ಯಾದಗಿರಿ: ಬಿಜೆಪಿಯ ಮಾಲಕರೆಡ್ಡಿ ಪುತ್ರಿಗೆ ಕಾಂಗ್ರೆಸ್‌ ಟಿಕೆಟ್‌ ಸಿಗುತ್ತಾ?

By Kannadaprabha News  |  First Published Mar 14, 2023, 7:36 AM IST

ಕಾಂಗ್ರೆಸ್‌ ಟಿಕೆಟ್‌ಗೆ ಮಲ್ಲಿಕಾರ್ಜುನ ಖರ್ಗೆಯವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ವಿಧಾನ ಪರಿಷತ್‌ ಮಾಜಿ ಸದಸ್ಯ ತುನ್ನೂರು ಚೆನ್ನಾರೆಡ್ಡಿ ಪ್ರಬಲ ಆಕಾಂಕ್ಷಿ. ಡಾ.ಮಾಲಕರೆಡ್ಡಿ ಬಿಜೆಪಿಗೆ ಹೋದ ನಂತರ ಇವರ ದಾರಿ ಸುಗಮವಾಗಿದೆ ಎಂದು ತಿಳಿದುಕೊಂಡಿದ್ದ ಬೆನ್ನಲ್ಲೇ, ಡಾ.ರೆಡ್ಡಿಯವರ ಘರ್‌ ವಾಪಸಿ ಕುರಿತ ಸುದ್ದಿಗಳು ಗೊಂದಲ ಮೂಡಿಸಿವೆ. 


ಆನಂದ್‌ ಎಂ. ಸೌದಿ

ಯಾದಗಿರಿ(ಮಾ.14):  ದಶಕಗಳ ಕಾಲ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಯಾದಗಿರಿ ಮತಕ್ಷೇತ್ರದಲ್ಲೀಗ ಕಮಲ ಪಕ್ಷದ ದರ್ಬಾರು. ದಿ.ಬಸವಂತರಾಯ, ದಿ.ಭೋಜರಾಯ, ದಿ.ಶರಣಪ್ಪ, ಮಾಜಿ ಸಚಿವರಾದ ದಿ.ವಿಶ್ವನಾಥರೆಡ್ಡಿ ಮುದ್ನಾಳ್‌, ರಾಜಕೀಯ ಸಂತ ಖ್ಯಾತಿಯ ಡಾ.ಮಾಲಕರೆಡ್ಡಿ ಅವರಂತಹ ರಾಜಕೀಯ ಘಟಾನುಘಟಿಗಳು ಪ್ರತಿನಿಧಿಸಿದ ಕ್ಷೇತ್ರವಿದು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ರಾಜಕೀಯ ಬುನಾದಿ ಕ್ಷೇತ್ರ ಪಕ್ಕದ ಗುರುಮಠಕಲ್‌ ಆಗಿತ್ತಾದರೂ, ಯಾದಗಿರಿ ಆದ್ಯತಾ ಕ್ಷೇತ್ರವಾಗಿತ್ತು.

