ಮತ್ತೆ ಮರುಕಳಿಸುತ್ತಿವೆ ಹಿಂದಿನ ಘಟನೆ : ಕಳಂಕದ ಖೆಡ್ಡಾಕ್ಕೆ ಬೀಳುತ್ತಿದೆ ಬಿಜೆಪಿ!

By Sujatha NRFirst Published Nov 29, 2020, 6:59 AM IST
Highlights

ರಾಜ್ಯದಲ್ಲಿ ರಾಜಕೀಯ ಕಿತ್ತಾಟ ಶುರುವಾಗಿದೆ. ಮತ್ತೆ ರಾಜಕೀಯದಲ್ಲಿ ಹಳೆಯ ಘಟನೆಗಳು ಮರುಕಳಿಸುತ್ತಿದೆ. 

 ಬೆಂಗಳೂರು (ನ.29):   ಆಡಳಿತಾರೂಢ ಬಿಜೆಪಿಯಲ್ಲಿ ಮತ್ತೆ ಹಿಂದಿನ ಘಟನೆಗಳೇ ಮರುಕಳಿಸುತ್ತಿವೆ. ಸ್ವಯಂಕೃತ ಅಪರಾಧಗಳಿಂದ ತನ್ನ ಹೆಸರಿಗೆ ತಾನೇ ಕಳಂಕ ಮೆತ್ತಿಕೊಳ್ಳುವ ದಾರಿಯಲ್ಲಿ ಹೆಜ್ಜೆ ಹಾಕುತ್ತಿರುವಂತಿದೆ.

ಆಂತರಿಕ ತಿಕ್ಕಾಟ ಹಾಗೂ ಬಣ ರಾಜಕೀಯ ಬೆಳವಣಿಗೆ ಪಕ್ಷದಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು, ಕಾರ್ಯಕರ್ತರ ಪಾಳೆಯದಲ್ಲಿ ಆತಂಕ ಕಾಣಿಸಿಕೊಳ್ಳುತ್ತಿದೆ. ಏನೂ ನಡೆಯುತ್ತಿಲ್ಲ ಎಂದು ಬಹಿರಂಗವಾಗಿ ಸಮಜಾಯಿಷಿ, ಸ್ಪಷ್ಟನೆ ನೀಡುತ್ತಲೇ ಗುಂಪುಗಾರಿಕೆ ಭರದಿಂದಲೇ ನಡೆಯುತ್ತಿದೆ. ನಾಯಕತ್ವ ಬದಲಾವಣೆ ಬಗ್ಗೆ ಪಕ್ಷದ ಮುಖಂಡರು ತೆರೆಮರೆಯಲ್ಲಿ ವಾದ-ಪ್ರತಿವಾದಗಳನ್ನು ಮಂಡಿಸುತ್ತಲೇ ಇದ್ದಾರೆ. ಇದು ಸದ್ಯಕ್ಕೆ ನಿಲ್ಲುವ ಲಕ್ಷಣವೂ ಕಾಣುತ್ತಿಲ್ಲ. ಪಕ್ಷದ ವರಿಷ್ಠರೂ ಇದಕ್ಕೆ ಬ್ರೇಕ್‌ ಹಾಕುವ ಗಂಭೀರ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಅಳಲು ಪಕ್ಷದ ಕಾರ್ಯಕರ್ತರಿಂದ ವ್ಯಕ್ತವಾಗುತ್ತಿದೆ.

2008ರ ನೆನಪು: ಹಿಂದೆ 2008ರಲ್ಲಿ ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದಾಗ ಪಕ್ಷದ ಕಾರ್ಯಕರ್ತರಷ್ಟೇ ಅಲ್ಲ ಜನಸಾಮಾನ್ಯರಲ್ಲೂ ಸಾಕಷ್ಟುನಿರೀಕ್ಷೆ ಇತ್ತು. ಆದರೆ, ದಿನಗಳೆದಂತೆ ಆ ನಿರೀಕ್ಷೆ ಹುಸಿಯಾಗತೊಡಗಿತು. ಬಣ ರಾಜಕೀಯ ತಾರಕಕ್ಕೇರಿ ಅಂತಿಮವಾಗಿ ಮೂವರು ಮುಖ್ಯಮಂತ್ರಿಗಳನ್ನು ಕಾಣಬೇಕಾಯಿತು. ಮಾಡಿದ ಒಳ್ಳೆಯ ಕೆಲಸಗಳು ಮರೆಯಾಗಿ ಆಂತರಿಕ ಕಚ್ಚಾಟವೇ ಮೇಲುಗೈ ಸಾಧಿಸಿತು. ಪರಿಣಾಮ, ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಮಕಾಡೆ ಮಲಗಿತು.

