ಅಭ್ಯರ್ಥಿ ಬದಲಾವಣೆ: ಬಿಜೆಪಿ ಅಸ್ತ್ರ ಫಲಿಸುವುದೇ..?

By Kannadaprabha NewsFirst Published Mar 15, 2024, 9:45 PM IST
Highlights

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಪ್ರಯೋಗ ಮಾಡಿದ್ದ ಹೊಸ ಮುಖಗಳಿಗೆ ಟಿಕೆಟ್‌ ನೀಡುವ ಅಸ್ತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಆದರೂ ಕೂಡ ಈ ಬಾರಿ ಲೋಕಸಭಾ ಚುನಾವಣೆಯಲ್ಲೂ ಕೆಲವೆಡೆ ಕ್ಷೇತ್ರವನ್ನು ಅದಲು ಬದಲು ಮಾಡಲಾಗಿದೆ.

ಆರ್‌. ತಾರಾನಾಥ್‌

ಚಿಕ್ಕಮಗಳೂರು(ಮಾ.15):  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಪ್ರಯೋಗ ಮಾಡಿದ್ದ ಹೊಸ ಮುಖಗಳಿಗೆ ಟಿಕೆಟ್‌ ನೀಡುವ ಅಸ್ತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಆದರೂ ಕೂಡ ಈ ಬಾರಿ ಲೋಕಸಭಾ ಚುನಾವಣೆಯಲ್ಲೂ ಕೆಲವೆಡೆ ಕ್ಷೇತ್ರವನ್ನು ಅದಲು ಬದಲು ಮಾಡಲಾಗಿದೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಅವಧಿಯಲ್ಲಿ ಶೃಂಗೇರಿ ಹೊರತುಪಡಿಸಿ ಇನ್ನುಳಿದ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇದ್ದರು. ಕಳೆದ ಚುನಾವಣೆಯಲ್ಲಿ ಮೂಡಿಗೆರೆ ಕ್ಷೇತ್ರದ ಅಂದಿನ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರಿಗೆ ಪಕ್ಷ ಟಿಕೆಟ್‌ ನೀಡಲಿಲ್ಲ.

ಅದಕ್ಕೂ ಮುನ್ನ ಕ್ಷೇತ್ರದಲ್ಲಿ ಅವರ ವಿರುದ್ಧ ಬಿಜೆಪಿಯವರೇ ಅಪಪ್ರಚಾರ ಮಾಡುತ್ತಿದ್ದರು. ಕಾರ್ಯಕ್ರಮದ ನಿಮಿತ್ತ ಮೂಡಿಗೆರೆಗೆ ಆಗಮಿಸಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರ ಕಾರನ್ನು ಅಡ್ಡಗಟ್ಟಿ ವಾಪಸ್‌ ಕಳುಹಿಸುವ ಕೆಲಸವೂ ಆಗಿತ್ತು. ಅವರಿಗೆ ಟಿಕೆಟ್‌ ನೀಡುವುದಕ್ಕೆ ಕಾರ್ಯಕರ್ತರ ವಿರೋಧ ಇದೆ ಎಂಬ ಮೇಸೇಜ್‌ ಪಕ್ಷದ ವರಿಷ್ಟರಿಗೆ ತಲುಪಿಸಿ ಕೊನೆಯ ಹಂತದಲ್ಲಿ ಅವರ ಬದಲು ದೀಪಕ್ ದೊಡ್ಡಯ್ಯ ಅವರಿಗೆ ಟಿಕೆಟ್ ನೀಡಲಾಗಿತ್ತು. ಆದರೆ, ಅವರು ಚುನಾವಣೆಯಲ್ಲಿ ಪರಾಭವಗೊಂಡರು.

ಚಿಕ್ಕಬಳ್ಳಾಪುರ ಬಿಜೆಪಿಯ ಭದ್ರಕೋಟೆ ಆಗಬೇಕು: ಮಾಜಿ ಸಚಿವ ಡಾ.ಕೆ.ಸುಧಾಕರ್‌

ಹಿಸ್ಟರಿ ರಿಪೀಟ್‌:

ಚುನಾವಣೆಗೂ ಮುನ್ನ ಎಂ.ಪಿ. ಕುಮಾರಸ್ವಾಮಿ ಅವರ ವಿರುದ್ಧ ಹೇಗೆಲ್ಲಾ ಕಾರ್ಯಕ್ರಮ ರೂಪಿಸಲಾಗಿತ್ತೋ ಅದೇ ಮಾದರಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಟಿಕೆಟ್‌ ಘೋಷಣೆಗೂ ಮುನ್ನ ಗೋ ಬ್ಯಾಕ್‌ ಶೋಭಾ ಎಂದು ಸ್ವ-ಪಕ್ಷದವರೆ ಹೇಳುವ ಜತೆಗೆ ಅವರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಇದರ ಉದ್ದೇಶವೂ ಕೂಡ ಟಿಕೆಟ್‌ ತಪ್ಪಿಸುವುದಾಗಿತ್ತು.

