Lok Sabha Election 2024: ಚಿಕ್ಕಬಳ್ಳಾಪುರಕ್ಕೆ ನೀರಾವರಿ ಸ್ಕೀಂ, ಪ್ರತ್ಯೇಕ ಹಾಲು ಒಕ್ಕೂಟ: ಡಾ.ಕೆ.ಸುಧಾಕರ್‌

By Kannadaprabha NewsFirst Published Mar 31, 2024, 6:05 AM IST
Highlights

ನಾನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದನಾದ ಬಳಿಕ ಬಯಲುಸೀಮೆಗೆ ಶಾಶ್ವತ ನೀರಾವರಿ ಯೋಜನೆ ನೀಡುತ್ತೇನೆ. ಹಾಗೆಯೇ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ತರುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಮಹತ್ವದ ಭರವಸೆ ನೀಡಿದ್ದಾರೆ. 
 

ಚಿಕ್ಕಬಳ್ಳಾಪುರ (ಮಾ.31): ನಾನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದನಾದ ಬಳಿಕ ಬಯಲುಸೀಮೆಗೆ ಶಾಶ್ವತ ನೀರಾವರಿ ಯೋಜನೆ ನೀಡುತ್ತೇನೆ. ಹಾಗೆಯೇ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ತರುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಮಹತ್ವದ ಭರವಸೆ ನೀಡಿದ್ದಾರೆ. ಗೌರಿಬಿದನೂರು, ಬಾಗೇಪಲ್ಲಿ ಮತ್ತು ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಶಕ್ತಿಕೇಂದ್ರ ಪ್ರಮುಖರು, ಸಹ-ಪ್ರಮುಖರು ಹಾಗೂ ಕಾರ್ಯಕರ್ತರ ಸಭೆಗಳಲ್ಲಿ ಚುನಾವಣಾ ಉಸ್ತುವಾರಿ ರಾಧಾಮೋಹನ್‌ ಅಗರ್ವಾಲ್‌ ಅವರೊಂದಿಗೆ ಶನಿವಾರ ಭಾಗವಹಿಸಿ ಮಾತನಾಡಿದರು.

ನಾನು ಕೊಟ್ಟ ಮಾತು, ಇಟ್ಟ ಹೆಜ್ಜೆ ಎಂದಿಗೂ ಸುಳ್ಳಾಗುವುದಿಲ್ಲ. ನನ್ನ ಕರ್ಮಭೂಮಿ ಇದೇ ಆಗಿರುವುದರಿಂದ ಇಲ್ಲಿನ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ. ನಾನು ಶಾಸಕನಾಗಿದ್ದಾಗ ಕೆರೆಗಳಿಗೆ ನೀರು ತುಂಬಿಸಿದ್ದೆ, ತಾಲೂಕು ಆಸ್ಪತ್ರೆ ನೀಡಿದ್ದೆ. ಸಂಸದನಾದ ಬಳಿಕ ಬಯಲುಸೀಮೆ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆ ತರುತ್ತೇನೆ. ಇಲ್ಲಿ ಹಿಂದೆ ಸಂಸದರಾಗಿದ್ದ ವೀರಪ್ಪ ಮೊಯಿಲಿ ನೀರು ತರುತ್ತೇನೆ ಎಂದು ಹದಿನೈದು ವರ್ಷ ಹೇಳಿಕೊಂಡು ತಿರುಗಿದರು. ಆದರೆ ಹಿಂದಿನ ಬಿಜೆಪಿ ಸರ್ಕಾರ ಎತ್ತಿನಹೊಳೆ ಯೋಜನೆಗೆ 4 ಸಾವಿರ ಕೋಟಿ ರು. ನೀಡಿತ್ತು ಎಂದರು.

