ಎಚ್‌ಡಿಕೆ, ರೆಡ್ಡಿ ಪ್ರಾಸಿಕ್ಯೂಷನ್‌ ಕಡತ ವಾಪಸ್ ಕಳಿಸಿದ ಗೌರ್‍ನರ್‌: ಕನ್ನಡದಿಂದ ಅನುವಾದಿಸಿದ್ದ ಲೋಕಾಯುಕ್ತ!

Published : Mar 28, 2025, 07:39 AM ISTUpdated : Mar 28, 2025, 07:57 AM IST
ಎಚ್‌ಡಿಕೆ, ರೆಡ್ಡಿ ಪ್ರಾಸಿಕ್ಯೂಷನ್‌ ಕಡತ ವಾಪಸ್ ಕಳಿಸಿದ ಗೌರ್‍ನರ್‌: ಕನ್ನಡದಿಂದ ಅನುವಾದಿಸಿದ್ದ ಲೋಕಾಯುಕ್ತ!

ಸಾರಾಂಶ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಸೇರಿ ಎಂಟು ವಿಧೇಯಕಗಳಿಗೆ ಕೆಂಪು ನಿಶಾನೆ ತೋರಿಸಿದ ಬೆನ್ನಲ್ಲೇ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಲ್ಲಿಸಿದ್ದ ಕಡತಗಳನ್ನು ರಾಜ್ಯಪಾಲರು ಮರಳಿಸಿರುವುದು ಬೆಳಕಿಗೆ ಬಂದಿದೆ.   

ಗಿರೀಶ್ ಮಾದೇನಹಳ್ಳಿ

ಬೆಂಗಳೂರು (ಮಾ.28): ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಸೇರಿ ಎಂಟು ವಿಧೇಯಕಗಳಿಗೆ ಕೆಂಪು ನಿಶಾನೆ ತೋರಿಸಿದ ಬೆನ್ನಲ್ಲೇ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಲ್ಲಿಸಿದ್ದ ಕಡತಗಳನ್ನು ರಾಜ್ಯಪಾಲರು ಮರಳಿಸಿರುವುದು ಬೆಳಕಿಗೆ ಬಂದಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕುಮಾರಸ್ವಾಮಿ ವಿರುದ್ಧ ಆರೋಪಪಟ್ಟಿ ಸಲ್ಲಿಕೆಗೆ ಲೋಕಾಯುಕ್ತ ವಿಶೇಷ ತನಿಖಾ ತಂಡ (ಎಸ್ಐಟಿ) ಹಾಗೂ ಆದಾಯ ಮೀರಿ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಲು ಪ್ರತ್ಯೇಕವಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಲೋಕಾಯುಕ್ತ ಪೊಲೀಸರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. 

ಈ ಸಂಬಂಧ ಸಾವಿರಾರು ಪುಟಗಳ ಆರೋಪಪಟ್ಟಿಯನ್ನು ಕನ್ನಡದಿಂದ ಇಂಗ್ಲೀಷ್‌ಗೆ ಅನುವಾದಿಸಿ ರಾಜ್ಯಪಾಲರಿಗೆ ತನಿಖಾಧಿಕಾರಿಗಳು ಸಲ್ಲಿಸಿದ್ದರು. ಆದರೆ ಕೆಲ ತಾಂತ್ರಿಕ ಕಾರಣ ಮುಂದಿಟ್ಟು ಅವುಗಳಿಗೆ ಸ್ಪಷ್ಟನೆ ಕೋರಿ ಲೋಕಾಯುಕ್ತ ಪೊಲೀಸರು ಹಾಗೂ ಎಸ್‌ಐಟಿ ಅಧಿಕಾರಿಗಳಿಗೆ ರಾಜ್ಯಪಾಲರು ಆರೋಪ ಪಟ್ಟಿ ಮರಳಿಸಿದ್ದಾರೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ. ಈ ಎರಡು ಪ್ರಕರಣಗಳಲ್ಲಿ ಪ್ರತ್ಯೇಕವಾಗಿ ಕೆಲ ಸ್ಪಷ್ಟನೆಯನ್ನು ರಾಜ್ಯಪಾಲರು ಕೋರಿದ್ದಾರೆ. ಕುಮಾರಸ್ವಾಮಿ ಅವರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪುಗಳನ್ನು ಉಲ್ಲೇಖಿಸಿದರೆ, ರೆಡ್ಡಿ ವಿರುದ್ಧ ಮರು ತನಿಖೆ ಕಾರಣದ ಬಗ್ಗೆ ವಿವರಣೆ ಕೋರಿದ್ದಾರೆ ಎಂದು ತಿಳಿದು ಬಂದಿದೆ. ಕೆಲ ದಿನಗಳ ಹಿಂದಷ್ಟೇ ವಿಧಾನಸಭಾ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಅಂಗೀಕರಿಸಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಸೇರಿ 8 ವಿಧೇಯಕಗಳಿಗೆ ಅನುಮೋದನೆ ನೀಡದೆ ಸರ್ಕಾರಕ್ಕೆ ರಾಜ್ಯಪಾಲರು ಮರಳಿಸಿದ್ದಾರೆ. ಈಗ ವಿಪಕ್ಷಗಳ ನಾಯಕರ ಪ್ರಾಸಿಕ್ಯೂಷನ್‌ಗೆ ಕೆಂಪು ದೀಪ ಬೆಳಗಿದ್ದಾರೆ.

