ನನ್ನ ತಂಟೆಗೆ ಬಂದರೆ ಹುಷಾರ್‌: ಬಿಎಸ್‌ವೈಗೆ ಎಚ್‌ಡಿಕೆ ಎಚ್ಚರಿಕೆ

By Kannadaprabha NewsFirst Published Jan 19, 2021, 9:10 AM IST
Highlights

ಈಗೇನೋ ಸುಭದ್ರವಾಗಿದ್ದೀರಿ ನನ್ನ ತಂಟೆಗೆ ಬಂದರೆ ಪರಿಣಾಮ ನೆಟ್ಟಗೆ ಇರುವುದಿಲ್ಲ. ಹೀಗೆಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಬಿ ಎಸ್ ಯಡಿಯೂರಪ್ಪಗೆ ವಾರ್ನಿಂಗ್ ನೀಡಿದ್ದಾರೆ. 

 ಬೆಂಗಳೂರು (ಜ.19):  ‘ಜೆಡಿಎಸ್‌ ಪಕ್ಷದ ಸುದ್ದಿಗೆ ಬರಬೇಡಿ. ನನ್ನ ಸುದ್ದಿಗೆ ಬಂದರೆ ಸರಿ ಇರುವುದಿಲ್ಲ. ಹೇಗೋ ಸುಭದ್ರವಾಗಿದ್ದೀರಿ. ನಾನು ಕೈ ಹಾಕಿದರೆ ಸರಿ ಇರಲ್ಲ. ನನ್ನ ತಂಟೆಗೆ ಬಂದರೆ ಹುಷಾರ್‌.’

ಹೀಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಹಾಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷಾಂತರ ಕಾರ್ಯಕರ್ತರ ಶಕ್ತಿ ಇರುವ ಜೆಡಿಎಸ್‌ ಬಗ್ಗೆ ಲಘುವಾಗಿ ಮಾತನಾಡಿದರೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರತಿಕೂಲ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಜೆಡಿಎಸ್‌ ಮುಗಿಸಲು ಯಡಿಯೂರಪ್ಪ ಇನ್ನೊಂದು ಜನ್ಮ ಹುಟ್ಟಿಬಂದರೂ ಆಗುವುದಿಲ್ಲ. ಈವರೆಗೆ ನನ್ನ ಪಕ್ಷದ ತಂಟೆಗೆ ಬಂದಿಲ್ಲ. ನನ್ನ ತಂಟೆಗೆ ಬಂದರೆ ಹುಷಾರ್‌. ನಿಮ್ಮ ಬಂಡವಾಳ ನನ್ನ ಕೈಯಲ್ಲಿದೆ ಎಂದು ಟೀಕಾಪ್ರಹಾರ ನಡೆಸಿದರು.

2008ರಲ್ಲಿಯೇ ಜೆಡಿಎಸ್‌ ಮುಗಿಸುತ್ತೇನೆ, ಅಪ್ಪ-ಮಗನನ್ನು ಮುಗಿಸುತ್ತೇನೆ ಎಂದು ಹೇಳಿದ್ದರು. ಬಳಿಕ ರಾಜಕಾರಣ ಏನಾಯಿತು ಗೊತ್ತಿದೆಯಾ? ಮೂವರು ಮುಖ್ಯಮಂತ್ರಿ ಬದಲಾದರು. ಜೆಡಿಎಸ್‌ ನಿರ್ನಾಮ ಮಾಡುತ್ತೇವೆ ಎಂದು ಹೇಳಿದವರು ಎಲ್ಲೆಲ್ಲೋ ಹೋಗಿದ್ದಾರೆ. ನನ್ನ ಪಕ್ಷದ ಲಘುವಾಗಿ ಮಾತನಾಡಬೇಡಿ. ಅಧಿಕಾರದ ಮದದಿಂದ ಮಾತನಾಡುತ್ತಿದ್ದಾರೆ. ಮುಂದಿನ ಬಾರಿಯೂ ನಾವೇ ಎಂದು ಬೀಗುತ್ತಿದ್ದಾರೆ. ಈ ಹಿಂದೆ ಇದೇ ಯಡಿಯೂರಪ್ಪ 10 ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ ಎಂದಿದ್ದರು. ಆಮೇಲೆ ಅವರು ಎಲ್ಲಿ ಹೋದರು ಎಂದು ವ್ಯಂಗ್ಯವಾಡಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಾಜಕೀಯಕ್ಕೆ ವೈಯಕ್ತಿಕ ಸಿ.ಡಿ. ವಿಚಾರ ಬಳಸಿಕೊಳ್ಳುವುದಿಲ್ಲ. ನಾಡಿನ ಸಂಪತ್ತು ಲೂಟಿ ಮಾಡಿರುವ ದಾಖಲೆಗಳನ್ನು ಬಳಸಿಕೊಳ್ಳುತ್ತೇನೆ. ಸಿ.ಡಿ.ಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ಯಾರಾರ‍ಯರು, ಯಾವಾಗ, ಯಾವ ರೀತಿ ಬಳಸಿಕೊಳ್ಳುತ್ತಾರೆ ಎಂಬುದು ಗೊತ್ತಿದೆ ಎಂದು ಹೇಳಿದರು.

ಇದು ನನ್ನ ಕೊನೆಯ ಹೋರಾಟವೆಂದು ಘೋಷಿಸಿದ ಕುಮಾರಸ್ವಾಮಿ...! .

ಚುನಾವಣೆ ವೇಳೆ ಜೆಡಿಎಸ್‌ ಅನ್ನು ಬಿಜೆಪಿ ಬಿ ಟೀಂ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಕರೆದಿದ್ದರು. ಈಗ ಮುಖ್ಯಮಂತ್ರಿ ಸ್ಥಾನ ಏಪ್ರಿಲ್‌ನಲ್ಲಿ ಬದಲಾಗಲಿದ್ದಾರೆ ಎಂದು ಅದೇ ನಾಯಕರು ಆರ್‌ಎಸ್‌ಎಸ್‌ ಮೂಲದ ಮಾತನಾಡಿದ್ದಾರೆ. ಹಾಗಾದರೆ ಇವರು ಆರ್‌ಎಸ್‌ಎಸ್‌ನ ಬಿ ಟೀಂ ಇರಬೇಕು. ಇವರಿಗೆ ಆರ್‌ಎಸ್‌ಎಸ್‌ ಮೂಲಗಳಿಂದಲೇ ಗೊತ್ತಾಗುತ್ತಾ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ನೂತನ ಸಚಿವ ಸಿ.ಪಿ.ಯೋಗೇಶ್ವರ 9 ಕೋಟಿ ರು. ಸಾಲ ಮಾಡಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಹಣ ಉಪಯೋಗಿಸಿಕೊಂಡು ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಿದ್ದಾರೆ ಎಂಬುದಕ್ಕೆ ಇದು ಪುಷ್ಟಿನೀಡಿದೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಕ್ರಿಯಾಶೀಲವಾಗಿದ್ದ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಈಗ ಎಲ್ಲಿ ಹೋಗಿದೆ? ತನಿಖಾ ಸಂಸ್ಥೆಗಳು ಅವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

click me!