ಸಿದ್ದು ಯಾವ ಪಕ್ಷದ ಬಾಲಂಗೋಚಿ: ಬಿಎಸ್‌ವೈರಿಂದ ಪಡೆದ ಹಣಕ್ಕೆ ಇನ್ನೂ ಉತ್ತರವಿಲ್ಲ: HDK

By Kannadaprabha NewsFirst Published Jan 27, 2022, 10:09 AM IST
Highlights

*   ಬಿಜೆಪಿ ಶಾಸಕರು ಕಾಂಗ್ರೆಸ್‌ ಸಂಪರ್ಕದಲ್ಲಿದ್ದಾರೆ ಎಂದಿದ್ದಕ್ಕೆ ಮಾಜಿ ಸಿಎಂ ವ್ಯಂಗ್ಯ
*  ನಾನು ಜೆಡಿಎಸ್‌ಎನಲ್ಲಿದ್ದಾಗ ಕುಮಾರಸ್ವಾಮಿ ಎಲ್ಲಿದ್ದರು ಎಂದು ಕೇಳಿದ್ದಕ್ಕೆ ಕಿಡಿ
*  ಜೆಡಿಎಸ್‌ ಕಡೆಗಣಿಸಿ ಯಾರೂ ಏನೂ ಮಾಡಲಾಗದು 

ಬೆಂಗಳೂರು(ಜ.27):  ಆಡಳಿತಾರೂಢ ಬಿಜೆಪಿ(BJP) ಪಕ್ಷದ ಹಲವು ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಸ್ವತಃ ಅವರು ಯಾವ ಪಕ್ಷದ ಬಾಲಂಗೋಚಿ ಎನ್ನುವುದು ಕಣ್ಣಿಗೆ ಕಟ್ಟಿದಂತೆ ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ವಾಗ್ದಾಳಿ ನಡೆಸಿದ್ದಾರೆ. 

ತಾವು ಜೆಡಿಎಸ್‌(JDS) ಅಧ್ಯಕ್ಷನಾಗಿದ್ದಾಗ ಕುಮಾರಸ್ವಾಮಿ ಎಲ್ಲಿದ್ದರು ಎಂಬ ಮಾತನ್ನು ಸಿದ್ದರಾಮಯ್ಯ ಹೇಳಿದ್ದಾರೆ. ಆಗ ಪಕ್ಷ ಕಂಡ ಯಶಸ್ಸಿಗೆ ನಮ್ಮಂಥವರ ದುಡಿಮೆಯೂ ಇದೆ. ಈ ಹಿಂದೆ ಅನೇಕ ಶಾಸಕರು ಗೆದ್ದಿದ್ದರಲ್ಲಿ ನನ್ನ ಪಾತ್ರವೂ ಇದೆ. ಆಗ ಅಷ್ಟುದೊಡ್ಡ ಪ್ರಮಾಣದಲ್ಲಿ ಜೆಡಿಎಸ್‌ ಪಕ್ಷಕ್ಕೆ ಯಶಸ್ಸು ಸಿಗಬೇಕಾದರೆ, ಅದಕ್ಕೆ ಕಾರಣ ದೇವೇಗೌಡರು(HD Devegowda) ಹಾಗೂ ಕಾರ್ಯಕರ್ತರು. ಸಿದ್ದರಾಮಯ್ಯ ಕೊಡುಗೆ ಏನೂ ಇರಲಿಲ್ಲ. ಜೆಡಿಎಸ್‌ನಲ್ಲಿ ಸಿದ್ದರಾಮಯ್ಯ ಮಜಭೂತಾಗಿ ಅಧಿ​ಕಾರ ಅನುಭವಿಸಿ ಹೋದರು. ಅವರಿದ್ದಾಗ 58 ಸೀಟು ಗೆದ್ದಿದೆವು. ಅವರು ಪಕ್ಷ ತೊರೆದ ಮೇಲೆ ಒಮ್ಮೆ 20 ಸೀಟು, ಇನ್ನೊಮ್ಮೆ 40 ಸೀಟು ಗೆದ್ದಿದ್ದೇವೆ ಎಂದರು.

Karnataka Politics ಸಿಎಂ ಮನೆ ಮುಂದೆ ಹೋದ ರೇವಣ್ಣ, ಎದುರೇಟು ಕೊಟ್ಟ ಸಚಿವ ಅಶ್ವತ್ಥನಾರಾಯಣ

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷದಿಂದ ಕೆಲ ಶಾಸಕರು ಕಾಂಗ್ರೆಸ್ಸಿಗೆ(Congress) ಅರ್ಜಿ ಹಾಕಿಕೊಂಡಿದ್ದಾರೆಂದು ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಹೇಳಿಕೊಂಡಿದ್ದಾರೆ. ನಮ್ಮ ಪಕ್ಷಕ್ಕೂ ಕೆಲವರು ಅರ್ಜಿ ಹಾಕಿಕೊಂಡಿದ್ದಾರೆ. ಬಿಜೆಪಿ, ಕಾಂಗ್ರೆಸ್‌ನಿಂದಲೂ ನಮ್ಮಲ್ಲಿ ಅರ್ಜಿ ಹಾಕಿಕೊಂಡಿದ್ದಾರೆ. ನಮ್ಮ ಬಳಿಗೆ ಬರುವವರು ಸಣ್ಣಪುಟ್ಟ ಮುಖಂಡರು. ಅನೇಕ ಹೊಸಬರು ಜೆಡಿಎಸ್‌ ಪಕ್ಷಕ್ಕೆ ಬರಲು ರೆಡಿ ಇದ್ದಾರೆ ಎಂದರು.

