ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಜನ್ಮದಿನ ಅಂಗವಾಗಿ ನಡೆಯಲಿರುವ ಅಮೃತಮಹೋತ್ಸವ ಹೇಗಿರಲಿದೆ? ವ್ಯವಸ್ಥೆ ಹೇಗಿದೆ? ಕಾರ್ಯಕ್ರಮಕ್ಕೆ ಆಗಮಿಸುವ ಕಾರ್ಯಕರ್ತರಿಗೆ ಏನೆಲ್ಲಾ ಊಟ? ಹೇಗೆಲ್ಲಾ ಸಿದ್ಧತೆಗಳು ನಡೆದಿವೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ವರದಿ : ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್ ದಾವಣಗೆರೆ
ದಾವಣಗೆರೆ, (ಜುಲೈ.31): ಇದೇ ಆಗಸ್ಟ್ 3 ರಂದು ದಾವಣಗೆರೆ ಶಾಮನೂರು ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯುತ್ತಿರುವ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಕೇವಲ ಎರಡೇ ದಿನ ಅಷ್ಟೇ ಬಾಕಿ ಇದೆ. ಕಳೆದ ಎರಡು ವಾರಗಳಿಂದ ರಾತ್ರಿ ಹಗಲು ನಡೆಯುತ್ತಿರುವ ವೇದಿಕೆ, ಕಾರ್ಯಕರ್ತರಿಗೆ ಪೆಂಡಾಲ್ , ಆಸನ ಊಟದ ಸಿದ್ಧತೆ ಕೆಲಸಗಳು ಭರ್ಜರಿ ಸಾಗಿದ್ದು, ಒಂದೊಂದಾಗಿ ಮುಕ್ತಾಯ ಹಂತ ತಲುಪಿವೆ.
ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯ ಅಭಿಮಾನಿಗಳ ಪ್ರಕಾರ ಸಿದ್ದರಾಮಯ್ಯ 75ನೇ ಅಮೃತಮಹೋತ್ಸವ ಕಾರ್ಯಕ್ರಮ, ಅಭಿಮಾನಿಗಳ ಪಾಲಿಗೆ ಅಕ್ಷರಶಃ ಸಿದ್ದರಾಮೋತ್ಸವ ಎಂದು ಬಿಂಬಿತವಾದ ಕಾರ್ಯಕ್ರಮದಲ್ಲಿ ಬೃಹತ್ ವೇದಿಕೆಗೆ ಅಂತಿಮ ಟಚ್ ನೀಡಲಾಗುತ್ತಿದೆ.
ಸಿದ್ದರಾಮೋತ್ಸವಕ್ಕೆ ಜನ ಸೇರಿಸುವ ಹೊಣೆಹೊತ್ತುಕೊಂಡ ಬಿಜೆಪಿ ಹಿರಿಯ ನಾಯಕನ ಪುತ್ರ
ಪ್ರಮುಖ ವೇದಿಕೆಗೆ LED ಮೆರಗು
200/100 ಅಳತೆ ಮುಖ್ಯ ವೇದಿಕೆಯಲ್ಲಿ ಆಗಸ್ಟ್ 3 ರಂದು ಎರಡು ಗಂಟೆ ಕಾರ್ಯಕ್ರಮವಿರುತ್ತದೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ , ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ , ಮಲ್ಲಿಕಾರ್ಜುನ್ ಖರ್ಗೆ, ಬಿಕೆ ಹರಿಪ್ರಸಾದ್ ಸೇರಿದಂತೆ ಎಲ್ಲಾ ಕಾಂಗ್ರೆಸ್ ಮುಖಂಡರು ಪಾಲ್ಗೊಳ್ಳುವ ವೇದಿಕೆಯಲ್ಲಿ 2 ಗಂಟೆ ಕಾರ್ಯಕ್ರಮವಿರುತ್ತದೆ. ಮುಖ್ಯವೇದಿಕೆಗೆ ಹೊಂದಿಕೊಂಡು ಕಾರ್ಯಕರ್ತರು ಮುಖಂಡರು ಕುಳಿತು ಕಾರ್ಯಕ್ರಮ ವೀಕ್ಷಿಸಲು ಐದರಿಂದ ಆರು ಉಪವೇದಿಕೆಗಳು ಈಗಾಗಲೇ ಸಜ್ಜಾಗಿವೆ. 5 ಲಕ್ಷ ಕಾರ್ಯಕರ್ತರು ಕುಳಿತುಕೊಳ್ಳಲು ಚೇರ್ ವ್ಯವಸ್ಥೆ ಮಾಡಲಾಗಿದ್ದು ಎಲ್ಲಾ ಉಪವೇದಿಕೆಗಳಲ್ಲು ಕಾರ್ಯಕ್ರಮ ವೀಕ್ಷಿಸಲು ಬೃಹತ್ ಎಲ್ ಇ ಡಿ ಪರದೆ ವ್ಯವಸ್ಥೆ ಮಾಡಲಾಗಿದೆ.