ಕಾಂಗ್ರೆಸ್‌ ಸರ್ಕಾರದಿಂದ ಅಭಿವೃದ್ಧಿ ನಡೆಯುತ್ತಿಲ್ಲ: ಡಾ.ಕೆ.ಸುಧಾಕರ್‌

ಪ್ರಧಾನಿ ಮೋದಿ ಸರ್ಕಾರ ಬಡವರಿಗೆ ಕೊಡುವ ಸರ್ಕಾರವಾಗಿದ್ದರೆ, ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರ ಕಿತ್ತುಕೊಳ್ಳುವ ಸರ್ಕಾರವಾಗಿದೆ. ಕಿಸಾನ್‌ ಸಮ್ಮಾನ್‌ನಡಿ ಬಿಜೆಪಿ ಸರ್ಕಾರ ರೈತರಿಗೆ 4,000 ರು. ನೀಡಿದರೆ ಅದನ್ನು ಕಾಂಗ್ರೆಸ್‌ ಕಿತ್ತುಕೊಂಡಿದೆ. ಬಿಜೆಪಿ ನೀಡುತ್ತಿದ್ದ ವಿದ್ಯಾರ್ಥಿವೇತನವನ್ನೂ ರಾಜ್ಯ ಕಾಂಗ್ರೆಸ್‌ ಕಸಿದುಕೊಂಡಿದೆ ಎಂದು ದೂರಿದರು. ಚಿಕ್ಕಬಳ್ಳಾಪುರ ಹಾಲು ಒಕ್ಕೂಟ 5 ಲಕ್ಷ ಲೀಟರ್‌ ಹಾಲು ಉತ್ಪಾದಿಸುತ್ತಿದ್ದು, ಅದಕ್ಕಾಗಿಯೇ ಪ್ರತ್ಯೇಕ ಒಕ್ಕೂಟ ತರಲಾಯಿತು. ಆದರೆ ಅದನ್ನೂ ರದ್ದು ಮಾಡಿದ ಕಾಂಗ್ರೆಸ್‌ ಸರ್ಕಾರ ಮತ್ತೆ ಕೋಲಾರಕ್ಕೆ ಒಕ್ಕೂಟವನ್ನು ನೀಡಿ ರೈತರ ಸ್ವಾಭಿಮಾನವನ್ನೇ ಕಿತ್ತುಕೊಂಡಿದೆ. 

ನಾನು ವೈದ್ಯಕೀಯ ಕಾಲೇಜಿಗಾಗಿ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದೆ. ಇದೇ ರೀತಿ ಹಾಲು ಒಕ್ಕೂಟವನ್ನು ಕೂಡ ಮರಳಿ ತರುತ್ತೇನೆ. ಇದನ್ನು ಕಿತ್ತುಕೊಳ್ಳಲು ಈಗಿನ ಚಿಕ್ಕಬಳ್ಳಾಪುರದ ಶಾಸಕರಿಂದಲೂ ಸಾಧ್ಯವಿಲ್ಲ. ಸೂರ್ಯ, ಚಂದ್ರರು ಇರುವುದು ಎಷ್ಟು ಸತ್ಯವೋ ಅದೇ ರೀತಿ ಹಾಲು ಒಕ್ಕೂಟವನ್ನು ಮರಳಿ ತರುವುದು ಕೂಡ ಸತ್ಯ ಎಂದರು. ಹಿಂದಿನ ಸರ್ಕಾರದಿಂದ ರೈತರಿಗೆ 5 ರು. ಹಾಲಿಗೆ ಪ್ರೋತ್ಸಾಹಧನವಾಗಿ ನೀಡಲಾಗುತ್ತಿತ್ತು. ಎಂಟು ತಿಂಗಳಿಂದ ಈ ಪ್ರೋತ್ಸಾಹಧನ ಕೂಡ ಸಿಗುತ್ತಿಲ್ಲ. ಅಲ್ಲದೆ, ಅದರಲ್ಲಿ ಒಂದು ರುಪಾಯಿ ಕೂಡ ಕಡಿತ ಮಾಡಲಾಗಿದೆ ಎಂದು ಕಿಡಿಕಾರಿದರು.

