ಈ ಹಿಂದೆ ಹೋರಿಯಿಂದ ಗುಮ್ಮಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಇದೀಗ ಕೋತಿ ದಾಳಿಯಿಂದ ಎಸ್ಕೇಪ್ ಆಗಿದ್ದಾರೆ.
ದಾವಣಗೆರೆ, (ಡಿ.16): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕೋತಿ ದಾಳಿಯಿಂದ ಪಾರಾಗಿದ್ದಾರೆ.
ಕಳೆದ ಒಂದು ತಿಂಗಳಿಂದ ಹೊನ್ನಾಳಿ ಜನರನ್ನು ಕಾಡುತ್ತಿರುವ ಕೋತಿ, ಈವರೆಗೆ 20ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದೆ. ಅದರಂತೆ ಇಂದು (ಬುಧವಾರ) ಪಟ್ಟಣದ ತಾಲೂಕು ಕಚೇರಿ ಎದುರು ಕೋತಿಯೊಂದು ಶಾಸಕರ ಮೇಲೆ ಎರಗುವುದಕ್ಕೆ ಮುಂದಾಗಿದೆ. ಅಷ್ಟರಲ್ಲಿ ಎಚ್ಚೆತ್ತುಕೊಂಡ ಅವರ ಹಿಂಬಾಲಕರು, ರೇಣುಕಾಚಾರ್ಯರನ್ನು ರಕ್ಷಿಸಿದರು.
ರೇಣುಕಾಗೆ ಮತ್ತೆ ಗುಮ್ಮಿದ ಹೋರಿ...ಈ ಬಾರಿಯೂ ಜಸ್ಟ್ ಮಿಸ್- ವಿಡಿಯೋ
ಜನರನ್ನು ಕಂಡ ತಕ್ಷಣ ಸಿಟ್ಟಿಗೆದ್ದು ದಾಳಿಗೆ ಮುಂದಾಗುವ ಈ ಕೋತಿಯಿಂದ ಮಕ್ಕಳನ್ನು ರಸ್ತೆಗೆ ಬಿಡಲೂ ಜನರು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ನಿಲ್ದಾಣ, ಪುರಸಭೆ, ದುರ್ಗಿಗುಡಿ, ಟಿ.ಬಿ.ಸರ್ಕಲ್ ಪ್ರದೇಶದಲ್ಲಿ ಈ ಕೋತಿ ನಿತ್ಯ ಓಡಾಡುತ್ತಿರುತ್ತದೆ.
ಇದೀಗ ಶಾಸಕ ರೇಣುಕಾಚಾರ್ಯ ಅವರ ಮೇಲೂ ದಾಳಿ ಮಾಡಲು ಮುಂದಾಗಿದ್ದ ಕೋತಿಯನ್ನು ಕೊನೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಸ್ಥಳೀಯರು ನಿಟ್ಟುಸಿರುಬಿಟ್ಟಿದ್ದಾರೆ.