Latest Videos

undefined

ಬಿಜೆಪಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ಕಟ್ಟಾ ಬೆಂಬಲಿಗ ವೆಂಕಟರೆಡ್ಡಿ ಮುದ್ನಾಳ್‌, ಯಾದಗಿರಿ ಕ್ಷೇತ್ರದ ಹಾಲಿ ಶಾಸಕರು. ಕಳೆದ ಬಾರಿ ಕಾಂಗ್ರೆಸ್‌ನಲ್ಲಿದ್ದ ಡಾ.ಮಾಲಕರೆಡ್ಡಿಯವರನ್ನು ಸೋಲಿಸಿದವರು. ಈ ಬಾರಿಯೂ ಅವರು ಬಿಜೆಪಿಯ ಟಿಕೆಟ್‌ ಆಕಾಂಕ್ಷಿ. ಯಡಿಯೂರಪ್ಪನವರ ಕೃಪಾಕಟಾಕ್ಷ ಇರುವವರೆಗೂ ಮುದ್ನಾಳ್‌ ನಿರುಮ್ಮಳ ಎನ್ನಲಾಗುತ್ತಿದೆ. ಮತ್ತೊಮ್ಮೆ ಬಿಜೆಪಿಯಿಂದ ಕಣಕ್ಕಿಳಿಯಲು ಅವರು ಯತ್ನಿಸುತ್ತಿದ್ದಾರೆ. ಇದೇ ವೇಳೆ, ಬಿಜೆಪಿ ಟಿಕೆಟ್‌ಗಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲ ರೆಡ್ಡಿ ನಾಯ್ಕಲ್‌, ಕಿಸಾನ್‌ ಘಟಕದ ಅಧ್ಯಕ್ಷ ಚಂದ್ರಶೇಖರ ಮಾಗನೂರು, ಮಹಿಳಾ ಘಟಕದ ಲಲಿತಾ ಅನಪುರ, ಚೆನ್ನಾರೆಡ್ಡಿ ಬಿಳ್ಹಾರ್‌ ಯತ್ನಿಸುತ್ತಿದ್ದು, ಟಿಕೆಟ್‌ ಆಕಾಂಕ್ಷಿಗಳ ನಡುವೆ ಶೀತಲ ಸಮರವೇ ನಡೆಯುತ್ತಿದೆ.

ಬಿಜೆಪಿಯಲ್ಲಿದ್ದುಕೊಂಡೇ ಕಾಂಗ್ರೆಸ್‌ ಟಿಕೆಟ್‌ಗೆ ಲಾಬಿ: ಕಮಲ ನಾಯಕನಿಗೆ ಆಡಿಯೋ ಸಂಕಷ್ಟ?

ಕಾಂಗ್ರೆಸ್‌ ಟಿಕೆಟ್‌ಗೆ ಮಲ್ಲಿಕಾರ್ಜುನ ಖರ್ಗೆಯವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ವಿಧಾನ ಪರಿಷತ್‌ ಮಾಜಿ ಸದಸ್ಯ ತುನ್ನೂರು ಚೆನ್ನಾರೆಡ್ಡಿ ಪ್ರಬಲ ಆಕಾಂಕ್ಷಿ. ಡಾ.ಮಾಲಕರೆಡ್ಡಿ ಬಿಜೆಪಿಗೆ ಹೋದ ನಂತರ ಇವರ ದಾರಿ ಸುಗಮವಾಗಿದೆ ಎಂದು ತಿಳಿದುಕೊಂಡಿದ್ದ ಬೆನ್ನಲ್ಲೇ, ಡಾ.ರೆಡ್ಡಿಯವರ ಘರ್‌ ವಾಪಸಿ ಕುರಿತ ಸುದ್ದಿಗಳು ಗೊಂದಲ ಮೂಡಿಸಿವೆ. ಟಿಕೆಟ್‌ ಸಿಗುವುದಾದರೆ ಮಾಲಕರೆಡ್ಡಿ ಕಾಂಗ್ರೆಸ್‌ಗೆ ಮರಳಲು ಸಿದ್ಧರಿದ್ದಾರೆ ಎಂಬ ವದಂತಿ ಕ್ಷೇತ್ರದಲ್ಲಿ ಬಲವಾಗಿ ಹರಡಿದೆ. ಜೊತೆಗೆ, ಡಾ.ಮಾಲಕರೆಡ್ಡಿ ಪುತ್ರಿ ಡಾ.ಅನುರಾಧಾ ಅವರು ಕಾಂಗ್ರೆಸ್‌ ಟಿಕೆಟ್‌ಗೆ ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಹೀಗಾಗಿ, ಕ್ಷೇತ್ರವ್ಯಾಪ್ತಿಯಲ್ಲಿ ದೊಡ್ಡ ಮಟ್ಟದಲ್ಲಿ ಪಕ್ಷಾಂತರ ಪರ್ವದ ನಿರೀಕ್ಷೆಯಿದೆ. ಒಂದು ವೇಳೆ, ಪ್ರಬಲ ಆಕಾಂಕ್ಷಿಗಳಿಗೆ ಟಿಕೆಟ್‌ ಸಿಗದಿದ್ದರೆ ತಮ್ಮ ಸಾಂಪ್ರದಾಯಿಕ ವಿರೋಧಿಗಳನ್ನೇ ತೆರೆಮರೆಯಲ್ಲಿ ಬೆಂಬಲಿಸುವ ‘ದೂರಾಲೋಚನೆ’ಯನ್ನೂ ತಳ್ಳಿಹಾಕುವಂತಿಲ್ಲ. ಎ.ಸಿ.ಕಾಡ್ಲೂರು, ಸತೀಶ ಕಂದಕೂರು, ಶರಣಪ್ಪ ಸಲಾದಪುರ, ಮರಿಗೌಡ ಹುಲ್ಕಲ್‌ ಕೂಡ ‘ಕೈ’ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.
ಜೆಡಿಎಸ್‌ನದು ಇಲ್ಲಿ ಕಾದು ನೋಡುವ ತಂತ್ರ, ಬಿಜೆಪಿ, ಕಾಂಗ್ರೆಸ್‌ ಟಿಕೆಟ್‌ ಸಿಗದ ಅತೃಪ್ತರಿಗೆ ಗಾಳ ಬೀಸುವ ಲೆಕ್ಕಾಚಾರ ಅದರದು.

