'ನನ್ನನ್ನು ದಲಿತ ನಾಯಕ ಎನ್ನಬೇಡಿ, ಕಾಂಗ್ರೆಸ್ಸಿಗ ಎನ್ನಿ'

By Web DeskFirst Published Dec 5, 2019, 8:01 AM IST
Highlights

ನನ್ನನ್ನು ದಲಿತ ನಾಯಕ ಎನ್ನಬೇಡಿ: ಖರ್ಗೆ| 55 ವರ್ಷ ಕಾಂಗ್ರೆಸ್‌ಗಾಗಿ ದುಡಿದಿದ್ದೇನೆ, ಕಾಂಗ್ರೆಸಿಗ ಎಂದು ಕರೆಯಿರಿ| ದಲಿತ ಸಿಎಂ ಎನ್ನಲು ಮುಖ್ಯಮಂತ್ರಿ ಸ್ಥಾನ ದಲಿತರಿಗೆ ಮೀಸಲಿದೆಯೇ?

 

ಬೆಂಗಳೂರು[ಡಿ.05]: ತಮ್ಮನ್ನು ದಲಿತ ನಾಯಕ ಎಂದು ಬಿಂಬಿಸುವುದಕ್ಕೆ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘55 ವರ್ಷಗಳಿಂದ ಕಾಂಗ್ರೆಸ್‌ಗಾಗಿ ದುಡಿಯುತ್ತಿದ್ದೇನೆ. ನನ್ನನ್ನು ಕಾಂಗ್ರೆಸ್ಸಿಗ ಎಂದು ಕರೆಯಿರಿ. ದಲಿತ ನಾಯಕ ಅಥವಾ ದಲಿತ ಮುಖ್ಯಮಂತ್ರಿ ಎಂದು ಏಕೆ ಕರೆಯುತ್ತೀರಿ? ದಲಿತ ಮುಖ್ಯಮಂತ್ರಿ ಎಂದು ಹೇಳಲು ಮುಖ್ಯಮಂತ್ರಿ ಸ್ಥಾನ ದಲಿತರಿಗೆ ಮೀಸಲಿದೆಯೇ?’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಪದೇ ಪದೇ ದಲಿತ ಎಂದು ಹೇಳುತ್ತಿರುವುದು ಏಕೆ? ನನ್ನನ್ನು ದಲಿತ ನಾಯಕ ಎಂದು ಕರೆಯಬೇಡಿ. 55 ವರ್ಷಗಳ ಕಾಲ ಕಾಂಗ್ರೆಸ್‌ಗಾಗಿ ದುಡಿದಿದ್ದೇನೆ. ಕಾಂಗ್ರೆಸ್ಸಿಗ ಎಂದು ಕರೆಯಿರಿ ಸಾಕು ಎಂದು ಸ್ಪಷ್ಟಪಡಿಸಿದರು.

55 ವರ್ಷದಿಂದ ಕಾಂಗ್ರೆಸ್‌ ಪಕ್ಷದಲ್ಲಿದ್ದೇನೆ. ಹೀಗಿದ್ದರೂ ನಾನು ದಲಿತ ಮುಖ್ಯಮಂತ್ರಿ ಆಗಬೇಕಾ? ನಾನು ಇನ್ನೂ ದಲಿತ ಮುಖ್ಯಮಂತ್ರಿ ಆಗಬೇಕು ಎನ್ನುವುದಾದರೆ ನನಗೆ ತೀವ್ರ ನೋವಾಗುತ್ತದೆ. ನನ್ನನ್ನು ಆ ರೀತಿಯಾಗಿ ಕರೆಯಬೇಡಿ. ದಲಿತ ಮುಖ್ಯಮಂತ್ರಿ ಎಂದು ಹೇಳಲು ಮುಖ್ಯಮಂತ್ರಿ ಸ್ಥಾನ ದಲಿತರಿಗೆ ಮೀಸಲಿದೆಯೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವರಿಷ್ಠರದ್ದೇ ಅಂತಿಮ ನಿರ್ಧಾರ:

