು ಇನ್ನು ಸರ್ವ ಸ್ವತಂತ್ರ. ಟಿಕೆಟ್ ಪಡೆದುಕೊಂಡಿರುವ ಹೊರಗಿನ ಮಂತರ್ ಗೌಡಗಿಂತ ಇಲ್ಲಿಯೇ ಹುಟ್ಟಿ ಬೆಳೆದಿರುವ ರಂಜನ್ ಅವರನ್ನು ಬೆಂಬಲಿಸಿದರೆ ತಪ್ಪೇನು ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ. ಇದಿಷ್ಟೇ ಆಗಿದ್ದರೆ ಏನೋ ಒಬ್ಬರಲ್ಲವೆ ಎಂದು ಕಾಂಗ್ರೆಸ್ ಸುಮ್ಮನಾಗಿ ಬಿಡುತಿತ್ತೇನೋ. ಆದರೆ ಬುಧವಾರವೂ ಕೂಡ ಕೊಡಗು ಕಾಂಗ್ರೆಸ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಅನಂತಕುಮಾರ್ ಮತ್ತು ಇಬ್ಬರು ಡಿಸಿಸಿ ಸದಸ್ಯರು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಕಳೆದ ಏಳು ವರ್ಷಗಳಿಂದ ಕಾಂಗ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದ ಅನಂತಕುಮಾರ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ, ಬಳಿಕ ಜಿಲ್ಲಾ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದವರು. ಪಕ್ಷದಲ್ಲಿ ಮುಖಂಡರು ನನ್ನನ್ನು ಕಡೆಗಣಿಸುತ್ತಿದ್ದಾರೆ. ಜಿಲ್ಲಾಧ್ಯಕ್ಷ ಕಳೆದ 6 ತಿಂಗಳಿನಿಂದ ನನಗೆ ಕರೆ ಮಾಡಿಲ್ಲ. ಇದನ್ನು ಅಭ್ಯರ್ಥಿ ಮಂತರ್ ಅವರಿಗೆ ಹೇಳಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಏಳು ವರ್ಷಗಳ ಕಾಲ ನಾನು ಕಟ್ಟಿ ಬೆಳೆಸಿದ ಕಾಂಗ್ರೆಸ್ ಮನೆಗೆ ಗೂಬೆಗಳು ಬಂದು ಕುಳಿತಿವೆ. ನನ್ನ ಬೂತ್ ಆದ ಶನಿವಾರಸಂತೆಯಲ್ಲಿಯೇ ನನಗೆ ಅವಮಾನವಾಗಿದೆ. ಹೀಗಾಗಿ ನಾನು ಅಲ್ಲಿಯೇ ನನ್ನ ಶಕ್ತಿ ಏನೆಂದು ತೋರಿಸುತ್ತೇನೆ. ಅಲ್ಲಿಯೇ ನಾನು ವಿಜ್ರಂಭಿಸುತ್ತೇನೆ. ನನಗೆ ಅಪಮಾನ ಮಾಡಿದ್ದರಿಂದ ಕಾಂಗ್ರೆಸ್ ಅನ್ನು ಮುಗಿಸಲು ನನಗೆ ಗೊತ್ತಿದೆ ಎಂದು ಗುಡುಗಿದ್ದಾರೆ.
ರಾಜ್ಯದಲ್ಲಿ ಬಜರಂಗದಳ ನಿಷೇಧವನ್ನು ಮತ್ತೆ ಬೆಂಬಲಿಸಿದ ಬಿಕೆ ಹರಿಪ್ರಸಾದ್
ರಾಜೀನಾಮೆ ಪರ್ವದ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧ್ಯಕ್ಷ ಧರ್ಮಜಉತ್ತಪ್ಪ ಇದೆಲ್ಲ ಅಚ್ಚರಿಯೇನಲ್ಲ. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ಆಕಾಂಕ್ಷಿಗಳಿದ್ದರು. ಅದರಲ್ಲಿ ಒಬ್ಬರಿಗೆ ಮಾತ್ರವೇ ಟಿಕೆಟ್ ಸಿಕ್ಕಿದೆ. ಜಿವಿಜಯ ಅವರು ಕಾಂಗ್ರೆಸ್ಗೆ ಸೇರುವಾಗ ಜಾತ್ಯತೀತೆ ಅಗತ್ಯವಾಗಿದೆ, ದೇಶದ ಭದ್ರತೆ ಅಗತ್ಯವಾಗಿದೆ. ಹೀಗಾಗಿ ಕಾಂಗ್ರೆಸ್‌ಗೆ ಸೇರಿದ್ದೇನೆ ಎನ್ನುತ್ತಿದ್ದರು. ಆದರೆ ಈಗ ಬಿಜೆಪಿಗೆ ಬೆಂಬಲ ನೀಡುವವರಂತೆ ಮಾತನಾಡಿದ್ದಾರೆ. ಈಗ ಅವರ ಜಾತ್ಯತೀತ ನಿಲುವು ಎಲ್ಲಿಗೆ ಹೋಗಿದೆ ಎಂದು ಪ್ರಶ್ನಿಸಿದ್ದಾರೆ.
ಹೊರಗಿನವರಿಗೆ ಟಿಕೆಟ್ ನೀಡಲಾಗಿದೆ ಎನ್ನುತ್ತಿರುವ ಜಿವಿಜಯ ಅವರು ಇದೇ ಮಂತರ್ ಅವರಿಗೆ ಎಂಎಲ್ಸಿ ಚುನಾವಣೆಗೆ ಟಿಕೆಟ್ ನೀಡಿದ್ದಾಗ ಮೊದಲು ಬೆಂಬಲ ಸೂಚಿಸಿದ್ದರು. ಆಗ ಮಂತರ್ ಅವರು ಹೊರಗಿನವರಾಗಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಏನೇ ಆಗಲಿ ಚುನಾವಣೆಗೆ ಇನ್ನು ಬೆರಳೆಣಿಕೆಯಷ್ಟು ದಿನಗಳು ಬಾಕಿ ಇರುವಾಗ ಕಾಂಗ್ರೆಸ್ ಕೆಲವು ಮುಖಂಡರು ಕಾಂಗ್ರೆಸ್‌ಗೆ ರಾಜೀನಾಮೆ ಸಲ್ಲಿಸುತ್ತಿರುವುದು ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಮಂತರ್ ಗೆಲುವಿಗೆ ಬ್ರೇಕ್ ಹಾಕುವಂತೆ ಆಗುತ್ತಾ ಎನ್ನುವ ಪ್ರಶ್ನೆ ಮೂಡಿದೆ.