
ಹೊಳೆನರಸೀಪುರ (ಅ.19): ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದಲ್ಲಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸಹಕಾರ ನೀಡುತ್ತಿಲ್ಲ. ಸಹಕಾರ ನೀಡಿದ್ದರೆ ರಾಜ್ಯದಲ್ಲಿ ಕೈಗಾರಿಕೆ ಗಣನೀಯವಾಗಿ ಅಭಿವೃದ್ಧಿ ಆಗುತ್ತಿತ್ತು ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ನೇರವಾಗಿ ಆರೋಪಿಸಿದರು.
ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಪತ್ನಿ ಅನಿತಾ ಹಾಗೂ ಸಹೋದರ ಎಚ್.ಡಿ. ರೇವಣ್ಣ ಜೊತೆಯಲ್ಲಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರ ಜತೆಗೆ ಮಾತನಾಡಿದರು. ದೇವೇಗೌಡರು ಹೊಳೆನರಸೀಪುರ ತಾಲೂಕಿನಲ್ಲಿ ಐದಾರು ಸಾವಿರ ಜನರಿಗೆ ಉದ್ಯೋಗ ನೀಡುವಂತಹ ಕೈಗಾರಿಕೆಗಳನ್ನು ತರಬೇಕೆಂದಿದ್ದೇನೆ ಎಂದಿದ್ದರು ಎಂದು ಕೇಳಿದ ಪ್ರಶ್ನಗೆ ಉತ್ತರಿಸಿ, ಹೊಳೆನರಸೀಪುರ ತಾಲೂಕಷ್ಟೇ ಅಲ್ಲ ರಾಜ್ಯದಲ್ಲಿ ಅನೇಕ ಕೈಗಾರಿಕೆಗಳನ್ನು ತರಲು ಆಶಿಸಿದ್ದೆ, ಆದರೆ ಸರ್ಕಾರ ಭೂಮಿ ನೀಡಲು ಸಿದ್ಧ ಇಲ್ಲ, ಸಹಕಾರವೂ ಇಲ್ಲ ಎಂದು ಉತ್ತರಿಸಿದರು.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಭದ್ರತೆ ಹಿಂಪಡೆದಿರುವ ಬಗ್ಗೆ ಕೇಳಿದ ಪ್ರಶ್ನಗೆ ಉತ್ತರಿಸಿ ಕಾಂಗ್ರೆಸ್ ಸರ್ಕಾರ ವಿರೋಧ ಪಕ್ಷಗಳ ಮುಖಂಡರನ್ನು ದಮನಿಸಲು ಪ್ರಯತ್ನಿಸುತ್ತಿದೆ, ಆದರೆ ಅದು ಸಾಧ್ಯ ಇಲ್ಲ. ನೋಡ್ತಾ ಇರಿ ಕಾಂಗ್ರೆಸ್ ಪಕ್ಷವೇ ರಾಜ್ಯದಿಂದ ದಮನ ಆಗುತ್ತದೆ. ಆರ್‌ಎಸ್‌ಎಸ್ ಸಂಘಟನೆಯ ವಿರುದ್ಧ ಸರ್ಕಾರ ತೆಗೆದುಕೊಳ್ಳುತ್ತಿರುವ ಅಕ್ರಮ ಕ್ರಮಗಳು ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಲಿದೆ. ನೂರು ವರ್ಷದ ಸಂಘಟನೆಯನ್ನು ನಿಯಂತ್ರಿಸಲು ಅಂದಿನಿಂದಲೂ ಪ್ರಯತ್ನಗಳು ನಡೆಯುತ್ತಲೇ ಇದೆ, ಯಾರಿಂದಲೂ ಸಾಧ್ಯವಾಗಿಲ್ಲ. ಈಗಲೂ ಸಾಧ್ಯ ಆಗುವುದಿಲ್ಲ ಎಂದು ಸ್ಪಷ್ಟವಾಗಿ ನುಡಿದರು.
ಗೌಡರು ಕಡಿಮೆ ಅವಧಿಗೆ ಪ್ರಧಾನಿ ಆಗಿದ್ದರು. ಆ ಸಮಯದಲ್ಲಿ ರೇವಣ್ಣ ಗೌಡರ ಸಹಕಾರದಿಂದ ಹಾಸನಕ್ಕೆ ಹಲವಾರು ಕೈಗಾರಿಕೆಗಳನ್ನು ತಂದರು. ಈ ಕೈಗಾರಿಕೆಗಳಿಂದಾಗಿ ಜಿಲ್ಲೆಯ ಹತ್ತಾರು ಸಾವಿರ ಜನರಿಗೆ ಉದ್ಯೋಗ ಸಿಕ್ಕಿದೆ ಎಂದು ಉತ್ತರಿಸಿದರು. ನಾನು ಮುಖ್ಯಮಂತ್ರಿ ಆಗಿದ್ದ ಎರಡೂ ಅವಧಿಯಲ್ಲಿ ರಾಜ್ಯಕ್ಕೆ ಉತ್ತಮ ಆಡಳಿತ ನೀಡಿದ ತೃಪ್ತಿ ಇದೆ ಕುಮಾರಸ್ವಾಮಿ ನುಡಿದರು. ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ಪುರಸಭಾಧ್ಯಕ್ಷ ಎಚ್.ಕೆ. ಪ್ರಸನ್ನ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ, ಸರ್ಕಲ್ ಇನ್ಸ್ಪೆಕ್ಟರ್ ಪ್ರದೀಪ್, ಎಸ್.ಐ. ಅಭಿಜಿತ್ ಜೊತೆಯಲ್ಲಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.