
ನವದೆಹಲಿ (ಏ.8): ಕರ್ನಾಟಕ ಹೊರತಾಗಿ ದಕ್ಷಿಣ ಮೂರು ರಾಜ್ಯಗಳಾದ ಕೇರಳ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಮೂರು ಪ್ರಮುಖ ನಾಯಕರುಗಳು ಬಿಜೆಪಿ ಸೇರಿದಂತಾಗಿದೆ. ತಮಿಳುನಾಡಿನ ಮಾಜಿ ಕಾಂಗ್ರೆಸ್ ನಾಯಕ ಮತ್ತು ಭಾರತದ ಮೊದಲ ಗವರ್ನರ್ ಜನರಲ್ ಸಿ ರಾಜಗೋಪಾಲಾಚಾರಿ ಅವರ ಮರಿ ಮೊಮ್ಮಗ ಸಿ ಆರ್ ಕೇಶವನ್ ಅವರು ಶನಿವಾರ ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆ ಸೇರ್ಪಡೆಗೊಂಡರು. ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನೀತಿ ನಿಯಮಗಳ ಹಾಗೂ ಭ್ರಷ್ಟಾಚಾರ ಮುಕ್ತ ಅಡಳಿತವನ್ನು ಅವರು ಶ್ಲಾಘನೆ ಮಾಡಿದರು. ಗುರುವಾರ ಕೇರಳ ಕಾಂಗ್ರೆಸ್‌ನ ಪ್ರಮುಖ ನಾಯಕ ಹಾಗೂ ಮಾಜಿ ರಕ್ಷಣಾ ಸಚಿವ ಎಕೆ ಆಂಟನಿ ಅವರ ಪುತ್ರ ಅನಿಲ್ ಆಂಟನಿ ಬಿಜೆಪಿಗೆ ಸೇರ್ಪಡೆಯಾಗಿದ್ದರೆ, ಶುಕ್ರವಾರ ಅಖಂಡ ಆಂಧ್ರಪ್ರದೇಶದ ಕೊನೆಯ ಸಿಎಂ ಹಾಗೂ ಮಾಜಿ ಕಾಂಗ್ರೆಸ್ ನಾಯಕ ಕಿರಣ್ ಕುಮಾರ್ ರೆಡ್ಡಿ ಬಿಜೆಪಿ ಸೇರ್ಪಡೆಯಾಗಿದ್ದರು. ಈಗ ತಮಿಳುನಾಡಿನಲ್ಲಿ ಮಾಜಿ ಕಾಂಗ್ರೆಸ್ ನಾಯಕ ಸಿಆರ್ ಕೇಶವನ್ ಬಿಜೆಪಿಗೆ ಸೇರಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಸಿಆರ್ ಕೇಶವನ್ ಅವರನ್ನು ಕೇಂದ್ರ ಸಚಿವ ವಿಕೆ ಸಿಂಗ್ ಹಾಗೂ ಪಕ್ಷದ ಮುಖ್ಯ ವಕ್ತಾರ ಅನಿಲ್ ಬಲೌನಿ ಸ್ವಾಗತಿಸಿದರು.
"ಪ್ರಧಾನಿ ತಮಿಳುನಾಡಿನಲ್ಲಿರುವ ದಿನದಂದು ನನ್ನನ್ನು ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷಕ್ಕೆ ಸೇರಿಸಿದ್ದಕ್ಕಾಗಿ ನಾನು ಹಿರಿಯರಿಗೆ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಕೇಶವನ್, ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಹೇಳಿದರು. ನನ್ನ ಬಿಜೆಪಿ ಸೇರ್ಪಡೆಯ ವೇಳೆ ಬಿಜೆಪಿ ನಾಯಕರ ಉಪಸ್ಥಿತಿಯು, ಸಿ ರಾಜಗೋಪಾಲಾಚಾರಿ ಸೇರಿದಂತೆ ನಮ್ಮ ಮಹಾನ್ ರಾಷ್ಟ್ರದ ಸಂಸ್ಥಾಪಕ ತಂದೆ ಮತ್ತು ತಾಯಂದಿರ ಕುರಿತಾಗಿ ಬಿಜೆಪಿಗೆ ಇರುವ ಆಳವಾದ ಗೌರವವನ್ನು ಸಾಬೀತುಪಡಿಸುತ್ತದೆ ಎಂದು ಹೇಳಿದರು.
