ರಾಜ್ಯದಲ್ಲಿ ಹೃದಯಾಘಾತ ಪ್ರಮಾಣ ಏರಿಕೆ ಆಗಿಲ್ಲ, ಆತಂಕ ಬೇಡ: ಸಚಿವ ಶರಣ್‌ ಪ್ರಕಾಶ್‌ ಪಾಟೀಲ್

Kannadaprabha News   | Kannada Prabha
Published : Jul 16, 2025, 07:27 AM IST
Dr Sharan prakash patil

ಸಾರಾಂಶ

ರಾಜ್ಯದಲ್ಲಿ ಹೃದಯಾಘಾತದ ಸರಾಸರಿ ಪ್ರಕರಣಗಳು ಹೆಚ್ಚಾಗಿಲ್ಲ, ಕಳೆದ ವರ್ಷದಷ್ಟೇ ಇದೆ. ಆದರೆ, ಈ ಪ್ರಕರಣಗಳ ಬಗ್ಗೆ ಪ್ರಚಾರ ಹೆಚ್ಚಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ। ಶರಣ್‌ ಪ್ರಕಾಶ್‌ ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರು (ಜು.16): ರಾಜ್ಯದಲ್ಲಿ ಹೃದಯಾಘಾತದ ಸರಾಸರಿ ಪ್ರಕರಣಗಳು ಹೆಚ್ಚಾಗಿಲ್ಲ, ಕಳೆದ ವರ್ಷದಷ್ಟೇ ಇದೆ. ಆದರೆ, ಈ ಪ್ರಕರಣಗಳ ಬಗ್ಗೆ ಪ್ರಚಾರ ಹೆಚ್ಚಾಗಿದೆ. ಅಲ್ಲದೆ, ಕೋವಿಡ್‌ ಲಸಿಕೆಗೂ ಹೃದಯಾಘಾತ ಪ್ರಕರಣಗಳಿಗೆ ಸಂಬಂಧವೂ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ। ಶರಣ್‌ ಪ್ರಕಾಶ್‌ ಪಾಟೀಲ್ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಸಾರ್ವಜನಿಕರು ಅನಗತ್ಯವಾಗಿ ಆತಂಕ ಪಡುವುದು ಬೇಡ. ಬದಲಿಗೆ ವರ್ಷಕ್ಕೊಮ್ಮೆ ಹೃದಯ ತಪಾಸಣೆ ಮಾಡಿಸಿ, ಅಗತ್ಯ ನಿದ್ರೆ, ಮಿತ ಹಾಗೂ ಆರೋಗ್ಯಕರ ಆಹಾರ ಸೇವನೆ, ತಕ್ಕಷ್ಟು ದೈಹಿಕ ವ್ಯಾಯಾಮ ಸೇರಿ ಉತ್ತಮ ಜೀವನ ಶೈಲಿಗೆ ಒತ್ತು ನೀಡಿ.

ವಿಶೇಷವಾಗಿ ಯುವಕರು ಮಧ್ಯಪಾನ, ಧೂಮಪಾನದಿಂದ ದೂರವಿರಿ. ಫಾಸ್ಟ್‌ಫುಡ್, ಪಾಶ್ಚಾತ್ಯ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಿ. ನಮ್ಮ ಪೂರ್ವಜರ ಆಹಾರ ಪದ್ಧತಿ ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು. ಜಯದೇವ ಆಸ್ಪತ್ರೆಗಳಲ್ಲಿ ಹೃದ್ರೋಗ ತಜ್ಞ ಡಾ। ಕೆ.ಎಸ್.ರವೀಂದ್ರನಾಥ್ ಅವರ ನೇತೃತ್ವದಲ್ಲಿ ವಿಶ್ಲೇಷಣೆ ಆಗಿದ್ದು, ಹೃದಯಾಘಾತ ಸಂಬಂಧಿತ ಸಾವು ಹೆಚ್ಚಾಗಿಲ್ಲ. ಈ ಹಿಂದೆ ಆಗ್ತಾ ಇತ್ತು. ಈಗಲೂ ಆಗ್ತಾ ಇದ್ದು, ಪ್ರಮಾಣ ಇದ್ದಷ್ಟೇ ಇದೆ. ಆದರೆ, ಹಾಸನದ ಸರಣಿ ಸಾವಿನ ಪ್ರಕರಣಗಳ ಹಿನ್ನೆಲೆಯಲ್ಲಿ ಹೃದಯಾಘಾತದ ಸಾವು ಪ್ರಕರಣಗಳು ಹೆಚ್ಚಾಗುತ್ತಿವೆ.