ಯಡಿಯೂರಪ್ಪ ಅವರಿಂದ ಹಣ ಪಡೆದಿದ್ದರು:

ಜೆಡಿಎಸ್‌ ಪಕ್ಷ ಬಿಜೆಪಿಯ ಬಾಲಂಗೋಚಿ ಎನ್ನುವ ಸಿದ್ದರಾಮಯ್ಯ ಅವರಿಗೆ ಬಹಿರಂಗವಾಗಿ ಹಲವು ಬಾರಿ ಪ್ರಶ್ನೆ ಕೇಳಿದ್ದೇನೆ. ಬಿ.ಎಸ್‌.ಯಡಿಯೂರಪ್ಪ(BS Yediyurappa) ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಮೊದಲ ಆಪರೇಷನ್‌ ಕಮಲ(Operation BJP) ನಡೆದ ಸಂದರ್ಭದಲ್ಲಿ ಎಂಟು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ವೇಳೆ ಇದೇ ಸಿದ್ದರಾಮಯ್ಯ ತಾವಿದ್ದ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಗಳನ್ನು ಸೋಲಿಸಲಿಕ್ಕೆ, ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲಿಕ್ಕೆ ಯಡಿಯೂರಪ್ಪ ಅವರಿಂದ ಎಷ್ಟು ಹಣ ತೆಗೆದುಕೊಂಡರು? ಆ ಹಣವನ್ನು ಯಾರಿಂದ ತರಿಸಿಕೊಂಡರು? ಹಣ ತಂದುಕೊಟ್ಟವರು ಯಾರು ಎಂದು ಕೇಳಿದ್ದೆ. ಇವತ್ತಿಗೂ ಅವರಿಂದ ಉತ್ತರವಿಲ್ಲ ಎಂದು ಆಪಾದಿಸಿದರು.

ಜಾರಕಿಹೊಳಿಗೆ ಧನ್ಯವಾದ!

ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ(Ramesh Jarkiholi) ಅವರು 16 ಮಂದಿ ಕಾಂಗ್ರೆಸ್‌ ಶಾಸಕರ ಪಟ್ಟಿಸಿದ್ಧ ಮಾಡಿಕೊಂಡಿದ್ದು, ಜೆಡಿಎಸ್‌ಗೆ ನಾವು ಕೈಹಾಕಲ್ಲ ಎಂದಿದ್ದಾರೆ. ನಮ್ಮ ಮೇಲೆ ಅಷ್ಟಾದರೂ ಅವರು ಕನಿಕರ, ಗೌರವ ಇಟ್ಟಿದ್ದಾರೆ. ಅವರಿಗೆ ವಿಶೇಷವಾಗಿ ನಮ್ಮ ಪಕ್ಷ, ಕಾರ್ಯಕರ್ತರ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದು ಇದೇ ವೇಳೆ ಕುಮಾರಸ್ವಾಮಿ ತಿಳಿಸಿದರು.

Siddu VS HDK ಸಿದ್ದರಾಮಯ್ಯನವರನ್ನ ಸ್ವಯಂಘೋಷಿತ ಸಂವಿಧಾನ ಪಂಡಿತ ಎಂದು ಕರೆದ ಕುಮಾರಸ್ವಾಮಿ

ಜೆಡಿಎಸ್‌ ಕಡೆಗಣಿಸಿ ಯಾರೂ ಏನೂ ಮಾಡಲಾಗದು: ಎಚ್‌ಡಿಕೆ

ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ(2023 Assembly Election) ಜೆಡಿಎಸ್‌ ಪಕ್ಷವನ್ನು ಕಡೆಗಣಿಸಿ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಗುರುವಾರ ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಂದಿನ ಸಾರ್ವತ್ರಿಕ ಚುನಾವಣೆಗೆ(General Election) ಪಕ್ಷವು ಸಿದ್ಧತೆ ಕೈಗೊಂಡಿದೆ. ಪಕ್ಷದ ಶ್ರಮ ಏನು ಎಂಬುದನ್ನು ತೋರಿಸುತ್ತೇನೆ. ನಮ್ಮನ್ನು ನಿರ್ಲಕ್ಷಿಸಿ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಗೂ ನಾವೇ ಬೇಕು ಎಂದು ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪೂರ್ಣ ಬಹುಮತ ಗಳಿಸುವುದಕ್ಕಾಗಿಯೇ ಪಕ್ಷದ ಸಂಘಟನೆಯನ್ನು ಈಗಿನಿಂದಲೇ ಬಲಪಡಿಸುವ ಉದ್ದೇಶ ಹೊಂದಿದ್ದೇವೆ. ಇದಕ್ಕಾಗಿಯೇ ಪಕ್ಷದ ಹಿರಿಯ ಶಾಸಕ ಬಂಡೆಪ್ಪ ಕಾಶೆಂಪೂರ್‌ ನೇತೃತ್ವದಲ್ಲಿ ಕೋರ್‌ ಕಮಿಟಿಯನ್ನು ರಚಿಸಲಾಗಿದೆ. ಜತೆಗೆ ಮಾಜಿ ಸಚಿವ ಎನ್‌.ಎಂ.ನಬಿ ಅವರನ್ನು ನೂತನ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದರು.
 

click me!