ಶೋಭಾ ಕರಂದ್ಲಾಜೆ ಅವರು 2014ರ ಲೋಕಸಭಾ ಚುನಾವಣೆಯಲ್ಲಿ 5,81,168 (ಶೇ. 41.89) ಮತಗಳನ್ನು ಪಡೆದುಕೊಂಡಿದ್ದರೆ, ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಕೆ. ಜಯಪ್ರಕಾಶ್‌ ಹೆಗಡೆ 3,99,525 (ಶೇ.28.8) ಮತಗಳನ್ನು ಪಡೆದುಕೊಂಡಿದ್ದರು. ಅಂದರೆ, ಶೋಭಾ ಕರಂದ್ಲಾಜೆ ಅವರು 1,81,643 ಮತಗಳ ಅಂತರದಿಂದ ಜಯಗಳಿಸಿದರು.

ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಚಕ್ರವರ್ತಿಯಿಂದ ಅಚ್ಚರಿಯ ಹೇಳಿಕೆ: ಏನಂದ್ರು ಸೂಲಿಬೆಲೆ!

2019ರ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಅವರು 3,49,599 ಮತಗಳ ಅಂತರದಿಂದ ಜಯಗಳಿಸಿದರು. ಚಲಾವಣೆಗೆಗೊಂಡ ಮತಗಳ ಪೈಕಿ ಶೇ. 62.43 ರಷ್ಟು ಮತಗಳನ್ನು ಅವರೊಬ್ಬರೇ ಪಡೆದುಕೊಂಡಿದ್ದರು. ಈ ಗೆಲುವು ಅವರಲ್ಲಿ ಮತ್ತೆ ಟಿಕೆಟ್‌ ಸಿಗುವ ಆತ್ಮವಿಶ್ವಾಸ ಇತ್ತು. ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬಿಜೆಪಿ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಾಲಯಗಳ ಉದ್ಘಾಟನಾ ಸಮಾರಂಭದಲ್ಲೂ ಕೂಡ ಅವರು ಪಾಲ್ಗೊಂಡಿದ್ದರು. ಆದರೆ, ಅವರ ವಿರುದ್ಧ ಅಪಪ್ರಚಾರ ಟಿಕೆಟ್‌ ತಪ್ಪಿಸುವಂತೆ ಮಾಡಿತು.

ಎಂ.ಪಿ. ಕುಮಾರಸ್ವಾಮಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಂತಹ ಪರಿಸ್ಥಿತಿ ಎದುರಿಸಿದ್ದರೋ ಅದೇ ವಾತಾವರಣವನ್ನು ಸಂಸದೆ ಶೋಭಾ ಕರಂದ್ಲಾಜೆ ಅವರು ಚಿಕ್ಕಮಗಳೂರಿನಲ್ಲಿ ಅನುಭವಿಸಿದರು.
ಮೂಡಿಗೆರೆ ಕ್ಷೇತ್ರದಲ್ಲಿ ಹೊಸಬರಿಗೆ ಟಿಕೆಟ್‌ ಕೊಟ್ಟು ಎಡವಿದ ಬಿಜೆಪಿ, ಇದೀಗ ಮತ್ತೆ ಲೋಕಸಭಾ ಚುನಾವಣೆಯಲ್ಲೂ ಕ್ಷೇತ್ರಕ್ಕೆ ಹೊಸಬರನ್ನು ಪರಿಚಯಿಸಿದೆ. ಕೊಟಾ ಶ್ರೀನಿವಾಸ ಪೂಜಾರಿ ಅವರಿಗೆ ಈ ಬಾರಿ ಟಿಕೆಟ್‌ ನೀಡಿದೆ. ಆದರೆ ಫಲಿತಾಂಶ ಏನಾಗುತ್ತೆ ? ಎಂಬುದನ್ನು ಮಾತ್ರ ಕಾದು ನೋಡಬೇಕಾಗಿದೆ.

click me!