ಆಯುಷ್ಮಾನ್‌ ಭಾರತ್‌ ಮೂಲಕ ಜನರಿಗೆ ತಲಾ 5 ಲಕ್ಷ ರು. ಆರೋಗ್ಯ ವಿಮೆಯನ್ನು ಪ್ರಧಾನಿ ಮೋದಿ ನೀಡಿದ್ದಾರೆ. ಕೋವಿಡ್‌ ಸಮಯದಲ್ಲಿ 10 ಕೆಜಿ, ಬಳಿಕ 5 ಕೆಜಿ ಅಕ್ಕಿ ನೀಡಲಾಯಿತು. ಆದರೆ ಕಾಂಗ್ರೆಸ್‌ ಸರ್ಕಾರ ಅಕ್ಕಿ ನೀಡದೆ ವಂಚಿಸಿದೆ. ಬಳಿಕ 3 ಕೆ.ಜಿ. ಅಕ್ಕಿ ನೀಡಿ ಮೂರು ನಾಮ ಹಾಕಿದೆ. ದಲಿತರಿಗೆ ಮೀಸಲಿಟ್ಟ 11 ಸಾವಿರ ಕೋಟಿ ಮೊತ್ತವನ್ನು ಗ್ಯಾರಂಟಿಗೆ ಬಳಸಲಾಗಿದೆ. ಹಿಂದುಳಿದ ವರ್ಗದ ಬಗ್ಗೆ ಕಾಂಗ್ರೆಸ್‌ ನಾಯಕರು ಮಾತನಾಡುತ್ತಾರೆ. ಆದರೆ ಪ್ರಧಾನಿ ಮೋದಿ ಅವರಂಥ ಹಿಂದುಳಿದ ನಾಯಕ ಬೇರೊಬ್ಬರಿಲ್ಲ. ಆದರೂ ಅವರು ಎಲ್ಲೂ ಹಾಗೆ ಹೇಳಿಕೊಳ್ಳುವುದಿಲ್ಲ ಎಂದರು.

ಮೋದಿ ಗ್ಯಾರಂಟಿ: ದೇಶದ ಭವಿಷ್ಯ ರೂಪಿಸುವ, ಮಕ್ಕಳ ಬದುಕನ್ನು ಬಂಗಾರ ಮಾಡುವ, ಮಹಿಳಾ ಸಬಲೀಕರಣ ಮಾಡುವ ಗ್ಯಾರಂಟಿಯೇ ಮೋದಿ ಗ್ಯಾರಂಟಿ. ತಾತ್ಕಾಲಿಕ ಅನುಕೂಲಕ್ಕಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ. ಕಾಂಗ್ರೆಸ್‌ ಸರ್ಕಾರ ಒಂದೂವರೆ ಲಕ್ಷ ಕೋಟಿ ರು. ಸಾಲ ಮಾಡಿದೆ. ಇಂತಹ ಪಕ್ಷ ರಾಜ್ಯಕ್ಕೆ ಬೇಡ ಎಂದರು.

ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ, ಅಭಿವೃದ್ಧಿ ಪರ್ವ ಸೃಷ್ಟಿಸುವೆ: ಡಾ.ಕೆ.ಸುಧಾಕರ್

ಸವಾಲು ಸ್ವೀಕರಿಸಿ: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಂದು ಕಿ.ಮೀ. ರಸ್ತೆ ನಿರ್ಮಿಸದವರೂ ಒಂದು ಹೆಚ್ಚುವರಿ ಮತ ದೊರೆಯಲಿ ನೋಡೋಣ ಎಂದು ಸವಾಲು ಹಾಕುತ್ತಾರೆ. ಪ್ರತಿ ಕಾರ್ಯಕರ್ತರು ಈ ಸವಾಲನ್ನು ಸ್ವೀಕರಿಸಿ ಪ್ರತಿ ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು‌. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಒಂದು ಲಕ್ಷಕ್ಕೂ ಅಧಿಕ ಮತ ತಂದುಕೊಡಬೇಕು ಎಂದು ಮನವಿ ಮಾಡಿದರು. ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ರಾಜ್ಯದ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ರಾಜ್ಯ ಕಾರ್ಯದರ್ಶಿ ಶ್ರೀ ಸಿ.ಮುನಿರಾಜು, ಜಿಲ್ಲಾಧ್ಯಕ್ಷ ಶ್ರೀ ರಾಮಲಿಂಗಪ್ಪ, ಮುಖಂಡರಾದ ರವಿನಾರಾಯಣ ರೆಡ್ಡಿ, ಮೋಹನ್, ಡಾ.ಶಶಿಧರ್, ಜೆಡಿಎಸ್ ತಾಲೂಕು ಅಧ್ಯಕ್ಷ ಮಂಜುನಾಥ್ ರೆಡ್ಡಿ, ರಮೇಶ್ ರಾವ್ ಶೆಲ್ಕೆ, ಜೆಡಿಎಸ್ ಮುಖಂಡರಾದ ನರಸಿಂಹಮೂರ್ತಿ, ಕಾರ್ಯಕರ್ತರು ಉಪಸ್ಥಿತರಿದ್ದರು.

click me!