ಕಾಂಗ್ರೆಸ್‌ನಲ್ಲಿ ಮತ್ತೆ ಶಾಸಕರ ಕೆಂಗಣ್ಣಿಗೆ ಗುರಿಯಾದ ಗೃಹ ಸಚಿವ ಪರಮೇಶ್ವರ್: ರಾಯರೆಡ್ಡಿ ಆಕ್ರೋಶ

By Sathish Kumar KH  |  First Published Jul 31, 2023, 3:47 PM IST

ಶಾಸಕಾಂಗ ಸಭೆಯಲ್ಲಿ ಪತ್ರ ಬರೆದಿದ್ದ ಶಾಸಕರು ಕ್ಷಮೆಯಾಚಿಸಿದ್ದಾರೆ ಎಂದು ಹೇಳಿಕೆ ನೀಡಿದ್ದ ಗೃಹಸಚಿವ ಪರಮೇಶ್ವರ್‌ ವಿರುದ್ಧ ಪುನಃ ಕಾಂಗ್ರೆಸ್‌ ಶಾಸಕರು ತಿರುಗಿಬಿದ್ದಿದ್ದಾರೆ.


ಬೆಂಗಳೂರು (ಜು.31): ರಾಜ್ಯದಲ್ಲಿ ಇತ್ತೀಚೆಗೆ ಕಾಂಗ್ರೆಸ್‌ ಸರ್ಕಾರದ ಶಾಸಕರು ಹಾಗೂ ಸಚಿವರ ನಡುವೆ ಜಟಾಪಟಿ ನಡೆದಿದ್ದು, ಕೆಲವು ಶಾಸಕರು ಬಹಿರಂಗವಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೂಡಲೇ ಶಾಸಕಾಂಗ ಸಭೆಯನ್ನು ಪತ್ರವನ್ನು ಬರೆದು ಆಕ್ರೋಶ ಹೊರಹಾಕಿದ್ದರು. ಆದ್ದರಿಂದ ಕೂಡಲೇ ಸಭೆಯನ್ನು ನಡೆಸಿ ಶಾಸಕರನ್ನು ಸಮಾಧಾನ ಮಾಡಲಾಗಿದೆ. ಆದರೆ, ಈ ಬಗ್ಗೆ ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರು ಪತ್ರ ಬರೆದ ಶಾಸಕರು ಸಭೆಯಲ್ಲಿ ಕ್ಷಮೆ ಕೇಳಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಪರಮೇಶ್ವರ್‌ ಹೇಳಿಕೆಯಿಂದ ಶಾಸಕರಿಗೆ ಅವಮಾನ ಆಗುತ್ತಿದೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಇತ್ತೀಚೆಗೆ ತಾನೇ ಶಾಸಕರು ಹಾಗೂ ಸಚಿವರು ಎಂಬ ರೀತಿಯಲ್ಲಿ ಕಾಂಗ್ರೆಸ್‌ ಸರ್ಕಾರದಲ್ಲಿ ಪತ್ರ ಕದನ ಶುರುವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಯ ಶಾಸಕರ ಮಾತನ್ನು ಎಳ್ಳಷ್ಟೂ ಕೇಳುತ್ತಿಲ್ಲ. ಜನಸಾಮಾನ್ಯರಿಗಿಂತಲೂ ನಮ್ಮನ್ನು ಕಡೆಗಣನೆ ಮಾಡಲಾಗುತ್ತಿದೆ. ಜನರಿಗೆ ಅಭಿವೃದ್ಧಿ ಭರವಸೆಗಳನ್ನು ಕೊಟ್ಟು ಗೆದ್ದು ಬಂದಿರುವ ನಾವು ಯಾವುದೇ ಕಾರ್ಯಕ್ಕೂ ಅನುದಾನ ಸಿಗದೇ ಪರದಾಡುತ್ತಿದ್ದೇವೆ. ನಮ್ಮನ್ನು ಜಿಲ್ಲಾ ಉಸ್ತುವಾರಿ ಸಚಿವರ ಸಹಾಯಕ ಕಾರ್ಯದರ್ಶಿ, ಮಾಧ್ಯಮ ಕಾರ್ಯದರ್ಶಿ ಮಾಡಬೇಕು. ಜೊತೆಗೆ, ಕೂಡಲೇ ಶಾಸಕಾಂಗ ಸಭೆಯನ್ನು ಕರೆಯುವಂತೆ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದರು.

Tap to resize

Latest Videos

MLAs Vs Ministers: ಶಾಸಕಾಂಗ ಸಭೆಯಲ್ಲೂ ಸಚಿವರ ವಿರುದ್ಧ ದೂರಿನ ಸುರಿಮಳೆ!