ಇದಕ್ಕೆ ಕೋವಿಡ್‌ ಲಸಿಕೆಯೂ ಕಾರಣ ಇರಬಹುದೆಂಬ ಸುದ್ದಿಗಳಿಂದಾಗಿ ಜಯದೇವ ಆಸ್ಪತ್ರೆ ಸೇರಿ ಅನೇಕ ಆಸ್ಫತ್ರೆಗಳಲ್ಲಿನ ರೋಗಿಗಳ ಸಂಖ್ಯೆ ಮತ್ತು ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವವರ ಸಂಖ್ಯೆ ಶೇ.30ರಷ್ಟು ಏರಿಕೆಯಾಗಿದೆ. ಇದರಿಂದ ವಿಚಿತ್ರ ಸನ್ನಿವೇಶ ಎದುರಾಗುತ್ತಿದೆ ಎಂದರು. ಆದರೆ, ಸರ್ಕಾರ ಹೃದಯಾಘಾತ ಪ್ರಕರಣಗಳ ಸಂಬಂಧ ಪರಿಶೀಲಿಸಿದಾಗ ಪ್ರಕರಣಗಳ ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿಲ್ಲ. ಜೊತೆಗೆ ಕೋವಿಡ್‌ ಲಸಿಕೆಯಿಂದ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ ಎಂದು ಸ್ಪಷ್ಟಪಡಿಸಿದರು.

ಹಾಸನ ಪ್ರಕರಣ ಕುರಿತು ಅಧ್ಯಯನ: ಹಾಸನದಲ್ಲಿ ಹೃದಯಾಘಾತ ಪ್ರಕರಣಗಳೆನ್ನಲಾದ 24 ಮಂದಿ ಸಾವಿನ ಕುರಿತು ಅಧ್ಯಯನ ನಡೆಸಲಾಗುತ್ತಿದೆ. ಈ ಪೈಕಿ ನಾಲ್ಕು ಸಾವು ಕಿಡ್ನಿ ವೈಫಲ್ಯ, ಮಿತಿ ಮೀರಿದ ಗ್ಯಾಸ್ಟ್ರೋಎಂಟರೈಸಿಸ್ಟ್‌ ಸೇರಿ ಅಂಗಾಂಗ ವೈಫಲ್ಯದಿಂದ ಉಂಟಾಗಿವೆ. ಉಳಿದ 20ರಲ್ಲಿ 10 ಹೃದಯಾಘಾತ ಆಗಿದೆ. ಉಳಿದವರು ಇತರೆ ಕಾರಣಗಳಿಂದ ಸಾವು ಸಂಭವಿಸಿವೆ ಎನ್ನುವುದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಆದರೆ, ಈ ಮಧ್ಯೆ ಯುವಕರಲ್ಲಿ ಯಾಕೆ ಹೃದಯಾಘಾತದಿಂದ ಸಾವು ಹೆಚ್ಚಾಗುತ್ತಿದೆ ಎಂದು ಅಧ್ಯಯನ ಮಾಡುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.

ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಮಕ್ಕಳಿಗೆ ಸ್ಕ್ರೀನಿಂಗ್ ಮಾಡುವ ಆಗತ್ಯವಿಲ್ಲ. ಜನರಿಗೆ ಜಯದೇವ ಆಸ್ಪತ್ರೆಯಿಂದ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸುತ್ತೇವೆ. ರಸ್ತೆ ಬದಿ ಆಹಾರ ಮತ್ತು ಆಹಾರ ತಯಾರಿಸುವ ವಿಧಾನದ ಬಗ್ಗೆ ಕಟ್ಟುನಿಟ್ಟಿನ ಕ್ರಮವಹಿಸುತ್ತಿದ್ದೇವೆ. ಜನ ಈ ಹಿಂದಿನ ಆಹಾರ ಪದ್ಧತಿ ಮುಂದುವರಿಸಿ. ಯೋಗ ಅಭ್ಯಾಸ ಮಾಡಿದರೆ ತುಂಬಾ ಉತ್ತಮ ಎಂದರು. ಈ ವೇಳೆ ಜಯದೇವ ಆಸ್ಪತ್ರೆಯ ಹೃದ್ರೋಗತಜ್ಞ ಡಾ ಕೆ.ಎಸ್.ರವೀಂದ್ರನಾಥ್, ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್‌, ನಿರ್ದೇಶಕಿ ಡಾ. ಬಿ.ಎಲ್.ಸುಜಾತಾ ರಾಥೋಡ್ ಇತರರು ಹಾಜರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