ಕಾಂಗ್ರೆಸ್‌ದು ಕೇವಲ ಚುನಾವಣೆ ಗಿಮಿಕ್ ಅಷ್ಟೇ: ಎಂಟಿಬಿ ನಾಗರಾಜ್

By Kannadaprabha News  |  First Published Mar 14, 2024, 1:00 AM IST

ಈ ಸರ್ಕಾರ ಬಂದು ೯ ತಿಂಗಳು ಆಗಿದ್ದು, ಯಾವುದೇ ಅಭಿವೃದ್ಧಿ ಮಾಡದೇ ಗ್ಯಾರಂಟಿ ಯೋಜನೆಗಳಿಗೆ ಹಣ ನೀಡಿದ್ದು, ಇದರಿಂದ ಎಲ್ಲರಿಗೂ ಅನುಕೂಲವಾಗುತ್ತಿದೆ ಎಂದು ಜಾಹಿರಾತುಗಳನ್ನು ನೀಡುತ್ತಾ ಸರ್ಕಾರ ತಮ್ಮ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ. ಗ್ಯಾರಂಟಿ ಯೋಜನೆಗಳು ಕೇವಲ ಶೇ.೬೦ರಷ್ಟು ಜನರಿಗೆ ತಲುಪಿದ್ದು, ಶೇ.೪೦ರಷ್ಟು ಜನರಿಗೆ ಯೋಜನೆ ತಲುಪಿಸಲಾಗಿಲ್ಲ ಎಂದು ದೂರಿದ ಮಾಜಿ ಸಚಿವ ಎಂಟಿಬಿ ನಾಗರಾಜ್ 


ಹೊಸಕೋಟೆ(ಮಾ.14): ಹೊಸಕೋಟೆಯಲ್ಲಿ 600 ಕೋಟಿ ರು. ಅನುದಾನದಲ್ಲಿ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಫಲಾನುಭವಿಗಳ ಸಮಾವೇಶ ಎಂದು ನಡೆಸಿರುವುದು ಕೇವಲ ಚುನಾವಣೆ ಗಿಮಿಕ್ ಅಷ್ಟೇ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಿದ ಅನುದಾನಗಳ ಪ್ರಗತಿಯ ಕಾಮಗಾರಿಗಳಿಗೆ ಕಾಂಗ್ರೆಸ್ ಲೇಬಲ್ ಅಂಟಿಸಿಕೊಂಡು ಜನರ ದಿಕ್ಕುತಪ್ಪಿಸುವ ಕೆಲಸ ಮಾಡಿದೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸರ್ಕಾರ ಬಂದು ೯ ತಿಂಗಳು ಆಗಿದ್ದು, ಯಾವುದೇ ಅಭಿವೃದ್ಧಿ ಮಾಡದೇ ಗ್ಯಾರಂಟಿ ಯೋಜನೆಗಳಿಗೆ ಹಣ ನೀಡಿದ್ದು, ಇದರಿಂದ ಎಲ್ಲರಿಗೂ ಅನುಕೂಲವಾಗುತ್ತಿದೆ ಎಂದು ಜಾಹಿರಾತುಗಳನ್ನು ನೀಡುತ್ತಾ ಸರ್ಕಾರ ತಮ್ಮ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ. ಗ್ಯಾರಂಟಿ ಯೋಜನೆಗಳು ಕೇವಲ ಶೇ.೬೦ರಷ್ಟು ಜನರಿಗೆ ತಲುಪಿದ್ದು, ಶೇ.೪೦ರಷ್ಟು ಜನರಿಗೆ ಯೋಜನೆ ತಲುಪಿಸಲಾಗಿಲ್ಲ ಎಂದು ದೂರಿದ್ದಾರೆ. 

Latest Videos

undefined

ಲೋಕಸಭೆ ಚುನಾವಣೆಗೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಲ್ಲ: ಎಂಟಿಬಿ ನಾಗರಾಜ್ ಸ್ಪಷ್ಟನೆ

ಬಿಜೆಪಿ ಅವಧಿಯ ಕಾಮಗಾರಿಗೆ ಕಾಂಗ್ರೆಸ್ ಹೆಸರು?:

