ಸರ್ಕಾರದ ವರ್ಚಸ್ಸು ವೃದ್ಧಿಸಿ ಪಕ್ಷ ಸಂಘಟಿಸಿ: ಅಮಿತ್‌ ಶಾ

By Kannadaprabha NewsFirst Published Aug 5, 2022, 5:00 AM IST
Highlights

ಬೆಂಗ್ಳೂರು ಭೇಟಿ ವೇಳೆ ಸಿಎಂ, ಕಟೀಲ್‌ ಸೇರಿ ಆಯ್ದ ಬಿಜೆಪಿ ನಾಯಕರಿಗೆ ಸೂಚನೆ

ಬೆಂಗಳೂರು(ಆ.05): ಈಗಿರುವ ಪಕ್ಷ ಸಂಘಟನೆ ಹಾಗೂ ರಾಜ್ಯ ಸರ್ಕಾರದ ವರ್ಚಸ್ಸು ಸಾಲದು. ಇದೇ ಪರಿಸ್ಥಿತಿಯನ್ನೇ ಮುಂದಿಟ್ಟುಕೊಂಡು ಹೋದರೆ ಚುನಾವಣೆ ಎದುರಿಸುವುದು ಕಷ್ಟವಾಗಲಿದೆ. ಪಕ್ಷ ಸಂಘಟನೆ ಬಲಪಡಿಸುವುದರ ಜತೆಗೆ ಸರ್ಕಾರದ ವರ್ಚಸ್ಸು ಹೆಚ್ಚಿಸಲು ತಕ್ಷಣ ಕ್ರಮ ಕೈಗೊಳ್ಳಿ ಎಂದು ಕೇಂದ್ರ ಗೃಹ ಸಚಿವ ಹಾಗೂ ರಾಷ್ಟ್ರೀಯ ಬಿಜೆಪಿಯ ಪ್ರಭಾವಿ ನಾಯಕ ಅಮಿತ್‌ ಶಾ ಅವರು ರಾಜ್ಯ ನಾಯಕರಿಗೆ ತಾಕೀತು ಮಾಡಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಸೇರಿದಂತೆ ಪಕ್ಷದ ಆಯ್ದ ನಾಯಕರ ಜತೆ ಸಮಾಲೋಚನೆ ನಡೆಸಿದ ಅಮಿತ್‌ ಶಾ ಅವರು, ಮುಂಬರುವ ವಿಧಾನಸಭಾ ಚುನಾವಣೆಗೆ ‘ಮಾರ್ಗ ನಕ್ಷೆ’ ಸಿದ್ಧಪಡಿಸಿ ಎಂಬ ಸೂಚನೆಯನ್ನೂ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯ ಅಧಿಕೃತ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದ ಅಮಿತ್‌ ಶಾ ಅವರು ತಾವು ಉಳಿದುಕೊಂಡಿದ್ದ ಪಂಚತಾರಾ ಹೋಟೆಲ್‌ಗೆ ಬಿಜೆಪಿ ನಾಯಕರನ್ನು ಕರೆಸಿಕೊಂಡು ಸುದೀರ್ಘ ಮಾತುಕತೆ ನಡೆಸಿ ರಾಜ್ಯದ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಅಮಿತ್ ಶಾ ದಿಢೀರ್ ಕರ್ನಾಟಕ ಪ್ರವಾಸ, ರಾಜ್ಯ ಬಿಜೆಪಿಯಲ್ಲಿ ಸಂಚಲನ

ಕಳೆದ ಬಾರಿ ಆಗಮಿಸಿದ ವೇಳೆ ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದ ವಿಷಯಗಳ ಫಾಲೋ ಅಪ್‌ ಕೇಳಿದ ಅಮಿತ್‌ ಶಾ ಅವರು, ಪಕ್ಷ ಹಾಗೂ ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಸಾಗದೇ ಇರುವ ಬಗ್ಗೆ ತುಸು ಬೇಸರ ವ್ಯಕ್ತಪಡಿಸಿದರು. ಅಲ್ಲದೆ, ಸದ್ಯದ ಪರಿಸ್ಥಿತಿಯಲ್ಲೇ ನಾವು ಚುನಾವಣೆ ಎದುರಿಸಿದರೆ ಪಕ್ಷ ತನ್ನ ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಏರಲು ಸಾಧ್ಯವಿಲ್ಲ ಎಂಬ ಮಾತನ್ನೂ ಹೇಳಿದರು ಎನ್ನಲಾಗಿದೆ.