ಡಿ.9ರ ಬಳಿಕ ಮಲ್ಲಿಕಾರ್ಜುನ ಖರ್ಗೆ ಸಿಹಿ ಹಂಚಲಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಲು ಮಲ್ಲಿಕಾರ್ಜುನ ಖರ್ಗೆ ನಿರಾಕರಿಸಿದರು. ಇದೇ ವೇಳೆ, ರಾಜ್ಯದಲ್ಲಿ ಕಾಂಗ್ರೆಸ್‌ನತ್ತ ಜನರ ಒಲವಿದೆ. ಹೀಗಾಗಿ ಕಾಂಗ್ರೆಸ್‌ 15 ಕ್ಷೇತ್ರಗಳಲ್ಲೂ ಗೆಲ್ಲುವ ನಿರೀಕ್ಷೆ ಇದೆ. ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ಡಿ.9ರ ಬಳಿಕ ಫಲಿತಾಂಶದ ಬಳಿಕ ಹೈಕಮಾಂಡ್‌ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಮತ್ತೆ ಆಪರೇಷನ್‌ ಕಮಲದ ಮೂಲಕ ಕಾಂಗ್ರೆಸ್‌ ನಾಯಕರನ್ನು ಸೆಳೆಯುವ ಪ್ರಯತ್ನದ ಬಗ್ಗೆ ನನಗೆ ಗೊತ್ತಿಲ್ಲ. ಗೊತ್ತಿಲ್ಲದ ವಿಚಾರದ ಬಗ್ಗೆ ಹೇಳಿಕೆ ನೀಡುವುದಿಲ್ಲ. ಬಿಜೆಪಿಗೆ ಎಷ್ಟುಸ್ಥಾನ ಬರುತ್ತದೆ ಎಂಬುದನ್ನು ನೋಡೋಣ. ಮಹಾರಾಷ್ಟ್ರದ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ರಾಜ್ಯ ನಾಯಕರ ಜತೆ ಮಾತನಾಡಿದ್ದಾರೆ ಎಂಬ ವಿಚಾರವೂ ಗೊತ್ತಿಲ್ಲ. ಊಹಾಪೋಹದ ಪ್ರಶ್ನೆಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನು ಮೈತ್ರಿ ಸರ್ಕಾರ ಬೀಳುವುದರಲ್ಲಿ ನನ್ನ ಪಾತ್ರವಿದೆ ಎಂಬ ಎಸ್‌.ಎಂ. ಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ಹೋಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಅವರಿಗೆ ಒಳ್ಳೆಯದಾಗಲಿ ಎಂದು ತಿರುಗೇಟು ನೀಡಿದರು.

‘ಚಿದಂಬರಂ ಪ್ರಕರಣ ತೀರ್ಪು ವಿಳಂಬವಾಗಿದೆ’

ಕೇಂದ್ರದ ಮಾಜಿ ಹಣಕಾಸು ಸಚಿವ ಚಿದಂಬರಂ ಮೇಲೆ ರಾಜಕೀಯ ದುರುದ್ದೇಶದಿಂದ ಐಎನ್‌ಎಕ್ಸ್‌ ಮೀಡಿಯಾ ಪ್ರಕರಣ ದಾಖಲಿಸಲಾಗಿದೆ. ಸುಪ್ರೀಂಕೋರ್ಟ್‌ನಿಂದ ಜಾಮೀನು ಸಿಕ್ಕಿದೆಯಾದರೂ ತೀರ್ಪು ತುಂಬಾ ವಿಳಂಬವಾಗಿದೆ. ಇದರಿಂದ ಮೂರು ತಿಂಗಳು ಜೈಲುವಾಸ ಮಾಡಬೇಕಾಯಿತು ಎಂದು ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್‌ ತೀರ್ಪು ತಡವಾಗಿ ಬಂದರೂ ಅದನ್ನು ನಾನು ಸ್ವಾಗತಿಸುತ್ತೇನೆ. ಕಾನೂನು ಅಡಿಯಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡಲಿ. ಅದನ್ನು ಬಿಟ್ಟು ಉದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸುವುದು ಬೇಡ ಎಂದು ಸಲಹೆ ನೀಡಿದರು.

 

click me!