ಹೊಸಕೋಟೆಗೆ ಮೆಟ್ರೋ ವಿಸ್ತರಿಸಲು ಈ ಹಿಂದೆ ಕೇಂದ್ರ ಸಚಿವರಿಗೆ ರಾಜ್ಯ ಸರ್ಕಾರದ ಮುಖಾಂತರ ಮನವಿ ಸಲ್ಲಿಸಿ ೨೪೦೦ ಕೋಟಿ ಅನುದಾನದಲ್ಲಿ ವಿಸ್ತರಿಸಲು ಯೋಜನೆ ರೂಪಿಸಿ, ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರೂಪುರೇಷೆ ಸಿದ್ಧಪಡಿಸಲಾಗಿತ್ತು. ಆದರೆ ಉಪಮುಖ್ಯಮಂತ್ರಿಯವರು ಈಗ ಡಿಪಿಆರ್ ಸಿದ್ಧಪಡಿಸಲು ಆದೇಶಿಸುತ್ತೇನೆಂದು ಹೇಳುತ್ತಿದ್ದಾರೆ. ಹೊಸಕೋಟೆ ಮೆಟ್ರೋ ವಿಸ್ತರಣೆಗೆ ಇವರ ಕೊಡುಗೆ ಏನು ಇಲ್ಲ ಎಂದರು.

2018ರಲ್ಲಿ ನಾನು ಶಾಸಕನಾಗಿದ್ದಾಗ ಕೆ.ಆರ್. ಪುರ, ಮೇಡಹಳ್ಳಿ ಮತ್ತು ಕಾಡುಗೋಡಿ ಎಸ್.ಟಿ.ಪಿ.ಯಿಂದ ಸಂಸ್ಕರಿಸಿದ ನೀರನ್ನು ಏತ ನೀರಾವರಿ ಯೋಜನೆ ಮೂಲಕ ಅನುಗೊಂಡನಹಳ್ಳಿ ಜಡಿಗೇನಹಳ್ಳಿ ಹೋಬಳಿಯ ಕೆರೆಗಳಿಗೆ ನೀರು ತುಂಬಿಸಲು ಬಜೆಟ್‌ನಲ್ಲಿ 100 ಕೋಟಿ ಅನುದಾನ ಮೀಸಲಿರಿಸಿದ್ದೆ. ಸಮ್ಮಿಶ್ರ ಸರ್ಕಾರದಲ್ಲೂ ಮಂಜೂರಾತಿ ಹಾಗೂ ಬಿಡುಗಡೆಗೆ ಸಾಕಷ್ಟು ಪ್ರಯತ್ನ ನಡೆಸಿ ಅನುದಾನ ನೀಡದಿದ್ದಾಗ ರಾಜೀನಾಮೆ ನೀಡಿ ಹೊರಬಂದೆ. ನಂತರ ಯಡಿಯೂರಪ್ಪನವರ ಸರ್ಕಾರದಲ್ಲಿ 30 ಕೆರೆಗಳ ಜೊತೆಗೆ 8 ಕೆರೆಗಳನ್ನು ಸೇರಿಸಿ 100 ಕೋಟಿಯಿಂದ 148 ಕೋಟಿ ಅನುದಾನ ಬಿಡುಗಡೆ ಮಾಡಿ. ಯಡಿಯೂರಪ್ಪನವರೆ 2009 ರಲ್ಲಿ ಹೊಸಕೋಟೆಯಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಕಾಮಗಾರಿ 2023ರಲ್ಲಿಯೇ ಪೂರ್ಣವಾಗಬೇಕಿತ್ತು. ಆದರೆ ಕೋವಿಡ್ ಕಾರಣದಿಂದ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ, ಬಿಡಬ್ಲ್ಯುಎಸ್‌ಎಸ್‌ಬಿ ಪ್ಲಾಂಟ್‌ನಿಂದ ಅನುಮತಿ ಹಾಗೂ ಖಾಸಗಿಯವರ ಜಾಗದಲ್ಲಿ ಅನುಮತಿ ಪಡೆಯಲು ತಡವಾಯಿತು. ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಾಗ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ನಮ್ಮ ಸರ್ಕಾರ ಅಭಿವೃದ್ಧಿ ಮಾಡುತ್ತಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದರು.

