ಎಸ್‌ಡಿಪಿಐ, ಪಿಎಫ್‌ಐ ಬೆಂಬಲಿಗ ಮುಸ್ಲಿಮರ ಬಗ್ಗೆ ನಾವು ನಿಷ್ಠುರವಾಗಿ ಮಾತನಾಡುತ್ತೇವೆಯೇ ಹೊರತು ರಾಷ್ಟ್ರೀಯವಾದಿ ಮುಸ್ಲಿಮರ ಬಗ್ಗೆ ಅಲ್ಲ ಎಂದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ
ಮಂಗಳೂರು(ಮಾ.14): ಬಿಜೆಪಿಗೆ ಎಲ್ಲ ಮುಸಲ್ಮಾನರ ಓಟು ಬೇಡ ಎಂದು ನಾವು ಹೇಳಿಲ್ಲ. ರಾಷ್ಟ್ರೀಯವಾದಿ ಮುಸ್ಲಿಮರು ನಮ್ಮ ಜತೆ ಇದ್ದಾರೆ. ಅವರು ನಮಗೆ ಓಟು ಕೊಟ್ಟೇ ಕೊಡುತ್ತಾರೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಎಸ್‌ಡಿಪಿಐ, ಪಿಎಫ್‌ಐ ಬೆಂಬಲಿಗ ಮುಸ್ಲಿಮರ ಬಗ್ಗೆ ನಾವು ನಿಷ್ಠುರವಾಗಿ ಮಾತನಾಡುತ್ತೇವೆಯೇ ಹೊರತು ರಾಷ್ಟ್ರೀಯವಾದಿ ಮುಸ್ಲಿಮರ ಬಗ್ಗೆ ಅಲ್ಲ ಎಂದರು. ಆಜಾನ್ ಹೇಳಿಕೆ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಇದೀಗ ಪರೀಕ್ಷೆ ನಡೆಯುತ್ತಿದೆ, ರೋಗಿಗಳು ಇರುತ್ತಾರೆ. ಆಜಾನ್ ಶಬ್ದದಿಂದ ಅವರಿಗೆ ಡಿಸ್ಟರ್ಬ್ ಆಗುತ್ತದೆ. ಕಾವೂರಿನಲ್ಲಿ ಭಾಷಣದ ವೇಳೆ ನನಗೇ ಡಿಸ್ಟರ್ಬ್ ಆಗಿದ್ದು, ಅದಕ್ಕಾಗಿ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದೆ. ಇದು ಜನರ ಅಭಿಪ್ರಾಯವೂ ಹೌದು ಎಂದರು.
ಮತಾಂತರ ಕಾಯ್ದೆ ಹಿಂಪಡೆಯುತ್ತೇವೆಂದು ಪ್ರಣಾಳಿಕೆಯಲ್ಲಿ ತಿಳಿಸಿ: ಡಿಕೆಶಿ, ಸಿದ್ದರಾಮಯ್ಯಗೆ ಈಶ್ವರಪ್ಪ ಸವಾಲು
ಜನರ ಭಾವನೆಗಳನ್ನು ಯಾರಾದರೂ ಹೊರಹಾಕಬೇಕಲ್ಲ? ಮುಸ್ಲಿಂ ಸಮುದಾಯದ ನಾಯಕರು ಈ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಹೇಳಿದರು.
ಆಜಾನ್ ನಿಲ್ಲಿಸೋ ಸ್ಥಿತಿ ಬರುತ್ತೆ:
ಆಜಾನ್ ಸೇರಿ ಭಾರತೀಯ ಸಂಸ್ಕೃತಿಗೆ ಯಾವ್ಯಾವುದರಿಂದ ತೊಂದರೆ ಆಗುತ್ತದೋ ಅವೆಲ್ಲವನ್ನೂ ನಮ್ಮದೇ ಪಕ್ಷ ಇದ್ದರೂ ಒಂದೇ ಸಲಕ್ಕೆ ತೆಗೆದುಹಾಕಲು ಸಾಧ್ಯವಿಲ್ಲ. ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ, ತ್ರಿವಳಿ ತಲಾಕ್ ನಿಷೇಧ ಹೀಗೆ ಒಂದೊಂದೇ ಮಾಡ್ತಿದ್ದೀವಿ. ಇವತ್ತಲ್ಲ ನಾಳೆ ಜನರಿಗೆ ತೊಂದರೆ ಆಗದಂತೆ ಆಜಾನ್ ನಿಲ್ಲಿಸುವ ಸ್ಥಿತಿ ಬರಲಿದೆ ಎಂದರು.
ಟಿಕೆಟ್ ಮುಖ್ಯವಲ್ಲ:
75 ವರ್ಷ ವಯಸ್ಸು ಮೀರಿದವರಿಗೆ ಟಿಕೆಟ್ ಇಲ್ಲ ಎಂದು ಬಿಜೆಪಿ ಹೇಳಿಲ್ಲ. ಜನರು ಮಾತನಾಡುತ್ತಾರೆ ಅಷ್ಟೆಎಂದು ಹೇಳಿದ ಈಶ್ವರಪ್ಪ, ನನಗೆ ಟಿಕೆಟ್ ಸಿಗುತ್ತದೆಯೋ ಇಲ್ವೋ ಎನ್ನುವ ವಿಚಾರ ದೊಡ್ಡದಲ್ಲ. ಪ್ರಸ್ತುತ ಗೆಲ್ಲುವ ಅಭ್ಯರ್ಥಿಗಳ ಬಗ್ಗೆ ಬಿಜೆಪಿ ಸರ್ವೇ ನಡೆಯುತ್ತಿದೆ. ಅದನ್ನು ಇಟ್ಟುಕೊಂಡು ವರಿಷ್ಠರು ಟಿಕೆಟ್ ನೀಡಲಿದ್ದಾರೆ ಎಂದು ತಿಳಿಸಿದರು. ಬಿಜೆಪಿ ನಾಯಕರು ಮುದುಕರೇ ಆಗಲ್ಲ, ಯುವಕರಂತೆಯೇ ಕೆಲಸ ಮಾಡ್ತಿದ್ದೇವೆ ಎಂದೂ ಚಟಾಕಿ ಹಾರಿಸಿದರು.