
ಬೆಂಗಳೂರು : ರಾಜ್ಯದ ಜಿಪಂ, ತಾಪಂ, ಗ್ರಾಪಂ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಐದು ನಗರ ಪಾಲಿಕೆ ಸೇರಿ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮೇ ಅಥವಾ ಜೂನ್ ಅಂತ್ಯದೊಳಗೆ ಬ್ಯಾಲೆಟ್ ಪೇಪರ್ (ಮತಪತ್ರ) ಮೂಲಕ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ ತಿಳಿಸಿದ್ದಾರೆ.
ಸೋಮವಾರ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಯ 369 ವಾರ್ಡ್‌ಗಳ ಕರಡು ಮತದಾರರ ಪಟ್ಟಿ ಪ್ರಕಟಿಸಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಪಂ, ತಾಪಂ, ಗ್ರಾಪಂ, ಸ್ಥಳೀಯ ಸಂಸ್ಥೆಗಳು ಹಾಗೂ ಜಿಬಿಎ ಐದು ನಗರ ಪಾಲಿಕೆಯ ಚುನಾವಣೆಯನ್ನು ಮತಪತ್ರದ ಮೂಲಕ ನಡೆಸಲು ತೀರ್ಮಾನಿಸಲಾಗಿದೆ. ಜಿಬಿಎ ಕಾಯ್ದೆಯಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ಸ್ಪಷ್ಟವಾದ ಅವಕಾಶವಿದೆ. ಕಾಯ್ದೆಯಲ್ಲಿ ಅವಕಾಶವಿರುವಾಗ ಬಳಕೆ ಮಾಡಲು ಯಾವುದೇ ಅಡ್ಡಿಯಿಲ್ಲ. ಸುಪ್ರೀಂ ಕೋರ್ಟ್‌ನ ಯಾವುದೇ ತೀರ್ಪಿನಲ್ಲಿ ಅಥವಾ ದೇಶದ ಯಾವುದೇ ಕಾನೂನಿನಲ್ಲಿ ಬ್ಯಾಲೆಟ್ ಪೇಪರ್ ಬಳಕೆ ನಿಷೇಧಿಸಲಾಗಿದೆ ಎಂಬ ಪ್ರಸ್ತಾಪವಿಲ್ಲ. ನಿಯಮಗಳ ಚೌಕಟ್ಟಿನಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಹೊರತುಪಡಿಸಿ ಉಳಿದಂತೆ ಗ್ರಾಪಂ ಹಾಗೂ ಸಹಕಾರಿ ಸಂಘ-ಸಂಸ್ಥೆಯ ಚುನಾವಣೆಯನ್ನು ಮತಪತ್ರದ ಮೂಲಕವೇ ನಡೆಸಲಾಗುತ್ತಿದೆ. ಅಮೆರಿಕ ಸೇರಿ ವಿಶ್ವದ ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಇಂದಿಗೂ ಬ್ಯಾಲೆಟ್ ಪೇಪರ್ ಮೂಲಕವೇ ಪಾರದರ್ಶಕವಾಗಿ ಚುನಾವಣೆ ನಡೆಸಲಾಗುತ್ತಿದೆ. ಹೀಗಿರುವಾಗ ಬ್ಯಾಲೆಟ್ ಪೇಪರ್ ಬಳಸಿದರೆ ಅದು ಹಿನ್ನಡೆ ಎಂದು ಭಾವಿಸುವುದು ಸರಿಯಲ್ಲ. ಆಧುನಿಕ ತಂತ್ರಜ್ಞಾನಕ್ಕಿಂತಲೂ ನಂಬಿಕೆ ಮತ್ತು ಕಾನೂನಿನ ಅನುಷ್ಠಾನ ಮುಖ್ಯವಾಗಿರುತ್ತದೆ ಎಂದರು.
ಇವಿಎಂ ಹಾಗೂ ಮತಪತ್ರ ಎರಡರಲ್ಲೂ ಯಾವುದೇ ದೋಷವಿಲ್ಲ. ಚುನಾವಣಾ ಆಯೋಗವು ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷದ ಪರ ಅಥವಾ ಯಾರದ್ದೋ ಹೆದರಿಕೆಗೆ ಮಣಿದು ಈ ತೀರ್ಮಾನ ಕೈಗೊಂಡಿಲ್ಲ. ರಾಜ್ಯ ಚುನಾವಣಾ ಆಯೋಗವು ಒಂದು ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಅದಕ್ಕೆ ತನ್ನದೇ ಆದ ಅಧಿಕಾರವಿದೆ ಎಂದು ತಿಳಿಸಿದರು.
ಸುಮಾರು 6 ಸಾವಿರ ಗ್ರಾಪಂಗಳ ಅಧಿಕಾರಾವಧಿ ಈ ತಿಂಗಳು ಪೂರ್ಣಗೊಳ್ಳಲಿದೆ. ಇನ್ನು ಜಿಪಂ, ತಾಪಂ ಅಧಿಕಾರಾವಧಿ ಪೂರ್ಣಗೊಂಡು 5 ವರ್ಷ ಆಗಿದೆ. ಜಿಪಂ, ತಾಪಂ ಚುನಾವಣೆ ಕುರಿತು ಹೈಕೋರ್ಟ್ ವಿಚಾರಣೆ ನಡೆಸುತ್ತಿದ್ದು, ಜ.30ರ ಒಳಗೆ ರಾಜ್ಯ ಸರ್ಕಾರ ಜಿಪಂ, ತಾಪಂ ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲಾತಿ ನಿಗದಿಪಡಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಿದೆ. ಆ ಬಳಿಕ ಮುಂದಿನ ಮೇ ಅಥವಾ ಜೂನ್‌ನಲ್ಲಿ ಚುನಾವಣೆ ನಡೆಸಲಾಗುವುದು ಎಂದು ಸಂಗ್ರೇಶಿ ಮಾಹಿತಿ ನೀಡಿದರು.
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಏಕಕಾಲಕ್ಕೆ ನಡೆಸುವ ಚಿಂತನೆ ಮಾಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಚುನಾವಣೆಗಳನ್ನೂ ಪಕ್ಷದ ಚಿನ್ಹೆ ಮೇಲೆ ನಡೆಸಬೇಕು ಎಂದು ಅನೇಕರು ಸಲಹೆ ನೀಡಿದ್ದು, ಆಕುರಿತು ಚರ್ಚೆ ಮಾಡುತ್ತಿದ್ದೇವೆ. ಅದರ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.