ಮತ್ತೊಮ್ಮೆ ಸಚಿವರ ವಿರುದ್ಧ ತಿರುಗಿಬಿದ್ದ ಶಾಸಕರು: ಶಾಸಕರ ಒತ್ತಾಸೆ ಮೇರೆಗೆ ಬೆಂಗಳೂರಿನಲ್ಲಿ ಇತ್ತೀಚೆಗೆ ಶಾಸಕಾಂಗ ಸಭೆಯನ್ನು ನಡೆಸಲಾಯಿತು. ಈ ವೇಳೆ ಪತ್ರ ಬರೆದ ಶಾಸಕರನ್ನೇ ಅಪರಾಧಿಗಳಂತೆ ನೋಡಲಾಗಿದ್ದು, ಸಭಾತ್ಯಾಗ ಮಾಡಿ ಕೆಲವರು ಹೊರ ನಡೆಯಲು ಮುಂದಾಗಿದ್ದ ಪ್ರಸಂಗವೂ ನಡೆದಿದೆ ಎಂದು ಕೇಳಿಬಂದಿತ್ತು. ಆದರೆ, ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಗೃಹ ಸಚಿವ ಪರಮೇಶ್ವರ್‌ಅವರು,  ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು  ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಕ್ಕೆ ಕ್ಷಮೆ ಕೇಳಿದ್ದಾರೆಂದು ಹೇಳಿಕೆ ನೀಡಿದ್ದಾರೆ. ಇದರಿಂದ ಮತ್ತೊಮ್ಮೆ ಶಾಸಕರು ಸಚಿವರ ವಿರುದ್ಧ ಕೆಂಡ ಕಾರಿದ್ದಾರೆ.

ಸತ್ಯಕ್ಕೆ ದೂರವಾದ ಹೇಳಿಕೆ ಕೊಡಬೇಡಿ: ಈ ಕುರಿತು ವಾಟ್ಸಾಪ್‌ ಸಂದೇಶವನ್ನು ಕಳಿಸಿರಿವ ಶಾಸಕ ಬಸವರಾಜ ರಾಯರೆಡ್ಡಿ ಅವರು, "ಪ್ರೀತಿಯ ಡಾಕ್ಟರ್ ಪರಮೇಶ್ವರ್ ಅವರ ನಮಸ್ಕಾರಗಳು,.. ಪತ್ರಿಕೆಯಲ್ಲಿ ಪ್ರಕಟವಾದಂತೆ ನಿನ್ನೆ ನಡೆದ  ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು  ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಕ್ಕೆ ಕ್ಷಮೆ ಕೇಳಿದ್ದಾರೆಂದು ಹೇಳಿರುವುದು ಬಹಳ ತಪ್ಪು. ನಾವುಗಳು ಕ್ಷಮೆ ಕೇಳುವ ಪ್ರಶ್ನೆ ಇದರಲ್ಲಿ ಬರುವುದಿಲ್ಲ. ನೀವು ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ಮಾಧ್ಯಮಗಳ ಮುಂದೆ ನೀಡಬೇಡಿ. ಇದರಿಂದ ಶಾಸಕರಿಗೆ ಅವಮಾನ ಆಗಲಿದೆ" ಎಂದು ಕಿಡಿಕಾರಿದ್ದಾರೆ.

ಇನ್ಮುಂದೆ ಪತ್ರ ಬರೆಯಬೇಡಿ, ನೇರವಾಗಿ ಭೇಟಿ ಮಾಡಿ: ಶಾಸಕರಿಗೆ ಡಿಕೆಶಿ ಕಿವಿಮಾತು

ಸಿಎಂ ಪತ್ರ ಬರೆದು ಮುಜುಗರ ಮಾಡಬೇಡಿ ಎಂದಿದ್ದಾರೆ:  ನಮ್ಮ ಸಮಸ್ಯೆಗಳನ್ನು  ಶಾಸಕಾಂಗ ಪಕ್ಷದ  ಸಭೆಯಲ್ಲಿ ಚರ್ಚಿಸಿ ಸರ್ಕಾರ ಸಚಿವರು ಮತ್ತು ಶಾಸಕರ ನಡುವೆ ಸುಧಾರಿತ ಸಂಬಂಧ ಮತ್ತು ಗೌರವದ ವರ್ತನೆಯನ್ನು ಮಾಡಲಿಕ್ಕೆ  ಶಾಸಕಾಂಗದ ಸಭೆಯನ್ನು ಕರೆಯಲಾಗಿತ್ತು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಸಕರಿಗೆ ಗೌರವ ಕೊಡುವಂತೆ ಮತ್ತು ಸಾಧ್ಯವಾದಷ್ಟು  ಶಾಸಕರಿಗೆ ಅವರು ಕೇಳಿದ ಅಭಿವೃದ್ಧಿ ಕೆಲಸಗಳನ್ನು ಮಾಡಿಸಲು ಪ್ರಯತ್ನಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಜೊತೆಗೆ, ಶಾಸಕರು ಈ ರೀತಿ ಪತ್ರ ಬರೆದು ಮುಜುಗರ ಮಾಡಬೇಡಿ ಎಂದು ಹೇಳಿದ್ದಾರೆ, ಹೊರತು ಬೇರೆ ಏನು ಹೇಳಿರುವುದಿಲ್ಲ. ನಾವು  ಪತ್ರ ಬರೆದಿದ್ದಕ್ಕೆ ಕ್ಷಮೆ ಕೇಳುವ ಪ್ರಸಂಗ ಬರುವುದಿಲ್ಲ. ತಮ್ಮ ಈ ಹೇಳಿಕೆಯಿಂದ ಶಾಸಕರಾದ ನಮಗೆ ಅವಮಾನವಾಗುತ್ತದೆ. ದಯವಿಟ್ಟು ಈ ತರಹ ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ನೀಡಬೇಡಿ" ತಮ್ಮ ಪ್ರೀತಿಯ ಬಸವರಾಜ್ ರಾಯರೆಡ್ಡಿ ಎಂದು ಸಂದೇಶ ಕಳಿಸಿದ್ದಾರೆ.

click me!