ಎಸ್ಸಿ ಒಳ ಮೀಸಲಾತಿಗಾಗಿ ಮತ್ತೊಂದು ಸಮೀಕ್ಷೆ: ನ್ಯಾ.ನಾಗಮೋಹನದಾಸ್‌ ಆಯೋಗಕ್ಕೇ ಹೊಣೆ

ಕಳೆದ ವರ್ಷ ಮನವಿ: ಕಳೆದ ವರ್ಷ ಕುಮಾರಸ್ವಾಮಿ ವಿರುದ್ಧ ಅಕ್ರಮ ಗಣಿಗಾರಿಕೆ ಮಂಜೂರಾತಿ ಪ್ರಕರಣದಲ್ಲಿ ಲೋಕಾಯುಕ್ತದ ವಿಶೇಷ ತನಿಖಾ ದಳ (ಎಸ್‌ಐಟಿ) ಹಾಗೂ ಜನಾರ್ದನ ರೆಡ್ಡಿ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಪ್ರಾಸಿಕ್ಯೂಷನ್‌ಗೆ ಅನುಮತಿಗೆ ಮನವಿ ಮಾಡಿದ್ದರು. ಆಗ ಕನ್ನಡದ ಬದಲು ಆಂಗ್ಲ ಭಾಷೆಯಲ್ಲಿ ಅನುವಾದಿತ ವರದಿ ಸಲ್ಲಿಸುವಂತೆ ಸೂಚಿಸಿ ಪ್ರಾಸಿಕ್ಯೂಷನ್ ಕೋರಿಕೆಯನ್ನು ತನಿಖಾಧಿಕಾರಿಗಳಿಗೆ ರಾಜ್ಯಪಾಲರು ಮರಳಿಸಿದ್ದರು. ಕೊನೆಗೆ 5 ಸಾವಿರ ಪುಟಗಳ ಭಾಷಾಂತರ ವರದಿ ಸಮೇತ ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್‌ಗೆ ತನಿಖಾಧಿಕಾರಿಗಳು ಕೋರಿಕೆ ಸಲ್ಲಿಸಿದ್ದರು. ಮತ್ತೆ 2ನೇ ಬಾರಿಗೆ ತಾಂತ್ರಿಕ ಕಾರಣ ಹಿನ್ನೆಲೆಯಲ್ಲಿ ಕಡತಗಳು ರಾಜಭವನದಿಂದ ವಾಪಸ್ ಬಂದಿವೆ.

