ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವಂಥ ಕಠಿಣ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಿರುವ ದೇವೇಗೌಡ, ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ರಾಷ್ಟ್ರೀಯ ನಾಯಕರೊಂದಿಗೆ ಮಾತುಕತೆ ನಡೆಸುವ ಭರವಸೆಯನ್ನೂ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು(ಜ.06): ಕಳೆದ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಪಕ್ಷದ ರಾಜ್ಯ ಘಟಕದ ಕೆಲ ನಾಯಕರ ವಿರುದ್ಧ ಮುನಿಸಿಕೊಂಡಿರುವ ಮಾಜಿ ಸಚಿವ ವಿ.ಸೋಮಣ್ಣ ಅವರನ್ನು ಸಮಾಧಾನಪಡಿಸುವ ಸಂಬಂಧ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದಾರೆ.
ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವಂಥ ಕಠಿಣ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಿರುವ ದೇವೇಗೌಡ, ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ರಾಷ್ಟ್ರೀಯ ನಾಯಕರೊಂದಿಗೆ ಮಾತುಕತೆ ನಡೆಸುವ ಭರವಸೆಯನ್ನೂ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಿದ್ದರಾಮಯ್ಯ ಕುತಂತ್ರದಿಂದ ಚುನಾವಣೆ ಮುಂದೂಡಿಕೆ: ಜಿ.ಟಿ. ದೇವೇಗೌಡ
ಶುಕ್ರವಾರ ಸಂಜೆ ಸೋಮಣ್ಣ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿದ ದೇವೇಗೌಡ, ವಿಧಾನಸಭೆ ಚುನಾವಣೆಯಿಂದ ಇದುವರೆಗೆ ಆಗಿರುವ ಬೆಳವಣಿಗೆಗಳ ಮಾಹಿತಿ ಪಡೆದರು. ಇದೇ ವೇಳೆ ಗೌಡರ ಪುತ್ರರೂ ಆಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರೂ ಉಪಸ್ಥಿತರಿದ್ದರು.
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಿದೆ. ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲು ಇದೊಂದು ಸುಸಂದರ್ಭ. ಇಂಥ ಸನ್ನಿವೇಶದಲ್ಲಿ ನೀವು ಬಿಜೆಪಿಯಲ್ಲಿನ ಕೆಲವು ಅಹಿತಕರ ಬೆಳವಣಿಗೆ ಹಿನ್ನೆಲೆಯಲ್ಲಿ ಪಕ್ಷ ತೊರೆಯುವಂಥ ನಿರ್ಧಾರಕ್ಕೆ ಬರಬಾರದು. ಏನೇ ಭಿನ್ನಾಭಿಪ್ರಾಯ ಇದ್ದರೂ ಅದನ್ನು ಸರಿಪಡಿಸೋಣ. ನಿಮ್ಮ ಸಂಘಟನಾ ಸಾಮರ್ಥ್ಯ ಬಳಕೆಯಾಗಬೇಕು ಎಂಬ ಮಾತುಗಳನ್ನು ದೇವೇಗೌಡ ಮತ್ತು ಕುಮಾರಸ್ವಾಮಿ ಆಡಿದ್ದಾರೆ ಎನ್ನಲಾಗಿದೆ.
ವಿ.ಸೋಮಣ್ಣ ಜೊತೆ ಮಾತನಾಡಿದ್ದೇನೆ, ಅವರು ಬಿಜೆಪಿ ಪಕ್ಷ ಬಿಡೊಲ್ಲ: ಆರ್.ಅಶೋಕ್
ಈ ನಿಟ್ಟಿನಲ್ಲಿ ತಾವು ಸಂಕ್ರಾಂತಿ ಬಳಿಕ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ರಾಷ್ಟ್ರೀಯ ನಾಯಕರೊಂದಿಗೆ ಮಾತುಕತೆ ನಡೆಸುತ್ತೇನೆ. ನಿಮಗೆ ಅನ್ಯಾಯ ಆಗಿದ್ದರೆ ಅದನ್ನು ಸರಿ ಮಾಡೋಣ. ಪಕ್ಷ ತೊರೆಯುವ ಚಿಂತನೆ ಏನಾದರೂ ಇದ್ದರೆ ಅದನ್ನು ತೊಡೆದು ಹಾಕಿ. ಬಿಜೆಪಿಯಲ್ಲೇ ಮುಂದುವರೆಯುವ ಬಗ್ಗೆ ಗಮನಹರಿಸಿ ಎಂಬ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ಸೋಮಣ್ಣ ಅವರು ತಾವು ಈ ತಿಂಗಳ 8 ಅಥವಾ 9ರಂದು ದೆಹಲಿಗೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸುವ ಉದ್ದೇಶವನ್ನು ಗೌಡರಿಗೆ ತಿಳಿಸಿದ್ದಾರೆ. ಅದಕ್ಕೆ ಗೌಡರು ಹೋಗಿ ಬನ್ನಿ ಎಂಬ ಮಾತನ್ನೂ ಹೇಳಿದ್ದಾರೆ ಎನ್ನಲಾಗಿದೆ.