* ಚುನಾವಣೆಗೂ ಮುನ್ನವೇ ಅವರಿಗೆ ಜೆಡಿಎಸ್ ಜ್ವರ
* ನಿಮ್ಮ ಕೈಯಲ್ಲಿ ಮಿರಮಿರ ಮಿಂಚಿದ ಹ್ಯೂಬ್ಲೆಟ್ ವಾಚ್ ಎಲ್ಲಿಂದ ಬಂತು?
* ಆಪರೇಷನ್ ಕಮಲ ಬಿಜೆಪಿಯ ಪಾಪದ ಕೂಸು. ಆ ಕೂಸಿಗೆ ಹಾಲೆರೆದವರು ಯಾರಯ್ಯ ಸುಳ್ಳುರಾಮಯ್ಯ?
ಬೆಂಗಳೂರು(ಏ.19): ಸುಳ್ಳು ಶೂರ, ಸಿದ್ಧ ಸೂತ್ರದಾರ, ಸಿದ್ಧಕಲಾ ನಿಪುಣ, ರಾಜಕೀಯ ಊಸರವಳ್ಳಿಗೆ ಚುನಾವಣೆಗೆ ಮುನ್ನವೆ ಜೆಡಿಎಸ್ ಜ್ವರ ಬಂದುಬಿಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಟೀಕಾಪ್ರಹಾರ ನಡೆಸಿದ್ದಾರೆ. ದೇವೇಗೌಡರ(HD Devegowda) ನೈತಿಕತೆ ಬಗ್ಗೆ ಪ್ರಶ್ನಿಸುವ ನೀವೇ ಪರ್ಸಂಟೇಜ್ ವ್ಯವಹಾರದ ಪಿತಾಮಹ ಎಂದೂ ಅವರು ಆಪಾದಿಸಿದ್ದಾರೆ.
ಸೋಮವಾರ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಹಾಸನದಲ್ಲಿ ವೃಥಾ ಹರಿಬಿಟ್ಟ‘ಸತ್ಯ ಭಕ್ಷ’ ನಾಯಕನ ಆಚಾರಹೀನ ಅರಿವುಗೆಟ್ಟನಾಲಗೆ ಮತ್ತೆ ಹುಚ್ಚು ಕುಣಿತ ಮಾಡುತ್ತಿದೆ. ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರವೇ ಇಲ್ಲ. ಮತ್ತೆ ಮತ್ತೆ ಕೆಣಕುವ ದುಸ್ಸಾಹಸ ಬೇರೆ. ಆಪರೇಷನ್ ಕಮಲ(Operation BJP) ಬಿಜೆಪಿಯ(BJP) ಪಾಪದ ಕೂಸು. ಆ ಕೂಸಿಗೆ ಹಾಲೆರೆದವರು ಯಾರಯ್ಯ ಸುಳ್ಳುರಾಮಯ್ಯ? ಇಂತಹ ಅನೈತಿಕ ಕೂಸಿಗೆ ಹಾಲೆರೆದು ಬೆಳೆಸಿ, ದೊಡ್ಡದು ಮಾಡಿದ ನೀವು, ಜೆಡಿಎಸ್(JDS) ಪಕ್ಷ ಬಿಜೆಪಿ ಟೀಂ ಎಂದು ಹಾದಿಬೀದಿಯಲ್ಲಿ ಜಾಗಟೆ ಹೊಡೆಯುತ್ತಿದ್ದೀರಲ್ಲ? ಇದು ಯಾವ ಸೀಮೆ ರಾಜಕೀಯ ಎಂದು ಕಿಡಿಕಾರಿದ್ದಾರೆ.
Hubli Violence ಬಂಧಿತರು ಅಮಾಯಕರೆಂದು ಎಚ್ಡಿಕೆಗೆ ಹೇಗೆ ಗೊತ್ತು, ಜೋಶಿ ಪ್ರಶ್ನೆ!