ಆಗಮಿಸುವ ಕಾರ್ಯಕರ್ತರಿಗೆ ಭರ್ಜರಿ ಊಟದ ವ್ಯವಸ್ಥೆ
ರಾಜ್ಯದ ಮೂಲೆ ಮೂಲೆಯಿಂದ ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸುವ ಹಿನ್ನಲೆಯಲ್ಲಿ ಅವರಿಲ್ಲರಿಗೂ ಊಟ ತಿಂಡಿ ವ್ಯವಸ್ಥೆ ಮಾಡಲಾಗಿದೆ.. ಆಗಸ್ಟ್ 3 ರಂದು ಬೆಳಿಗ್ಗೆಯಿಂದಲೇ ತಿಂಡಿ ಊಟದ ವ್ಯವಸ್ಥೆ ಇರುತ್ತದೆ. ಮೊಸರನ್ನ ಪಲಾವ್ ಬಿಸಿಬೇಳೆ ಬಾತ್ ಜೊತೆ ಮೈಸೂರು ಪಾಕ್ ನ್ನು ಸಹ ಊಟದ ಮೆನ್ಯುನನಲ್ಲಿದೆ.
News Hour Special: ಸಿದ್ದರಾಮೋತ್ಸವ ಹಿಂದಿನ ಉದ್ದೇಶ ಬಿಚ್ಚಿಟ್ಟ ಎಚ್‌ಸಿ ಮಹದೇವಪ್ಪ
ಕಳೆದ ಒಂದು ವಾರದಿಂದ ಹಾಲು ತುಪ್ಪ ಎಣ್ಣೆಯಿಂದ 5 ಲಕ್ಷ ಗರಿಗರಿ ಮೈಸೂರು ಪಾಕ್ ತಯಾರಿಸಲಾಗಿದೆ. ಒಂದೇ ಬಾರಿ 10 ಸಾವಿರ ಕಾರ್ಯಕರ್ತರಿಗೆ ಉಣಬಡಿಸುವುದಕ್ಕೆ ಕೌಂಟರ್ ಗಳು ಸಜ್ಜಾಗಿವೆ. ಸುಮಾರು 2500 ಅಡುಗೆ ಸಿಬ್ಬಂದಿಗಳು ಭರ್ಜರಿ ಊಟ ತಯಾರಿಸಲು ಮುಂದಾಗಿದ್ದಾರೆ.
ದಾವಣಗೆರೆ, ಹರಿಹರದಲ್ಲಿ ರಾರಾಜಿಸುತ್ತಿವೆ ಫೆಕ್ಸ್, ಬಂಟಿಂಗ್ಸ್
ಸಿದ್ದರಾಮೋತ್ಸವ ಹಿನ್ನಲೆಯಲ್ಲಿ ದಾವಣಗೆರೆ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು, ಹರಿಹರ ನಗರ ರಸ್ತೆ ರಸ್ತೆ ಗಲ್ಲಿಗಳಲ್ಲಿ ಸಿದ್ದರಾಮಯ್ಯನವರ ಕಟೌಟ್ ಪ್ಲೆಕ್ಸ್ ಬ್ಯಾನರ್ ಗಳು ರಾರಾಜಿಸುತ್ತಿವೆ. ಕಾಂಗ್ರೆಸ್ ಮುಖಂಡರು, ಅವರ ಅಭಿಮಾನಿಗಳು , ಟಿಕೇಟ್ ಆಕಾಂಕ್ಷಿಗಳು, ಸಂಭಾವ್ಯ ಅಭ್ಯರ್ಥಿಗಳು ಸಿದ್ದರಾಮಯ್ಯನವರ ಪೋಟೊ ಜೊತೆ ತಮ್ಮ ಪೋಟೋಗಳನ್ನು ಬಗೆ ಬಗೆಯಾಗಿ ಸ್ವಾಗತ ಕೋರುತ್ತಿದ್ದಾರೆ. ಪ್ಲೆಕ್ಸ್ ಗಳ ವಿಚಾರವಾಗಿ ಕಾಂಗ್ರೆಸ್ ಮುಖಂಡರು ಸ್ಪರ್ಧೆಗಿಳಿದು ಸಿಕ್ಕ ಸಿಕ್ಕ ಸಾರ್ವಜನಿಕ ಸ್ಥಳಗಳಲ್ಲಿ ಅಮೃತಮಹೋತ್ಸವ ಪ್ಲೆಕ್ಸ್ ಗಳನ್ನು ಹಾಕಿದ್ದಾರೆ.