ವಿದೇಶಿಗರಿಂದ ಸಹಾಯ ಕೇಳುವ ಸ್ಥಿತಿ ದೇಶಕ್ಕೆ ಬಂದಿಲ್ಲ: ಸಿ.ಟಿ.ರವಿ

ಕ್ಷೇತ್ರದ ಹಿನ್ನೆಲೆ:

1957ರಿಂದ ಈವರೆಗೆ ಕಾಂಗ್ರೆಸ್‌ ಗೆದ್ದಿದ್ದೇ ಹೆಚ್ಚು. ದಿ.ಜಗನ್ನಾಥರಾವ್‌ ವೆಂಕಟರಾವ್‌, ದಿ.ಕೋನಪ್ಪ ರುದ್ರಪ್ಪ ನಾಡಗೌಡ, ಮಾಜಿ ಪ್ರಧಾನಿ ದೇವೇಗೌಡರ ಪರಮಾಪ್ತ ದಿ.ಸದಾಶಿವರೆಡ್ಡಿ ಕಂದಕೂರರಂತಹ ರಾಜಕೀಯ ಮುತ್ಸದ್ದಿಗಳ ಸ್ಪರ್ಧೆ ಕಂಡ ನಾಡಿದು. ಪ್ರಸ್ತುತ ಬಿಜೆಪಿಗೆ ಕ್ಷೇತ್ರ ಮಣೆ ಹಾಕಿದೆ. ಇತ್ತೀಚಿನ ವರ್ಷಗಳಲ್ಲಿ ಚುನಾವಣೆಯ ಹೊಸ್ತಿಲಲ್ಲಿ ಪಕ್ಷಾಂತರದ ಪರ್ವ ಹೆಚ್ಚುತ್ತಿದ್ದು, ಟಿಕೆಟ್‌ ಹಂಚಿಕೆ ಕುತೂಹಲ ಮೂಡಿಸಿದೆ.

ಜಾತಿ ಲೆಕ್ಕಾಚಾರ:

ಒಟ್ಟು 2,31,116 ಮತದಾರರ ಪೈಕಿ ರೆಡ್ಡಿ ಜನಾಂಗದ್ದೇ ಈ ಕ್ಷೇತ್ರದಲ್ಲಿ ಪಾರುಪತ್ಯ. ಉಳಿದಂತೆ, ಲಿಂಗಾಯತರು, ಅಲ್ಪಸಂಖ್ಯಾತರು, ದಲಿತರು, ಹಾಲುಮತಸ್ಥರು, ಕಬ್ಬಲಿಗರು, ಪರಿಶಿಷ್ಟಪಂಗಡದ ಮತಗಳು ಅಭ್ಯರ್ಥಿಯ ಗೆಲುವಲ್ಲಿ ಮಹತ್ತರ ಪಾತ್ರೆ ವಹಿಸಲಿವೆ. ಜೊತೆಗೆ, ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿರುವುದು ಈ ಕ್ಷೇತ್ರದ ವಿಶೇಷ.

click me!