ಪಕ್ಷ ತೊರೆಯಲು ಎಚ್‌ಡಿಕೆ, ಸಾ. ರಾ ಕಾರಣ ಎಂದ ಮಾಜಿ ಸಚಿವ ಜಿಟಿಡಿ!

By Kannadaprabha NewsFirst Published Aug 25, 2021, 7:32 AM IST
Highlights

* ಜಿಟಿಡಿ ಕಾಂಗ್ರೆಸ್‌ ಸೇರ್ಪಡೆ ಪಕ್ಕಾ

* ವಿಧಾನಸಭೆ ಅವಧಿ ಮುಗಿದ ಬಳಿಕ ಪಕ್ಷಾಂತರ: ದೇವೇಗೌಡ

* ಪಕ್ಷ ತೊರೆಯಲು ಎಚ್‌ಡಿಕೆ, ಸಾ.ರಾ. ಕಾರಣ: ಮಾಜಿ ಸಚಿವ

ಬೆಂಗಳೂರು(ಆ.25): ಜೆಡಿಎಸ್‌ ವರಿಷ್ಠರೊಂದಿಗೆ ಮುನಿಸಿಕೊಂಡಿರುವ ಮಾಜಿ ಸಚಿವ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ಕಾಂಗ್ರೆಸ್‌ ಸೇರುವುದು ಇದೀಗ ಖಚಿತವಾಗಿದೆ. ನನಗೆ ಹಾಗೂ ನನ್ನ ಪುತ್ರನಿಗೆ ಮುಂದೆ ಎಂಎಲ್‌ಎ ಟಿಕೆಟ್‌ ನೀಡುವ ಷರತ್ತಿಗೆ ಒಪ್ಪಿ ಕಾಂಗ್ರೆಸ್‌ ಸೇರುತ್ತಿದ್ದೇನೆ ಎಂದು ಖುದ್ದು ಜಿ.ಟಿ.ದೇವೇಗೌಡ ಅವರೇ ತಿಳಿಸಿದ್ದಾರೆ.

ಕಾಂಗ್ರೆಸ್‌ ಸೇರ್ಪಡೆ ವಿಚಾರವಾಗಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುಂದಿನ ಚುನಾವಣೆಯನ್ನು ಕಾಂಗ್ರೆಸ್‌ನಿಂದ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಎದುರಿಸುತ್ತೇನೆ. ನನ್ನ ಪುತ್ರ ಹರೀಶ್‌ಗೌಡನಿಗೆ ಹುಣಸೂರು, ಕೆ.ಆರ್‌.ನಗರ ಅಥವಾ ಚಾಮರಾಜ ಈ ಮೂರು ಕ್ಷೇತ್ರದಲ್ಲಿ ಎಲ್ಲಾದರೂ ಟಿಕೆಟ್‌ ಕೊಡಿ ಎಂದಿದ್ದೇನೆ. ನನ್ನ ಷರತ್ತಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಬ್ಬರೂ ಒಪ್ಪಿದ್ದಾರೆ. ಸಿದ್ದರಾಮಯ್ಯ ಮಾತು ಕೊಟ್ಟಮೇಲೆ ಬೇರೆ ರೀತಿ ನಡೆದುಕೊಳ್ಳುತ್ತಾರೆ ಎನ್ನುವ ಭಯ ಇಲ್ಲ. ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿರುವ ನೋವಿದೆ. ಅದನ್ನು ಹೇಳಿಕೊಂಡಿದ್ದಾರೆ. ಸಿದ್ದರಾಮಯ್ಯ, ನಾನು ಇಬ್ಬರೂ ಸೇರಿಕೊಂಡರೆ ಮತ್ತಷ್ಟುಬಲ ಬರುತ್ತದೆ ಎನ್ನುವ ನಂಬಿಕೆ ಕ್ಷೇತ್ರದ ಹಲವರಲ್ಲಿದೆ ಎಂದರು.