ಆಗಸ್ಟ್ 2rರಂದೇ ಹರಿದು ಬರಲಿದೆ ಜನಸಾಗರ
ಸಿದ್ದರಾಮಯ್ಯ ಅಭಿಮಾನಿಗಳು, ಕುರುಬ ಸಮಾಜದ ಮುಖಂಡರು.. ಇತರ ಹಿಂದುಳಿದ ವರ್ಗಗಳ ಮುಖಂಡರು ಆಪಾರ ಸಂಖ್ಯೆಯ ಕಾರ್ಯಕರ್ತರನ್ನು ಕರೆತರುವ ಹಿನ್ನಲೆಯಲ್ಲಿ ಮಂಗಳವಾರವೇ ಸಾಕಷ್ಟು ಸಂಖ್ಯೆಯ ಕಾರ್ಯಕರ್ತರು ಆಗಮಿಸುವ ನಿರೀಕ್ಷೆ ಇದೆ. ಸ್ಥಳೀಯ ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯನವರ ಅಭಿಮಾನಿಗಳು ದಾವಣಗೆರೆಯಲ್ಲಿ ಐದು ಕಲ್ಯಾಣಮಂಟಪಗಳನ್ನು ಬುಕ್ ಮಾಡಿದ್ದು ಮಂಗಳವಾರ ರಾತ್ರಿಯೇ ಊಟ ತಿಂಡಿ ವ್ಯವಸ್ಥೆ ಮಾಡಿದ್ದಾರೆ. ಆಗಸ್ಟ್ 3 ರಂದು ಮುಖ್ಯವೇದಿಕೆ ಬಳಿ ಮೂರು ಕಡೆ ಊಟದ ವ್ಯವಸ್ಥೆ ಮಾಡಿದ್ದು ಲಕ್ಷಾಂತರ ಕಾರ್ಯಕರ್ತರು ಒಂದೆಡೆ ಸೇರಿ ಗೋಜಲು ಆಗಬಾರದೆಂದು ಹರಿಹರದ ಬೆಳ್ಳೂಡಿ ಮಠ, ರಾಷ್ಟ್ರೀಯ ಹೆದ್ದಾರಿ 4 , ದಾವಣಗೆರೆ ಸಮೀಪವು ಒಂದೊಂದು ಊಟದ ಕೌಂಟರ್ ಗಳನ್ನು ಮಾಡಲಾಗಿದೆ.
ದಾವಣಗೆರೆ ನಗರದ ಎಲ್ಲಾ ಲಾಡ್ಜ್, ಹೋಟೆಲ್ ಬುಕ್
ಸಿದ್ದರಾಮೋತ್ಸವ ಕಾರ್ಯಕ್ರಮದ ಹಿನ್ನಲೆಯಲ್ಲಿ ಆಗಸ್ಟ್ 2 ಮತ್ತು 3 ರಂದು ಬಹುತೇಕ ಹೋಟೆಲ್ ಲಾಡ್ಜ್ ಗಳು ಬುಕ್ ಆಗಿವೆ. ರಾಜ್ಯದ ಮೂಲೆ ಮೂಲೆಯಿಂದ ಬರುವ ಲೀಡರ್ ಗಳು, ಭದ್ರತಾ ಕಾರ್ಯಕ್ಕೆ ಬರುವ ರಕ್ಷಣಾ ಸಿಬ್ಬಂದಿ, ಮಾಧ್ಯಮ ಸಿಬ್ಬಂದಿ ಉಳಿದುಕೊಳ್ಳಲು ಕಾಂಗ್ರೆಸ್ ಮುಖಂಡರೇ ಎಲ್ಲಾ ಹೋಟೆಲ್ ಲಾಡ್ಜ್ ಗಳನ್ನು ಬುಕ್ ಮಾಡಿ ಕೀಲಿ ಕೈ ಪಡೆದಿದ್ದಾರೆ.
ದಾವಣಗೆರೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಬೃಹತ್ ಜನಸ್ತೋಮ ಸಮಾವೇಶದ ಹಿನ್ನಲೆಯಲ್ಲಿ ನಗರದಲ್ಲಿ ಮೂರು ದಿನಗಳಿಂದಲೇ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. 5 ಲಕ್ಷಕ್ಕು ಹೆಚ್ಚು ಕಾರ್ಯಕರ್ತರು ಸೇರುವ ಹಿನ್ನಲೆಯಲ್ಲಿ ಹೊರ ಜಿಲ್ಲೆಗಳಿಂದಲು ಪೊಲೀಸರನ್ನು ಕರೆಸಿಕೊಂಡು ಬಂದೋಬಸ್ತ್ ಗೆ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ನಿಗಧಿಯಾಗಿರುವ ಎನ್ ಹೆಚ್ 4 ಹೆದ್ದಾರಿಯಲ್ಲಿ ಅಂದು ಹೈ ವೇ ಗೆ ಬದಲಾಗಿ ದಾವಣಗೆರೆ ಹರಿಹರಕ್ಕೆ ಸಂಪರ್ಕ ಕಲ್ಪಿಸಲು ಬೇರೆ ರಸ್ತೆ ಮಾರ್ಗ ಸೂಚಿಸಲಾಗಿದೆ.