ವಿದೇಶದಿಂದ ಕಪ್ಪು ಹಣ ತರುವುದಾಗಿ ಹೇಳಿದ್ದರು. ಆದರೆ ತರಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು, ಹೊಸ ಉದ್ಯೋಗ ಸೃಷ್ಟಿಯಾಗುವುದಿರಲಿ ಇರುವ ಉದ್ಯೋಗಗಳೇ ನಷ್ಟ ಆದವು. ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದಿರಿ, ಆದರೆ ರೈತರ ಖರ್ಚು ಮೂರು ಪಟ್ಟು ಆಗಿದೆ, ಡಾಲರ್ ಎದುರು ರುಪಾಯಿ ಮೌಲ್ಯ ಹೆಚ್ಚಿಸುವುದಾಗಿ ಹೇಳಿದರು. ಆದರೆ ರುಪಾಯಿ ಮೌಲ್ಯ ಪಾತಾಳಕ್ಕೆ ಇಳಿದಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ದೊಡ್ಡಬಳ್ಳಾಪುರ(ಏ.20): ಬೆಲೆ ಏರಿಕೆ, ರುಪಾಯಿ ಮೌಲ್ಯ ಕುಸಿತ, ರೈತರ ಆದಾಯ ಕುಸಿತ, ನಿರುದ್ಯೋಗ ಹೆಚ್ಚಳ, ದೇಶದ ಆರ್ಥಿಕತೆಯ ವಿನಾಶ..... ಇವುಗಳೇ ಕಳೆದ ಹತ್ತು ವರ್ಷಗಳ ಆಡಳಿತದಲ್ಲಿ ನರೇಂದ್ರ ಮೋದಿ ಅವರ ಸಾಧನೆಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
undefined
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಾ ರಾಮಯ್ಯ ಪರ ದೊಡ್ಡಬಳ್ಳಾಪುರದಲ್ಲಿ ರೋಡ್ ಶೋ ವೇಳೆ ಮಾತನಾಡಿ, ಇಂತಹ ಚಂದಕ್ಕೆ ಇವರು ಮತ್ತೆ ಪ್ರಧಾನಿ ಆಗ್ಬೇಕಾ ಎಂದು ಪ್ರಶ್ನಿಸಿದ ಅವರು, ಹತ್ತತ್ತು ವರ್ಷ ಪ್ರಧಾನಿ ಆಗಿ ರೈತರಿಗೆ, ಕಾರ್ಮಿಕರಿಗೆ, ಯುವ ಸಮೂಹಕ್ಕೆ, ಮಹಿಳೆಯರಿಗೆ, ದುಡಿಯುವ ವರ್ಗಗಳಿಗೆ, ಕೃಷಿ ಕಾರ್ಮಿಕರಿಗೆ, ಮಧ್ಯಮ ವರ್ಗದವರಿಗೆ, ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಿಗಳಿಗೆ ಒಂದೇ ಒಂದು ಕಾರ್ಯಕ್ರಮವನ್ನೂ ಇವರಿಂದ ಕೊಡಲಾಗಲಿಲ್ಲ. ಮೋದಿಯವರು ಪ್ರಧಾನಿ ಆಗಿ ಭಾರತೀಯರಿಗೆ ಮತ್ತು ದೇಶಕ್ಕೆ ಸಿಕ್ಕಿದ್ದಾದರೂ ಏನು ಎಂಬುದಕ್ಕೆ ಅವರೇ ಉತ್ತರಿಸಬೇಕು ಎಂದು ಹೇಳಿದರು.
ದೇವೇಗೌಡರು, ಕುಮಾರಸ್ವಾಮಿ ನಿಮ್ಮ ಕಷ್ಟ ಸುಖ ಕೇಳಿದ್ದರಾ? ಡಿ.ಕೆ.ಸುರೇಶ್ ಪ್ರಶ್ನೆ
ವಿದೇಶದಿಂದ ಕಪ್ಪು ಹಣ ತರುವುದಾಗಿ ಹೇಳಿದ್ದರು. ಆದರೆ ತರಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು, ಹೊಸ ಉದ್ಯೋಗ ಸೃಷ್ಟಿಯಾಗುವುದಿರಲಿ ಇರುವ ಉದ್ಯೋಗಗಳೇ ನಷ್ಟ ಆದವು. ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದಿರಿ, ಆದರೆ ರೈತರ ಖರ್ಚು ಮೂರು ಪಟ್ಟು ಆಗಿದೆ, ಡಾಲರ್ ಎದುರು ರುಪಾಯಿ ಮೌಲ್ಯ ಹೆಚ್ಚಿಸುವುದಾಗಿ ಹೇಳಿದರು. ಆದರೆ ರುಪಾಯಿ ಮೌಲ್ಯ ಪಾತಾಳಕ್ಕೆ ಇಳಿದಿದೆ ಎಂದು ಆರೋಪಿಸಿದರು.
ಮೋದಿ ಕೊಟ್ಟ ಮಾತು ಈಡೇರಿಸಿಲ್ಲ!
ಬಿಜೆಪಿಯಾಗಲೀ, ಮೋದಿಯವರಾಗಲೀ ಕೊಟ್ಟ ಮಾತಲ್ಲಿ ಒಂದನ್ನೂ ಈಡೇರಿಸಲಿಲ್ಲ. ಬದಲಿಗೆ ಹೇಳಿದ್ದಕ್ಕೆ ಉಲ್ಟಾ ಅನಾಹುತಗಳನ್ನೇ ಮಾಡಿದ್ದಾರೆ. ಕೊರೋನಾ ಸಂದರ್ಭದಲ್ಲೂ ಕೋಟಿ ಕೋಟಿ ಕೊಳ್ಳೆ ಹೊಡೆದವರನ್ನು ಕ್ಷಮಿಸಲು ಸಾಧ್ಯವೇ? ಕೋವಿಡ್ ಹಗರಣದ ತನಿಖೆ ನಡೆಯುತ್ತಿದೆ. ಹಗರಣ ನಡೆದಿರುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿರುವ ಬಗ್ಗೆ ನನಗೆ ಮಾಹಿತಿ ಇದೆ. ತನಿಖೆ ಪೂರ್ಣಗೊಂಡ ಬಳಿಕ ಭ್ರಷ್ಟಾಚಾರಿಗೆ ತಕ್ಕ ಶಾಸ್ತಿ ಆಗುತ್ತದೆ ಎಂದರು.
ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸುಧಾಕರ್ ಅವರನ್ನು ಸೋಲಿಸಿ ಕನ್ನಡ ನಾಡಿನ ಪರವಾಗಿ ಧ್ವನಿ ಎತ್ತುವ ರಕ್ಷಾ ರಾಮಯ್ಯರನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದ ಅವರು, ರಕ್ಷಾ ರಾಮಯ್ಯ ಗೆದ್ದರೆ ನಾನು ಗೆದ್ದಂತೆ, ನೀವು ಗೆದ್ದಂತೆ, ಕರ್ನಾಟಕ ಗೆದ್ದಂತೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಸಚಿವ ಕೃಷ್ಣಬೈರೇಗೌಡ, ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಸೇರಿದಂತೆ ಸ್ಥಳೀಯ ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.