ಈಗಾಗಲೇ ಅಂತಿಮ ಹಂತದ ಮಾತುಕತೆಯೂ ಮುಗಿದಿದ್ದು, ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು ಕಾಂಗ್ರೆಸ್ ಪಕ್ಷ ಸೇರಲು ಮುಹೂರ್ತ ಫಿಕ್ಸ್ ಆಗಿದೆ.
ಬೆಂಗಳೂರು, (ಅ.10): ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ. ಕಾಂಗ್ರೆಸ್ ಹಿರಿಯ ನಾಯಕರ ಜತೆ ಶರತ್ ಬಚ್ಚೇಗೌಡ ನಡೆಸಿರುವ ಮಾತುಕತೆ ಇದಕ್ಕೆ ಪುಷ್ಟಿ ನೀಡಿದಂತಿದೆ.
ಹೊಸಕೋಟೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗಾರಾಜ್ ವಿರುದ್ಧ ಭರ್ಜರಿ ಗೆಲುವಿನ ಬಳಿಕ ಶರತ್ ಬಚ್ಚೇಗೌಡ ಅವರು ಮೂರು ಪಕ್ಷಗಳ ಬಾಗಿಲು ಬಡಿದಿದ್ದರು. ಆದರೆ ಅಂತಿಮವಾಗಿ ಇದೀಗ ಕಾಂಗ್ರೆಸ್ ಪಕ್ಷ ಸೇರಲು ವೇದಿಕೆ ರೆಡಿಯಾಗಿದೆ.
ಪುತ್ರ ಶರತ್ ಬಚ್ಛೇಗೌಡ ಕಾಂಗ್ರೆಸ್‌ಗೆ: ತಂದೆ ಬಿಎನ್ ಬಚ್ಚೇಗೌಡ್ರ ಖಡಕ್ ಪ್ರತಿಕ್ರಿಯೆ..!
ಶರತ್ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಮತ್ತು ಮಾಜಿ ಸಚಿವ ಕೃಷ್ಣ ಭೈರೇಗೌಡ ಜೊತೆ ಮಾತುಕತೆ ನಡೆಸಿದ್ದು ಶಾಸಕರು ಅಕ್ಟೋಬರ್ ತಿಂಗಳಾಂತ್ಯದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ಶರತ್ ಅವರು ಇದೇ ಅಕ್ಟೋಬರ್ 25 ರಂದು ಭಾನುವಾರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ. ವಿಜಯದಶಮಿಯ ಶುಭ ಮುಹೂರ್ತದಲ್ಲಿ ಪಕ್ಷೇತರ ಶಾಸಕ 'ಕೈ' ಹಿಡಿಯಲಿದ್ದಾರೆ.
ಶರತ್ ಬಚ್ಚೇಗೌಡಗೆ ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಬೆಂಬಲವಿದೆ. ಹೀಗಾಗಿ, ಶರತ್ ಬಚ್ಚೇಗೌಡ ಸಹ ಕಾಂಗ್ರೆಸ್ ಸೇರಲು ಒಲವು ತೊರಿಸಿದ್ದಾರೆ ಎನ್ನಲಾಗಿದೆ.