
ಬೆಂಗಳೂರು(ಆ.18): ‘ಹಿರಿಯ ಸಚಿವರು ಎರಡೂವರೆ ವರ್ಷದ ಬಳಿಕ ಹೊಸಬರಿಗೆ ಸಚಿವ ಸ್ಥಾನ ಬಿಟ್ಟುಕೊಡಬೇಕು’ ಎಂಬ ಸಚಿವ ಕೆ.ಎಚ್. ಮುನಿಯಪ್ಪ ಹೇಳಿಕೆಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.
ಡಾ.ಜಿ.ಪರಮೇಶ್ವರ್ ಅವರಂತೂ, ‘ಎರಡೂವರೆ ವರ್ಷಕ್ಕೆ ಸಚಿವ ಸ್ಥಾನ ಬಿಟ್ಟುಕೊಡಬೇಕು ಎಂಬುದು ಮುನಿಯಪ್ಪ ಅವರ ವೈಯಕ್ತಿಕ ಅಭಿಪ್ರಾಯ. ಅವರ ಹೇಳಿಕೆಗೆ ನನ್ನ ಸಹಮತವಿಲ್ಲ. ಅವರು ಹೇಳಿದ್ದರೆ ಅವರು ಬಿಟ್ಟುಕೊಡಲಿ. ನಾನ್ಯಾಕೆ ಎರಡೂವರೆ ವರ್ಷಕ್ಕೆ ಬಿಟ್ಟುಕೊಡಬೇಕು’ ಎಂದು ಖಾರವಾಗಿ ನುಡಿದಿದ್ದಾರೆ.
ಸದ್ಯಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ: ಸಚಿವ ಮುನಿಯಪ್ಪ
ಇತ್ತೀಚೆಗೆ ನಡೆದ ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ, ಪಕ್ಷದ ಅನುಕೂಲಕ್ಕಾಗಿ ಹಿರಿಯ ಸಚಿವರು ಎರಡೂವರೆ ವರ್ಷದ ಬಳಿಕ ಹೊಸಬರಿಗೆ ಸಚಿವ ಸ್ಥಾನ ಬಿಟ್ಟುಕೊಡಬೇಕು. ನಾನು ಎರಡೂವರೆ ವರ್ಷಕ್ಕೆ ಬಿಟ್ಟುಕೊಡಲು ಸಿದ್ಧನಿದ್ದೇನೆ ಎಂದು ಕೆ.ಎಚ್. ಮುನಿಯಪ್ಪ ಹೇಳಿದ್ದರು.
ಈ ವಿಚಾರವಾಗಿ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಜಿ. ಪರಮೇಶ್ವರ್, ‘ಎರಡೂವರೆ ವರ್ಷಕ್ಕೆ ಸಚಿವ ಸ್ಥಾನ ಬಿಟ್ಟುಕೊಡಬೇಕು ಎಂಬುದು ಮುನಿಯಪ್ಪ ಅವರ ವೈಯಕ್ತಿಕ ಅಭಿಪ್ರಾಯ. ಆ ರೀತಿಯ ಅಭಿಪ್ರಾಯ ವ್ಯಕ್ತಪಡಿಸುವುದು ತಪ್ಪಲ್ಲ. ಆದರೆ ಅವರ ಹೇಳಿಕೆಗೆ ನನ್ನ ಸಹಮತವಿಲ್ಲ. ನಾನು ಯಾಕೆ ಎರಡೂವರೆ ವರ್ಷಕ್ಕೆ ಸಚಿವ ಸ್ಥಾನ ಬಿಟ್ಟುಕೊಡಬೇಕು?’ ಎಂದು ಪ್ರಶ್ನಿಸಿದರು.
ನುಡಿದಂತೆ ನಡೆದಿರುವ ಕಾಂಗ್ರೆಸ್ ಸರ್ಕಾರ: ಸಚಿವ ಮುನಿಯಪ್ಪ
ಸ್ಥಾನ ಬಿಡಲ್ಲ:
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ‘ಯಾರೋ ಹೇಳಿದ್ದಾರೆ ಎಂದು ನಾನು, ನಾನು ಹೇಳಿದೆ ಎಂದು ಬೇರೆಯವರು ಸಚಿವ ಸ್ಥಾನ ಬಿಟ್ಟುಕೊಡಬೇಕಾಗಿಲ್ಲ. ಮುನಿಯಪ್ಪ ಅವರು ಹೇಳಿದ್ದರೆ ಅದು ಅವರ ವೈಯಕ್ತಿಕ ಅಭಿಪ್ರಾಯ. ಇಂತಹ ನಿರ್ಧಾರಗಳನ್ನು ಪಕ್ಷ ಅಥವಾ ಹೈಕಮಾಂಡ್ ಮಾಡಲಿ’ ಎಂದು ಹೇಳಿದರು.
ಕೆ.ಎಚ್. ಮುನಿಯಪ್ಪ ಅವರ ಹೇಳಿಕೆ ಅಪ್ರಸ್ತುತವೇ ಎಂಬ ಪ್ರಶ್ನೆಗೆ, ‘ಈ ಬಗ್ಗೆ ಹೈಕಮಾಂಡ್ ಹೇಳಿದರಷ್ಟೇ ಪ್ರಸ್ತುತ. ಇಂತಹ ನಿರ್ಧಾರಗಳನ್ನು ಪಕ್ಷ ಅಥವಾ ಹೈಕಮಾಂಡ್ ಮಾಡುತ್ತದೆ’ ಎನ್ನುವ ಮೂಲಕ ಕೆ.ಎಚ್. ಮುನಿಯಪ್ಪ ಅವರ ಹೇಳಿಕೆ ಅಪ್ರಸ್ತುತ ಎಂದು ಪರೋಕ್ಷವಾಗಿ ನುಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.