ಈ ಹಿಂದೆ ಪಿಎ ಗಲಾಟೆ ಎಲ್ಲಿಗೆ ಬಂತು ಗೊತ್ತಲ್ಲ: ಈಶ್ವರಪ್ಪಗೆ ಡಿಕೆಶಿ ತಿರುಗೇಟು

ಈ ಬಾರಿಯ ಆಡಳಿತದಲ್ಲೂ ಹಿಂದಿನ ಘಟನೆಗಳೇ ಪುನರಾವರ್ತನೆ ಆಗತೊಡಗಿವೆ. ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಬೆನ್ನಲ್ಲೇ ಆಂತರಿಕ ತಿಕ್ಕಾಟದ ಬೆಳವಣಿಗೆಗಳು ಗರಿಗೆದರಿದವು. ಕಳೆದ ಹಲವು ತಿಂಗಳುಗಳಿಂದ ಬಿಜೆಪಿಯ ಸಚಿವರು, ಶಾಸಕರು ಅಥವಾ ಮುಖಂಡರು ಅಭಿವೃದ್ಧಿ ಕೆಲಸಗಳನ್ನು ಬಿಟ್ಟು ಕೇವಲ ಮಾಧ್ಯಮ ಆಧರಿತ ಹೇಳಿಕೆಗಳನ್ನು ನೀಡುವುದರಲ್ಲೇ ನಿರತರಾಗಿದ್ದಾರೆ. ಅದನ್ನೇ ಸಂಭ್ರಮ ರೀತಿ ನೋಡುತ್ತಿದ್ದಾರೆ ಎಂಬ ನೋವನ್ನು ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ.

"

‘ಪ್ರಸಕ್ತ ಕೋವಿಡ್‌ನಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ತೀರಾ ಕೆಳಮಟ್ಟಕ್ಕೆ ಕುಸಿದಿದೆ. ಆದರೆ, ಬಿಜೆಪಿ ನಾಯಕರು ಮಾತ್ರ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಉಪಚುನಾವಣೆ, ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕ, ಪ್ರತ್ಯೇಕ ಸಭೆಗಳಲ್ಲೇ ಕಾಲ ಕಳೆಯುತ್ತಿದ್ದಾರೆ. ಅದನ್ನು ಬಿಟ್ಟರೆ ಪ್ರತಿಪಕ್ಷಗಳ ನಾಯಕರ ಆರೋಪಗಳಿಗೆ ಸಾಕ್ಷ್ಯ ಸಮೇತ ತಿರುಗೇಟು ನೀಡುವ ಅಥವಾ ಇಂತಿಂಥ ಕೆಲಸವನ್ನು ತಮ್ಮ ಸರ್ಕಾರ ಮಾಡಿದೆ ಎಂಬುದನ್ನು ಅಂಕಿ ಅಂಶಗಳ ಸಮೇತ ನಿರೂಪಿಸುವಂಥ ಪ್ರಯತ್ನ ಸಾಮೂಹಿಕವಾಗಿ ಆಗುತ್ತಿಲ್ಲ. ಕೆಲವೇ ಕೆಲವು ಸಚಿವರು ಹಾಗೂ ನಾಯಕರು ಮಾತ್ರ ನಿಖರವಾಗಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆಯೇ ಹೊರತು ಎಲ್ಲರೂ ಅಲ್ಲ. ಬಹುತೇಕರು ಮಾಧ್ಯಮ ಹೇಳಿಕೆಗಳನ್ನು ಗಂಭೀರವಾಗಿಯೇ ಪರಿಗಣಿಸಿಲ್ಲ’ ಎಂಬ ಅಸಮಾಧಾನದ ಮಾತುಗಳು ಬಿಜೆಪಿ ಪಾಳೆಯದಿಂದಲೇ ಕೇಳಿಬರುತ್ತಿವೆ.