ದೇವೇಗೌಡರ ನೈತಿಕತೆ ಬಗ್ಗೆ ಪ್ರಶ್ನಿಸುವ ಸಿದ್ಧಹಸ್ತನೇ, ನೀವೇ ಪರ್ಸಂಟೇಜ್ ವ್ಯವಹಾರದ ಪಿತಾಮಹ. ಆಪ್ತಶಾಸಕರಿಗೆ ಮೀಟಿಂಗ್‌ಗೆ ಇಂತಿಷ್ಟುಎಂದು ಕೊಟ್ಟು ಕಮಿಷನ್ ಹೊಡೆದ ಕಥೆ, ಕಾದಂಬರಿ ಬರೆಯುವಷ್ಟಿದೆ. ಅರ್ಕಾವತಿ ರೀಡೂ ರಿಂಗ್ ಮಾಸ್ಟರ್ ಆಗಿ ಅಡ್ಡಡ್ಡ ನುಂಗಿ ಕೆಂಪಣ್ಣ ಆಯೋಗದ ಕೃಪೆಯಿಂದ ಪಾರಾದ ನಿಮ್ಮ ಯೋಗ್ಯತೆ ನನಗೆ ಗೊತ್ತಿಲ್ಲವೇ? 2018ರಲ್ಲಿ ಒಳ್ಳೆಯ ಆಡಳಿತ ನಡೆಸಲೆಂದು ಕುಮಾರಸ್ವಾಮಿಗೆ ಅಧಿಕಾರ ಕೊಟ್ಟೆವು ಎಂದಿದ್ದೀರಿ. ಆ ಮುನ್ನ ಐದು ವರ್ಷ ಕೆಟ್ಟ ಆಡಳಿತ ಕೊಟ್ಟೆಎಂದು ನೀವೇ ಒಪ್ಪಿಕೊಂಡ ಹಾಗಾಯಿತಲ್ಲ. ಜೆಡಿಎಸ್ 30 ಸೀಟಿನ ಪಕ್ಷವಲ್ಲ. 123 ಕ್ಷೇತ್ರಗಳ ಸವಾಲು ಸ್ವೀಕರಿಸಿ ಹೊರಟ ಪಕ್ಷ. ಇದು ಗೊತ್ತಾಗಿಯೇ ಪಕ್ಷವಾತ ಬಂದ ಹಾಗೆ ನೀವು ಚಡಪಿಸುತ್ತಿದ್ದೀರಿ ಎಂದು ವ್ಯಂಗ್ಯವಾಡಿದ್ದಾರೆ.
ಕದ್ದಮಾಲು ಕೈಗೆ ಕಟ್ಟಿಮುಖ್ಯಮಂತ್ರಿ ಕುರ್ಚಿಯಲ್ಲಿ ನಿರ್ಲಜ್ಜವಾಗಿ ಮೆರೆದ ನಿಮ್ಮ ಕತ್ತಲೆ ಚಾರಿತ್ರ್ಯ ಕೊಳೆತು ನಾರುತ್ತಿದೆ. ನಿಮ್ಮ ಕೈಯಲ್ಲಿ ಮಿರಮಿರ ಮಿಂಚಿದ ಹ್ಯೂಬ್ಲೆಟ್ ವಾಚ್ ಎಲ್ಲಿಂದ ಬಂತು? ಕಳ್ಳಮಾಲು ಮಾಲಿಕನಿಗೆ ಸೇರದೆ ನಿಮ್ಮ ಅಮೃತಹಸ್ತ ಅಲಂಕರಿಸಿದ್ದು ಹೇಗೆ? ಆ ವಾಚ್ ತಂದ್ಕೊಟ್ಟ ಪೊಲೀಸಯ್ಯನಿಗೆ ವರ್ಗಾವಣೆ ಕೃಪೆ ಕರುಣಿಸಿದಿರಾ? ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ವಿಷಯದಲ್ಲಿ ಡಿವೈಎಸ್‌ಪಿ ಗಣಪತಿ ಹೆಸರು ಎಳೆದು ತಂದಿದ್ದೀರಿ. ನಾನು ಹೇಳಿದ್ದು ಕಲ್ಲಪ್ಪ ಹಂಡೀಭಾಗ್ ಬಗ್ಗೆ. ಹಿಂದುಳಿದ ಸಮುದಾಯಕ್ಕೆ ಸೇರಿದ್ದ ಆ ಪ್ರಾಮಾಣಿಕ ಅಧಿಕಾರಿಗೆ ಇನ್ನಿಲ್ಲದ ಕಿರುಕುಳ ಕೊಟ್ಟು ಮುಗಿಸಿದಿರಿ. ಇಲಾಖೆಯಲ್ಲಿ ಒಳ್ಳೆಯ ಭವಿಷ್ಯವಿದ್ದ ಅವರ ಜೀವಕ್ಕೆ ಎರವಾದಿರಿ. ಅವರ ಸಾವಿಗೆ ನಿಮ್ಮ ಸರ್ಕಾರ ಕಾರಣವಲ್ಲವೇ? ನಿಮ್ಮ ಕತ್ತಲೆ ಮುಖವಾಡ ‘ಪರ್ಸಂಟೇಜ್ ಪಲ್ಲಕ್ಕಿ’ಯಲ್ಲಿ ಪವಡಿಸಿದ ನಿಮ್ಮ ನಿಜಬಣ್ಣ ಇನ್ನೇನು ಕಳಚಿಬೀಳಲಿದೆ. ನಿಮ್ಮ ಸುಳ್ಳು ನಿಮ್ಮನ್ನೇ ಸುಡುವ ಕಾಲ ಸನಿಹದಲ್ಲಿದೆ. ವಿನಾಶಕಾಲೇ ವಿಪರೀತಿ ಸುಳ್ಳು ಎಂದು ಚಾಟಿ ಬೀಸಿದ್ದಾರೆ.