ನ್ಯಾಯಾಲಯದ ಆದೇಶಗಳ ಗೊಂದಲ?: 2007ರಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದಾಗ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನಲ್ಲಿ 550 ಎಕರೆ ಭೂಮಿಯನ್ನು ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪನಿಗೆ ಕಾನೂನುಬಾಹಿರವಾಗಿ ಗಣಿ ಗುತ್ತಿಗೆ ಮಂಜೂರಾತಿ ನೀಡಿದ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ತನಿಖೆ ಪೂರ್ಣಗೊಳಿಸಿ ಆರೋಪಪಟ್ಟಿ ಸಲ್ಲಿಕೆಗೆ ಎಸ್‌ಐಟಿ ಪ್ರಾಸಿಕ್ಯೂಷನ್ ಕೋರಿಕೆ ಸಲ್ಲಿಸಿತ್ತು. ಆದರೆ ಈ ಪ್ರಕರಣ ಸಂಬಂಧ ಕೆಲ ಸುಪ್ರೀಂಕೋರ್ಟ್‌ ನೀಡಿರುವ ಆದೇಶಗಳ ಉಲ್ಲಂಘನೆಯಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ರಾಜ್ಯಪಾಲರು, ಈ ತಾಂತ್ರಿಕ ಗೊಂದಲಗಳ ಬಗ್ಗೆ ಸ್ಪಷ್ಟನೆ ಕೋರಿದ್ದಾರೆ ಎಂದು ತಿಳಿದು ಬಂದಿದೆ.

ರೆಡ್ಡಿ ವಿರುದ್ಧ ಬಿ ರಿಪೋರ್ಟ್ ವರದಿ ಕೊಡಿ: ಮೊದಲು ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಸಂಬಂಧ ಜನಾರ್ದನ ರೆಡ್ಡಿ ಅವರನ್ನು ದೋಷಮುಕ್ತಗೊಳಿಸಿ ನ್ಯಾಯಾಲಯಕ್ಕೆ ಲೋಕಾಯುಕ್ತ ಪೊಲೀಸರು ‘ಬಿ’ ರಿಪೋರ್ಟ್ ಸಲ್ಲಿಸಿದ್ದರು. ಆದರೆ ಈ ವರದಿಯನ್ನು ತಿರಸ್ಕರಿಸಿದ್ದ ನ್ಯಾಯಾಲಯವು, ಜನಾರ್ದನ ರೆಡ್ಡಿ ವಿರುದ್ಧ ಪ್ರಕರಣದ ಮರು ತನಿಖೆಗೆ ಮತ್ತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿತ್ತು. ಹೀಗಾಗಿ ಮೊದಲು ಸಲ್ಲಿಸಿದ್ದ ಬಿ ರಿಪೋರ್ಟ್ ವರದಿಯನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ಸಲ್ಲಿಸುವಂತೆ ಸೂಚಿಸಿ ಪ್ರಾಸಿಕ್ಯೂಷನ್ ಮನವಿಯನ್ನು ರಾಜ್ಯಪಾಲರು ಮರಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಒಬ್ಬರೇ ಇದ್ದರೆ ಹನಿಟ್ರ್ಯಾಪ್ ಆಗುತ್ತಾ ಸಚಿವ ಕೆ.ಎನ್ ರಾಜಣ್ಣ ತಪ್ಪು ಮಾಡಿದ್ದಾರೆ: ಡಿ.ಕೆ.ಶಿವಕುಮಾರ್

- ಕಳೆದ ವರ್ಷ ಪ್ರಾಸಿಕ್ಯೂಷನ್‌ಗೆ ಮನವಿ ಮಾಡಿದ್ದ ಎಸ್‌ಐಟಿ, ಲೋಕಾಯುಕ್ತ
- ಆಗ ಇಂಗ್ಲಿಷ್‌ನಲ್ಲಿ ದಾಖಲೆ ಕೇಳಿ ಕಡತ ವಾಪಸ್‌ ಕಳುಹಿಸಿದ್ದ ಗೆಹಲೋತ್‌
- ಅದರಂತೆ 5 ಸಾವಿರ ಪುಟಗಳ ವರದಿ ಅನುವಾದ ಮಾಡಿ ಸಲ್ಲಿಸಿದ ಪೊಲೀಸರು
- ಇದೀಗ ತಾಂತ್ರಿಕ ಕಾರಣ ನೀಡಿ ರಾಜ್ಯಪಾಲರಿಂದ ಕಡತ ಮತ್ತೊಮ್ಮೆ ವಾಪಸ್‌
- ರೆಡ್ಡಿ ವಿರುದ್ಧದ ಬಿರಿಪೋರ್ಟ್‌ ವರದಿ ಇಂಗ್ಲಿಷನ್‌ನಲ್ಲಿ ಕೊಡುವಂತೆ ಸೂಚನೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್, ಚುನಾವಣೆಗೇ ಬನ್ನಿ: ಸರ್ಕಾರಕ್ಕೆ ಸಿ.ಟಿ.ರವಿ ಸವಾಲು