ವರಿಷ್ಠರ ಮೌನವೇಕೆ?:

ಪಕ್ಷದ ವರಿಷ್ಠರಿಗೆ ರಾಜ್ಯದ ಬೆಳವಣಿಗೆಗಳ ಬಗ್ಗೆ ಮಾಹಿತಿಯಿದೆ. ತಕ್ಷಣವೇ ರಾಜ್ಯದ ಹಿರಿಯ ನಾಯಕರ ಸಭೆ ಕರೆದು ಸರ್ಕಾರ ಮತ್ತು ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುವಂಥ ಬೆಳವಣಿಗೆಗಳನ್ನು ಸಹಿಸಿಕೊಳ್ಳುವುದಿಲ್ಲ ಎಂದು ನೇರವಾಗಿ ತಾಕೀತು ಮಾಡುವಂಥ ಧಾಷ್ಟ್ರ್ಯ ತೋರಬೇಕಿದೆ. ಇಲ್ಲದಿದ್ದರೆ ಮತ್ತೆ ಇತಿಹಾಸ ಪುನರಾವರ್ತನೆಯಾಗಿ ಪಕ್ಷಕ್ಕೆ ಸಾಕಷ್ಟುಹಿನ್ನಡೆ ಉಂಟಾಗಬಹುದು. ಇನ್ನು ವಿಳಂಬ ಮಾಡದೆ ವರಿಷ್ಠರು ಕ್ರಮಕ್ಕೆ ಮುಂದಾಗಬೇಕು. ಸದ್ಯಕ್ಕೆ ಉದ್ಭವಿಸಿರುವ ಪಕ್ಷದಲ್ಲಿನ ಗೊಂದಲಗಳನ್ನು ಆದಷ್ಟುಬೇಗ ನಿವಾರಿಸಿ ಸರ್ಕಾರ ಜನಪರ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು ಎಂದು ಹಲವು ಮುಖಂಡರು ಹಾಗೂ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- ಅಭಿವೃದ್ಧಿ ಕೆಲಸಗಳಿಗಿಂತ ಆಂತರಿಕ ತಿಕ್ಕಾಟದ್ದೇ ಸದ್ದು

- 2008ರ ತಪ್ಪನ್ನೇ ಪುನರಾವರ್ತಿಸುತ್ತಿರುವ ಕೇಸರಿ ಪಡೆ

- ವಿಪಕ್ಷಗಳಿಂದಲ್ಲ, ಸ್ವಯಂಕೃತ ಅಪರಾಧದಿಂದ ಕಳಂಕ

- ವರಿಷ್ಠರೂ ಬ್ರೇಕ್‌ ಹಾಕುತ್ತಿಲ್ಲ: ಕಾರ‍್ಯಕರ್ತರ ಅಳಲು

1. 2008ರಲ್ಲಿ ಬಿಜೆಪಿ ಗೆದ್ದಾಗ ಪಕ್ಷದ ಕಾರ‍್ಯಕರ್ತರು, ಜನಸಾಮಾನ್ಯರಲ್ಲಿ ಭಾರೀ ನಿರೀಕ್ಷೆ

2. ದಿನ ಕಳೆದಂತೆ ಬಣ ರಾಜಕೀಯ ತಾರಕಕ್ಕೇರಿ 3 ಸಿಎಂ ಕಂಡ ಬಿಜೆಪಿ. ನಿರೀಕ್ಷೆಗಳು ಹುಸಿ

3. ಅಂತರಿಕ ಕಚ್ಚಾಟದಿಂದ ಪಕ್ಷ ಹೋಳು. 2013ರ ಚುನಾವಣೆಯಲ್ಲಿ ಭಾರೀ ಸೋಲು

4. ಈ ಬಾರಿಯೂ ಹಿಂದಿನ ಘಟನೆ ಪುನರಾವರ್ತನೆ. ಅಭಿವೃದ್ಧಿಗಿಂತ ತಿಕ್ಕಾಟವೇ ಹೆಚ್ಚು

5. ಸರ್ಕಾರವೂ ಟೇಕಾಫ್‌ ಆಗುತ್ತಿಲ್ಲ. ವರಿಷ್ಠರೂ ಕೇರ್‌ ಮಾಡುತ್ತಿಲ್ಲ: ಪಕ್ಷದಲ್ಲಿ ಬೇಸರ

click me!