ಸಮನ್ವಯತೆ ಹೆಚ್ಚಾಗಲಿ:

ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯತೆ ಇನ್ನೂ ಹೆಚ್ಚಾಗಬೇಕು. ಚುನಾವಣೆಗೆ ಇನ್ನೂ ಎಂಟು ತಿಂಗಳು ಇದೆಯಲ್ಲ ಎಂಬ ಕಾರಣಕ್ಕೆ ಈಗ ಸುಮ್ಮನೆ ಕುಳಿತುಕೊಳ್ಳಬಾರದು. ಈಗಿನಿಂದಲೇ ಭರದ ತಯಾರಿ ಆರಂಭವಾಗಬೇಕು. ಅದಕ್ಕೆ ಬೇಕಾದ ಸಿದ್ಧತೆಗಳ ಪಟ್ಟಿನಮ್ಮ ಮುಂದಿರಬೇಕು. ಪ್ರತಿಪಕ್ಷ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎರಡರ ಚಟುವಟಿಕೆಗಳನ್ನು ಗಮನಿಸಬೇಕು. ಕೇಂದ್ರ ಹಾಗೂ ರಾಜ್ಯ ಎರಡರಲ್ಲೂ ಅಧಿಕಾರದಲ್ಲಿರುವ ಪಕ್ಷ ಬಿಜೆಪಿ. ಹೀಗಿರುವಾಗ ಪ್ರತಿಪಕ್ಷಗಳಿಗಿಂತ ಹೆಚ್ಚಿನ ಹುಮ್ಮಸ್ಸು ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಇರುವಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಆಲಸಿತನ ಒಳ್ಳೆಯದಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸದಲ್ಲಿ ಪಕ್ಷ ಹಿಂದೆ ಬೀಳಬಾರದು ಎಂದು ಅಮಿತ್‌ ಶಾ ಅವರು ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಈ ವೇಳೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಉಪಾಧ್ಯಕ್ಷ ನಿರ್ಮಲ್‌ಕುಮಾರ್‌ ಸುರಾನಾ ಹಾಗೂ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಅವರೂ ಉಪಸ್ಥಿತರಿದ್ದರು.

ಸರಣಿ ಹತ್ಯೆ ನಿಯಂತ್ರಿಸಿ: ಸಿಎಂಗೆ ಅಮಿತ್‌ ಸೂಚನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದ ಸರಣಿ ಹತ್ಯೆಯಂಥ ಘಟನೆಗಳನ್ನು ತಕ್ಷಣ ನಿಯಂತ್ರಿಸಿ ಎಂದು ಅಮಿತ್‌ ಶಾ ಅವರು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಸೂಚನೆ ನೀಡಿದ್ದಾರೆ. ಇಂಥ ಘಟನೆಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪಕ್ಷ-ಸರ್ಕಾರಕ್ಕೆ ಒಳ್ಳೆಯ ಹೆಸರು ತಂದುಕೊಡುವುದಿಲ್ಲ. ಮೇಲಾಗಿ ಜನಸಾಮಾನ್ಯರಿಗೆ ಒಳ್ಳೆಯ ಭಾವನೆ ಬರುವುದಿಲ್ಲ. ಹೀಗಾಗಿ, ಮುಂದೆ ಇಂಥ ಘಟನೆಗಳು ಪುನರಾವರ್ತನೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಖಡಕ್ಕಾಗಿ ಹೇಳಿದರು ಎನ್ನಲಾಗಿದೆ.
 

click me!