
ಮಂಡ್ಯ (ಅ.17): ಆಂಧ್ರ ಪ್ರದೇಶದಲ್ಲಿ ಇರುವಂತೆ ಕರ್ನಾಟಕದಲ್ಲಿ ಸಮನ್ವಯತೆ ಇಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಆಂಧ್ರದಲ್ಲಿ ₹13 ಸಾವಿರ ಕೋಟಿ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನ ಮಂತ್ರಿಗಳು ಚಾಲನೆ ನೀಡುತ್ತಿದ್ದಾರೆ.
ಕೇಂದ್ರ- ರಾಜ್ಯ ಸರ್ಕಾರದ ನಡುವೆ ಅಲ್ಲಿ ಸಮನ್ವಯತೆ ಇರುವುದರಿಂದ ಅದು ಸಾಧ್ಯವಾಗಿದೆ. ನಾನು ಕೇಂದ್ರ ಸಚಿವನಾಗಿ ಎಲ್ಲವನ್ನೂ ತರಬಹುದೆಂಬುದು ಹಲವರ ಭಾವನೆಯಾಗಿದೆ. ಆದರೆ, ರಾಜ್ಯ ಸರ್ಕಾರವೂ ಅದಕ್ಕೆ ಪೂರಕವಾಗಿ ಸಹಕರಿಸಬೇಕು. ಪಕ್ಷ ಯಾವುದೇ ಇರಲಿ. ಅಭಿವೃದ್ಧಿಯಲ್ಲಿ ಸಮನ್ವಯತೆಯಿದ್ದಾಗ ಪ್ರಗತಿದಾಯಕ ಚಟುವಟಿಕೆಗಳನ್ನು ಅನುಷ್ಠಾನಕ್ಕೆ ತರುವುದಕ್ಕೆ ಸಾಧ್ಯ. ಕರ್ನಾಟಕದಲ್ಲಿ ಅಂತಹ ವಾತಾವರಣವಿಲ್ಲ ಎಂದು ನುಡಿದರು.
ಮಂಡ್ಯ ಜಿಲ್ಲೆಯ ಯುವ ಜನರಿಗೆ ಉದ್ಯೋಗಾವಕಾಶ ಕಲ್ಪಿಸಲು ಕೈಗಾರಿಕೆ ಸ್ಥಾಪನೆ ಮಾಡಬೇಕೆಂಬ ಮಹತ್ವಾಕಾಂಕ್ಷೆ ನನ್ನಲ್ಲಿದೆ. ಅದು ಸಾಧ್ಯವಾಗಬೇಕಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯತೆ ಬಹಳ ಮುಖ್ಯ. ಪರಸ್ಪರರನ್ನು ತೆಗಳುವುದರಿಂದ ಯಾವುದೇ ಅಭಿವೃದ್ಧಿ ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ನಿರ್ಮಿಸಿರುವ ಜಯಚಾಮರಾಜೇಂದ್ರ ಒಡೆಯರ್ ಮಾರುಕಟ್ಟೆ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಕೇಂದ್ರ ಸರ್ಕಾರ ರಾಜ್ಯದಲ್ಲಿ ಸ್ಥಾಪಿಸಿದ ಎಚ್‌ಎಂಟಿ, ಬಿಎಚ್‌ಇಎಲ್, ಎನ್‌ಜಿಎಫ್, ಐಟಿಐನಂತಹ 42 ಸಾರ್ವಜನಿಕ ಉದ್ದಿಮೆಗಳಲ್ಲಿ ಉಳಿದುಕೊಂಡಿರುವುದು ಬಿಎಚ್‌ಇಎಲ್ ಮಾತ್ರ. ನಾನು ಕೇಂದ್ರ ಸಚಿವನಾದ ಬಳಿಕ ಎಚ್‌ಎಂಟಿ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮ ವಹಿಸುತ್ತಿದ್ದೇನೆ. ಅದೇ ರೀತಿ ಭದ್ರಾವತಿಯ ಉಕ್ಕು ಮತ್ತು ಕಬ್ಬಿಣದ ಕಾರ್ಖಾನೆಗೂ ಕಾಯಕಲ್ಪ ನೀಡಲಾಗಿದ್ದು ಇನ್ನೊಂದು ವಾರದಲ್ಲಿ ಉದ್ಘಾಟನೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕೈಗಾರಿಕೆಗಳ ಸ್ಥಾಪನೆಗೆ ಜಾಗದ ಕೊರತೆ ತುಂಬಾ ಇದೆ. ರಾಜ್ಯ ಸರ್ಕಾರ ಜಾಗ ಗುರುತಿಸಿ ಮೂಲಸೌಲಭ್ಯಗಳನ್ನು ಕಲ್ಪಿಸಿದರೆ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ ಸೃಷ್ಟಿಯಾಗುತ್ತದೆ. ಅದನ್ನು ಬಿಟ್ಟು ಪರಸ್ಪರ ನಿಂದಿಸಿಕೊಂಡು ಕುಳಿತರೆ ಅಭಿವೃದ್ಧಿ ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.