ನಾನು ಪಕ್ಷ ತೊರೆಯಲು ಸಾ.ರಾ. ಮಹೇಶ್‌ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇಬ್ಬರೂ ಕಾರಣ. ಎರಡು ವರ್ಷದಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರನ್ನು ಬಿಟ್ಟು ಯಾರೂ ನನ್ನನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ವರ ಮಹಾಲಕ್ಷ್ಮಿ ಹಬ್ಬದ ದಿನ ಗೌಡರು ಕರೆ ಮಾಡಿದ್ದರು. ಆಗ ನನಗೆ ಪಕ್ಷದಲ್ಲಾದ ಸಂಕಟ ವಿವರಿಸಿದ್ದೇನೆæ. ನಿನ್ನನ್ನು ಮರಿದೇವೇಗೌಡ ಅಂದುಕೊಂಡಿದ್ದೇನೆ, ನೀನು ನನ್ನ ಜೊತೆಯೇ ಇರಬೇಕು ಎಂದು ದೇವೇಗೌಡರು ಹೇಳಿದರು. ಆಗ ನಾನು ದಯವಿಟ್ಟು ಕ್ಷಮಿಸಿ, ನನ್ನೊಂದಿಗೆ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಮಾತನಾಡಿದ್ದಾರೆಂದು ತಿಳಿಸಿದ್ದೇನೆಂದ ಜಿ.ಟಿ.ದೇವೇಗೌಡ, ಶಾಸಕತ್ವದ ಅವಧಿ ಮುಗಿಯುತ್ತಿದ್ದಂತೆ ಕಾಂಗ್ರೆಸ್‌ ಸೇರ್ಪಡೆಯಾಗುವುದಾಗಿ ಹೇಳಿದರು.

ಎಚ್‌ಡಿಕೆ ಹೇಳಿದ್ದು ಮರೆಯಲಸಾಧ್ಯ:

ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನ ಪುತ್ರ ಹರೀಶ್‌ಗೌಡನಿಗೆ ಹುಣಸೂರಿನಲ್ಲಿ ಸ್ಪರ್ಧಿಸುವ ಅರ್ಹತೆ ಇತ್ತು. ಆದರೂ ಆರಂಭದಲ್ಲಿ ಪ್ರಜ್ವಲ್‌ ರೇವಣ್ಣ ಹೆಸರು ಪ್ರಸ್ತಾಪಿಸಿದ್ದರು. ಕೊನೆಗೆ ಎಚ್‌.ವಿಶ್ವನಾಥ್‌ರನ್ನು ತಂದು ನಿಲ್ಲಿಸಿದರು. ಆಗಲೂ ನಮ್ಮ ಕುಟುಂಬದ ಎಲ್ಲರೂ ಓಡಾಡಿ ವಿಶ್ವನಾಥ್‌ರನ್ನು ಗೆಲ್ಲಿಸಿದೆವು. ಕಳೆದ ಹುಣಸೂರು ಉಪ ಚುನಾವಣೆಯಲ್ಲಿ ನನ್ನ ಪುತ್ರನನ್ನು ನಿಲ್ಲಿಸುತ್ತೇವೆಂದರು. ನಾನೇ ಬೇಡ, ಅಲ್ಲಿ ಶೆಟ್ಟರು (ಎಚ್‌.ಪಿ.ಮಂಜುನಾಥ್‌) ಗೆದ್ದಾಗಿದೆ ಎಂದು ತಿಳಿಸಿದ್ದೆ. ಈ ಸಂಬಂಧ ಕುಮಾರಸ್ವಾಮಿ ಆಡಿರುವ ಮಾತು ನಾನು ಮರೆಯಲು ಸಾಧ್ಯವಿಲ್ಲ, ಅದೇ ರೀತಿ ಕಳೆದ ನಗರಪಾಲಿಕೆ ಚುನಾವಣೆ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಕುಮಾರಸ್ವಾಮಿ ಕರೆ ಮಾಡಿ ಬಳಸಿದ ಭಾಷೆಯನ್ನೂ ಹೇಳಿಕೊಳ್ಳಲಿಕ್ಕಾಗದು ಎಂದು ನೋವು ತೋಡಿಕೊಂಡರು.

ಜಿಟಿಡಿ ಹೇಳಿದ್ದು

- ಕಾಂಗ್ರೆಸ್‌ನಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ

- ಪುತ್ರನಿಗೂ ಟಿಕೆಟ್‌ ಕೊಡಲು ಹೇಳಿದ್ದೇನೆ. ಸಿದ್ದು, ಡಿಕೆಶಿ ಒಪ್ಪಿದ್ದಾರೆ

- ದೇವೇಗೌಡರನ್ನು ಬಿಟ್ಟು ಬೇರಾರೂ ನನ್ನನ್ನು ಉಳಿಸಿಕೊಳ್ಳಲು ಯತ್ನಿಸಲಿಲ್ಲ

- ಎಚ್‌ಡಿಕೆ ಫೋನ್‌ ಮಾಡಿ ಬಳಸಿದ ಭಾಷೆಯನ್ನು ಹೇಳಿಕೊಳ್ಳಲು ಆಗುತ್ತಿಲ್ಲ

click me!