ಪಕ್ಷ ಬಲಪಡಿಸದವರಿಗೆ ಟಿಕೆಟ್‌ ಇಲ್ಲ: ದೇವೇಗೌಡ

By Kannadaprabha NewsFirst Published Sep 3, 2021, 9:58 AM IST
Highlights

*  ಸೋತರೂ, ಗೆದ್ದರೂ ಜೆಡಿಎಸ್‌ನಲ್ಲೇ ಇರುವೆ ಎಂದರೆ ಮಾತ್ರ ಟಿಕೆಟ್‌
*  ಸಂಘಟನೆ ಮಾಡಿದವರಿಗೆ ಜೆಡಿಎಸ್‌ ಬಿ ಫಾರಂ
*  ಬೆಂಗಳೂರಿನ 9 ಕ್ಷೇತ್ರಗಳಲ್ಲಿ ಮಹಿಳೆಯರು ಕಣಕ್ಕೆ
 

ಬೆಂಗಳೂರು(ಸೆ.03):  ಪಕ್ಷದ ಬಲವರ್ಧನೆಗೆ ಹೆಚ್ಚಿನ ಆದ್ಯತೆ ನೀಡದ ಮತ್ತು ಪಕ್ಷಕ್ಕೆ ಸದಸ್ಯರ ನೋಂದಣಿ ಕಾರ್ಯ ಮಾಡದವರಿಗೆ ಯಾರೇ ಶಿಫಾರಸ್ಸು ಮಾಡಿದರೂ ಮುಂಬರುವ ಚುನಾವಣೆಗಳಲ್ಲಿ ಬಿ ಫಾರಂ ನೀಡುವುದಿಲ್ಲ. ಪಕ್ಷದ ಸಂಘಟನೆಗಾಗಿ ಶ್ರಮಿಸುವವರಿಗೆ ಆದ್ಯತೆ ನೀಡಲಾಗುವುದು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಪಕ್ಷದ ಕಚೇರಿಯಲ್ಲಿ ಮಹಿಳಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಯಾರು ಪಕ್ಷಕ್ಕೆ ನಿಷ್ಠೆಯಿಂದ ಇರುತ್ತಾರೋ ಅಂತಹವರನ್ನು ಗುರುತಿಸುವ ಕೆಲಸ ಮಾಡಲಾಗುತ್ತದೆ. ಕನಿಷ್ಠ 25 ಮಂದಿಯನ್ನು ಪಕ್ಷದ ಸದಸ್ಯರನ್ನಾಗಿ ನೋಂದಣಿ ಮಾಡಬೇಕು ಮತ್ತು ಪಕ್ಷದ ಸಂಘಟನೆಗಾಗಿ ದುಡಿಯುವವರು ನಮಗೆ ಬೇಕು. ಸೋತರೂ, ಗೆದ್ದರು ಪಕ್ಷದಲ್ಲಿಯೇ ಇರುತ್ತೇನೆ ಎನ್ನುವವರಿಗೆ ಟಿಕೆಟ್‌ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಮುಸ್ಲಿಂ ಸಮುದಾಯವನ್ನು ಪಕ್ಷವು ಎಂದಿಗೂ ಕೈ ಬಿಡುವುದಿಲ್ಲ. ಅವರನ್ನು ಕಡೆಗಣಿಸಬಾರದು ಎಂದು ಕೇಂದ್ರಕ್ಕೂ ತಿಳಿಸಿದ್ದೇನೆ. ಪಕ್ಷವನ್ನು ಸಂಘಟಿಸುವಲ್ಲಿ ಎಲ್ಲರೂ ಶಕ್ತಿ ಮೀರಿ ಕೆಲಸ ಮಾಡೋಣ, ಯಾವುದೇ ಕಾರಣಕ್ಕೂ ಹಿಂಜರಿಯಬಾರದು. ನಾನು ಕುಳಿತುಕೊಳ್ಳುವುದಿಲ್ಲ, ಹೋರಾಟ ಮಾಡುತ್ತೇನೆ. ಸರ್ಕಾರಗಳು ನಮ್ಮನ್ನು ನಿರ್ಲಕ್ಷ್ಯ ಮಾಡಿದರೆ ಹೋರಾಟದ ಮೂಲಕ ಎಚ್ಚರಿಕೆ ನೀಡಲಾಗುವುದು ಎಂದರು.

ನೆಹರೂ, ವಾಜಪೇಯಿ ಹೆಸರಲ್ಲಿ ಕಚ್ಚಾಟ: ಬಿಜೆಪಿ, ಕಾಂಗ್ರೆಸ್ ನಾಯಕರಿಗೆ ಬುದ್ಧಿ ಹೇಳಿದ ದೇವೇಗೌಡ

ಏನು ಮಾಡುವೆ ಎಂದು ಮುಂದೆ ಹೇಳುವೆ:

ದೇವೇಗೌಡ ಅವರು ಹೋದರೆ ಜೆಡಿಎಸ್‌ ಪಕ್ಷ ಹೋಗುತ್ತದೆ ಎಂದು ಹಲವರು ಅಣಕ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ಏನು ಮಾತನಾಡಿದ್ದಾರೆ ಎಂಬುದು ಗೊತ್ತಿದೆ. ದೇವೇಗೌಡ ಏನು ಮಾಡುತ್ತಿದ್ದಾರೆ ಎನ್ನುವುದನ್ನು ಮುಂದೆ ಹೇಳುತ್ತೇಣೆ. ಪಕ್ಷ ಉಳಿಸುವ ಶಕ್ತಿ ಕಾರ್ಯಕರ್ತರಿಗೆ ಇದೆ. ದೇವೇಗೌಡರಿಂದಾಗಲಿ ಅಥವಾ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಂದಾಗಲಿ ಪಕ್ಷ ಉಳಿಯುವುದಿಲ್ಲ. ಲಕ್ಷಾಂತರ ಕಾರ್ಯಕರ್ತರು ಪಕ್ಷವನ್ನು ಉಳಿಸಲಿದ್ದಾರೆ. ಆ ಶಕ್ತಿಯನ್ನು ಹೆಚ್ಚು ಮಾಡುವತ್ತ ಹೆಚ್ಚಿನ ಗಮನಹರಿಸಬೇಕು. ಪಕ್ಷದ ಲಘುವಾಗಿ ಮಾತನಾಡುತ್ತಿದ್ದಾರೆ. ನಾನು ಹೋರಾಟ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಕೆಲಸ ಮಾಡುತ್ತೇನೆ ಎಂದು ಗೌಡರು ಪಕ್ಷದ ವಿರುದ್ಧ ಮಾತನಾಡುವವರಿಗೆ ತಿರುಗೇಟು ನೀಡಿದರು.

ಮಳೆಯಲ್ಲೂ ಅಬ್ಬರಿಸಿದ ದೇವೇಗೌಡ:

ಭಾಷಣದ ವೇಳೆ ಮಳೆ ಪ್ರಾರಂಭವಾದರೂ ಮಾತು ನಿಲ್ಲಿಸದೆ ಮುಂದುವರಿಸಿದ ದೇವೇಗೌಡ ಅವರು, ಪಕ್ಷವನ್ನು ಸಂಘಟಿಸಲು ನಿರಂತರ ಹೋರಾಟ ನಡೆಸುತ್ತೇನೆ. ಮಳೆ ಬಂದರೂ ಬರಲಿ, ಧೃತಿಗೆಡಬೇಡಿ. ಎರಡು ನಿಮಿಷ ನೆಂದರೂ ಪರವಾಗಿಲ್ಲ. ಆರಾಮಾಗಿ ಇಲ್ಲಿ ನಿಂತಿದ್ದೇನೆ ಎಂದು ಹೇಳಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿದರು.

ಅರುಣ್‌ ಸಿಂಗ್‌ ವಿರುದ್ಧ ಎಚ್‌ಡಿಕೆ, ರೇವಣ್ಣ ಕಿಡಿ

ಕಾರ್ಯಕ್ರಮದಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲೀಲಾದೇವಿ ಆರ್‌. ಪ್ರಸಾದ್‌. ಬೆಂಗಳೂರು ನಗರ ಘಟಕ ಅಧ್ಯಕ್ಷೆ ರೂತ್‌ ಮನೋರಮಾ, ವಿಧಾನಪರಿಷತ್‌ ಸದಸ್ಯರಾದ ತಿಪ್ಪೇಸ್ವಾಮಿ, ರಮೇಶ್‌ ಗೌಡ, ವಿಧಾನಪರಿಷತ್‌ ಮಾಜಿ ಸದಸ್ಯ ಟಿ.ಎ.ಶರವಣ, ಬೆಂಗಳೂರು ನಗರ ಘಟಕ ಅಧ್ಯಕ್ಷ ಆರ್‌.ಪ್ರಕಾಶ್‌ ಇತರರು ಉಪಸ್ಥಿತರಿದ್ದರು.

ಬೆಂಗಳೂರಿನ 9 ಕ್ಷೇತ್ರಗಳಲ್ಲಿ ಮಹಿಳೆಯರು ಕಣಕ್ಕೆ

ಮುಂದಿನ ಸಾರ್ವತ್ರಿಕ ವಿಧಾನಸಭೆ ಚುನಾವಣೆ ವೇಳೆ ಬೆಂಗಳೂರು ನಗರದ 9 ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರನ್ನು ಕಣಕ್ಕಿಳಿಸಲಾಗುವುದು ಎಂದು ಜೆಡಿಎಸ್‌ ವರಿಷ್ಠ ದೇವೇಗೌಡ ಘೋಷಿಸಿದ್ದಾರೆ. 2023ರ ವಿಧಾನಸಭೆ ಚುನಾವಣೆಗೆ ಬೆಂಗಳೂರು ನಗರದ ಎಲ್ಲಾ 28 ವಿಧಾನಸಭಾ ಕ್ಷೇತ್ರದಲ್ಲಿಯೂ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕಿಳಿಸಲಾಗುವುದು. ಈ ಪೈಕಿ ಒಂಭತ್ತು ಕ್ಷೇತ್ರದಲ್ಲಿ ಮಹಿಳೆಯರಿಗೆ ಟಿಕೆಟ್‌ ನೀಡಲಾಗುವುದು. ಅವರು ಸೋಲಿ, ಗೆಲ್ಲಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಪಕ್ಷದ ಸಂಘಟನೆಗೆ ಶ್ರಮಿಸಲಿ, ಒಂದು ವೇಳೆ ಸೋತರೆ ಅವರು ಮುಂದೆ ಬೆಳೆಯುತ್ತಾರೆ. ಹೀಗಾಗಿ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಹಾಕುತ್ತೇವೆ ಎಂದರು.
 

click me!