ಹೊಸಕೋಟೆ ನಗರದಲ್ಲಿ ಒಳಚರಂಡಿ ಕಾಮಗಾರಿಗೆ ಪೌರಾಡಳಿತ ಸಚಿವನಾಗಿದ್ದ ಸಂದರ್ಭದಲ್ಲಿ ನಗರಾಭಿವೃದ್ಧಿ ಇಲಾಖೆಯು 40.73 ಕೋಟಿ ರು. ಅನುದಾನದ ಜೊತೆಗೆ ಹೆಚ್ಚುವರಿಯಾಗಿ 29.88 ಕೋಟಿ ರು. ಒಟ್ಟಾರೆ 70.61 ಕೋಟಿ ರು. ಮೊತ್ತದ ಪರಿಷ್ಕೃತ ಅಂದಾಜು ಪಟ್ಟಿಗೆ ಅನುಮೋದನೆ ನೀಡಿ ಕಾಮಗಾರಿಯನ್ನು ಪ್ರಾರಂಭಿಸಲು ಆದೇಶಿಸಿತ್ತು. ಇದರ ಜೊತೆಗೆ ಕೆ.ಸಿ.ವ್ಯಾಲಿ ನೀರು ಸಹ ಕೆರೆಗಳಿಗೆ ಹರಿಸಲು ನಮ್ಮ ಅವಧಿಯಲ್ಲಿ ನಡೆದಿದೆ. ಆದರೆ ಹೊಸಕೋಟೆಯಲ್ಲಿ ನಡೆದ ಕಾರ‍್ಯಕ್ರಮದಲ್ಲಿ ಈ ಹಿಂದಿನ ಸರ್ಕಾರದಲ್ಲಿ ಅನುಮೋದನೆಗೊಂಡು ಪ್ರಗತಿಯಲ್ಲಿದ್ದಂತಹ ಕಾಮಗಾರಿಗಳೆಲ್ಲವನ್ನು ಸೇರಿಸಿಕೊಂಡು ಕಾಂಗ್ರೆಸ್ ಸರ್ಕಾರ ಬಂದ ನಂತರ ಹೊಸಕೋಟೆ ತಾಲೂಕಿನ ಅಭಿವೃದ್ಧಿಗೆ ಅನುದಾನ ನೀಡಿದ್ದೇವೆ ಎಂಬಂತೆ ಬಿಂಬಿಸಿ ಸಮಾವೇಶ ನಡೆಸಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮತ್ತು ಶಾಸಕರು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಲೋಕಸಭೆ ಚುನಾವಣೆ 2024: ಟಿಕೆಟ್‌ಗಾಗಿ ಲಾಬಿ ಮಾಡಲ್ಲ, ಎಂಟಿಬಿ ನಾಗರಾಜ್

ಮಾಜಿ ಜಿಪಂ ಸದಸ್ಯ ಚನ್ನಸಂದ್ರ ಸಿ. ನಾಗರಾಜ್, ಟೌನ್ ಬ್ಯಾಂಕ್ ಮಾಜಿ ಅಧ್ಯಕ್ಷ ಬಾಲಚಂದ್ರನ್, ಬಿಜೆಪಿ ಒಬಿಸಿ ಜಿಲ್ಲಾ ಅಧ್ಯಕ್ಷ ತ.ರ.ವೆಂಕಟೇಶ್, ಚಲನಚಿತ್ರ ನಿರ್ಮಾಪಕ ಕುಮಾರ ಕಂಠೀರವ, ಗ್ರಾಪಂ ಸದಸ್ಯ ಹೇಮಂತ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

ಡಿಕೆಶಿ ಮುಜುಗರವಾಗುತ್ತದೆ ಎಂದು ವೇದಿಕೆಯಲ್ಲಿ ಸತ್ಯ ಹೇಳಿಲ್ಲ

ಹೊಸಕೋಟೆಯಲ್ಲಿ ಈ ಹಿಂದೆ ಪರಿಸ್ಥಿತಿ ಹೇಗಿತ್ತು ಎಂದು ಹಿರಿಯರನ್ನು ಕೇಳಿದರೆ ತಿಳಿಸುತ್ತಾರೆ. ವಿಧಿಯಿಲ್ಲದೇ ಎಂಟಿಬಿನ ಕರೆದುಕೊಂಡು ಚುನಾವಣೆಗೆ ನಿಲ್ಲಿಸಿದೆವು ಎಂದು ಡಿ.ಕೆ. ಶಿವಕುಮಾರ್ ಕಾರ್ಯಕ್ರಮದ ವೇಳೆ ಹೇಳಿದ್ದರು. ಆದರೆ ಬಚ್ಚೇಗೌಡ ಕುಟುಂಬವನ್ನು ರಾಜಕೀಯವಾಗಿ ಎದುರು ಹಾಕಿಕೊಳ್ಳಲು ಯಾರೂ ಇರಲಿಲ್ಲ, ಎಂಟಿಬಿಗೆ ಆ ತಾಕತ್ ಇದೆ ಎಂದು ಅರಿತು 2004 ರಲ್ಲಿ ಟಿಕೆಟ್ ಕೊಟ್ಟಿದ್ದು. ಆದರೆ ವೇದಿಕೆ ಮೇಲೆ ಸತ್ಯ ಹೇಳಿದರೆ ಮುಜುಗರವಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸತ್ಯ ಹೇಳಲಿಲ್ಲ ಎಂದು ಟಾಂಗ್ ನೀಡಿದರು. 

click me!