ಒಂದೇ ವಾಕ್ಯದಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಆಂಧ್ರ ಮಾಜಿ ಸಿಎಂ!
ಪ್ರಧಾನಿ ಮೋದಿಯವರ ಜನಕೇಂದ್ರಿತ ನೀತಿಗಳು, ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಸುಧಾರಣೆಗಳನ್ನು ಹೊಂದಿರುವ ಅಭಿವೃದ್ಧಿ ಕಾರ್ಯಸೂಚಿ ಭಾರತವನ್ನು ದುರ್ಬಲ ಆರ್ಥಿಕತೆಯಿಂದ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಪರಿವರ್ತಿಸಿದೆ ಎಂದರು.
ಕಾಂಗ್ರೆಸ್ ಹಿರಿಯ ನಾಯಕ ಎಕೆ ಆಂಟನಿ ಪುತ್ರ ಅನಿಲ್ ಆಂಟನಿ ಬಿಜೆಪಿಗೆ ಸೇರ್ಪಡೆ
ಈ ಹಿಂದೆ, ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ನಂತರ, “ಈಗ ಸ್ವಲ್ಪ ಸಮಯದವರೆಗೆ, ಎರಡು ದಶಕಗಳಿಂದ ಪಕ್ಷಕ್ಕಾಗಿ ಸಮರ್ಪಣಾಭಾವದಿಂದ ಕೆಲಸ ಮಾಡಲು ಕಾರಣವಾದ ಯಾವುದೇ ಮೌಲ್ಯಗಳ ಯಾವುದೇ ಕುರುಹುಗಳನ್ನು ನಾನು ನೋಡಿಲ್ಲ ಎಂದು ಹೇಳಲು ನನಗೆ ನಿಜವಾಗಿಯೂ ದುಃಖವಾಗಿದೆ. ಪಕ್ಷವು ಯಾವುದನ್ನು ಸಂಕೇತಿಸುತ್ತದೆ, ಪ್ರತಿನಿಧಿಸುತ್ತದೆ ಅಥವಾ ಪ್ರಚಾರ ಮಾಡಲು ಬಯಸುತ್ತದೆ ಎಂಬುದನ್ನು ಕುರಿತು ನಾನು ಆತ್ಮಸಾಕ್ಷಿಯಾಗಿ ಹೇಳಲಾರೆ. ಅದಕ್ಕಾಗಿಯೇ ನಾನು ಇತ್ತೀಚೆಗೆ ರಾಷ್ಟ್ರೀಯ ಮಟ್ಟದಲ್ಲಿ ಸಾಂಸ್ಥಿಕ ಜವಾಬ್ದಾರಿಯನ್ನು ನಿರಾಕರಿಸಿದ್ದೆ ಮತ್ತು ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುವುದರಿಂದ ದೂರವಿದ್ದೆ' ಎಂದು ಹೇಳಿದ್ದಾರೆ. ಇದೇ ರೀತಿಯ ಕಾರಣಗಳನ್ನು ನೀಡಿ ಕೇರಳ ಕಾಂಗ್ರೆಸ್‌ನ ಅನಿಲ್ ಆಂಟನಿ ಹಾಗೂ ಆಂಧ್ರ ಪ್ರದೇಶ ಕಾಂಗ್ರೆಸ್‌ನ ಕಿರಣ್ ಕುಮಾರ್ ರೆಡ್ಡಿ ಬಿಜೆಪಿಗೆ ಸೇರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.