ಜೆಡಿಎಸ್‌ ಈ ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದಿಲ್ಲ, 20 ಸೀಟು ಗೆದ್ದರೆ ಜಾಸ್ತಿ: ಸಿದ್ದರಾಮಯ್ಯ

By Kannadaprabha NewsFirst Published Jan 21, 2023, 7:00 AM IST
Highlights

ಜೆಡಿಎಸ್‌ ಈ ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದಿಲ್ಲ. ಅವರು ಯಾವಾಗಲೂ ಗೆದ್ದೆತ್ತಿನ ಬಾಲ ಹಿಡಿಯುವ ಕೆಲಸ ಮಾಡುತ್ತಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. 

ಮೈಸೂರು (ಜ.21): ಜೆಡಿಎಸ್‌ ಈ ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದಿಲ್ಲ. ಅವರು ಯಾವಾಗಲೂ ಗೆದ್ದೆತ್ತಿನ ಬಾಲ ಹಿಡಿಯುವ ಕೆಲಸ ಮಾಡುತ್ತಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡರ ತವರು, ಮೈಸೂರು ತಾಲೂಕಿನ ಲಿಂಗದೇವರಕೊಪ್ಪಲು ಬಳಿ ಶುಕ್ರವಾರ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್‌ ಒಳ ಒಪ್ಪಂದ ಮಾಡಿಕೊಂಡರೂ ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ ಸೋಲು ಖಚಿತ ಎಂದು ಭವಿಷ್ಯ ನುಡಿದರು.

ಜೆಡಿಎಸ್‌ ಯಾವಾಗಲೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಈ ಹಿಂದೆ ನಾನು ಆ ಪಕ್ಷದ ರಾಜ್ಯಾಧ್ಯಕ್ಷನಾಗಿ, ದೇವೇಗೌಡರು ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗಲೂ ಅದು ಸಾಧ್ಯವಾಗಿಲ್ಲ. 2018ರಲ್ಲಿ ಅದು 37 ಸ್ಥಾನ ಗೆದ್ದಿತ್ತು. ಆದರೆ, ಈ ಬಾರಿ 20 ಸ್ಥಾನ ಗೆದ್ದರೆ ಅದೇ ಜಾಸ್ತಿ. ಕುಮಾರಸ್ವಾಮಿ ಹೇಳುವಂತೆ 120 ಸ್ಥಾನ ಬರುವುದು ಅಸಾಧ್ಯ. ಗೆದ್ದೆತ್ತಿನ ಬಾಲ ಹಿಡಿದು ತಮ್ಮ ಬೇಳೆಕಾಳು ಬೇಯಿಸಿಕೊಳ್ಳಲು ಮುಂದಾಗುತ್ತಾರೆ. 2018ರಲ್ಲಿ ಕಡಿಮೆ ಸ್ಥಾನ ಗೆದ್ದಿದ್ದ ಜೆಡಿಎಸ್‌ಗೆ ಸಿಎಂ ಸ್ಥಾನ ಕೊಡಲಾಯಿತು. 

ಕೋಲಾರದ ಕಾಂಗ್ರೆಸ್ಸಿಗರಿಂದ ಸಿದ್ದುಗಾಗಿ ಮನೆ ಹುಡುಕಾಟ

ಆದರೆ, ಅವರು ಕಾಂಗ್ರೆಸ್‌ನವರನ್ನು ಕ್ಯಾರೆ ಅನ್ನಲಿಲ್ಲ. ಶಾಸಕರ ಮಾತಿಗೆ ಸ್ಪಂದಿಸಲಿಲ್ಲ. ಕುಮಾರಸ್ವಾಮಿಯವರು ಆಡಳಿತ ಮಾಡುವ ಬದಲಿಗೆ ವಿದೇಶದಲ್ಲಿ ಹೋಗಿ ಕುಳಿತರು. ಒಂದು ವೇಳೆ ಇಲ್ಲೇ ಇದ್ದು ಅಧಿಕಾರ ನಡೆಸಿದ್ದರೆ ‘ಆಪರೇಷನ್‌ ಕಮಲ’ ನಡೆಯುತ್ತಿರಲಿಲ್ಲ. ಅಲ್ಲಮಪ್ರಭು ವಚನದ ಮಾತಿನಂತೆ ಕೊಟ್ಟಕುದುರೆಯನ್ನು ಏರದವ ಶೂರನೂ ಅಲ್ಲ, ವೀರನೂ ಅಲ್ಲ ಎನ್ನುವಂತೆ ಆಡಳಿತ ನಡೆಸಲು ಸಾಧ್ಯವಾಗಲಿಲ್ಲ ಎಂದು ಕುಟುಕಿದರು.

ಕಾಂಗ್ರೆಸ್‌ ಸೇರಿದ ಜೆಡಿಎಸ್‌ ನಾಯಕರು: ಕಾರ್ಯಕ್ರಮದಲ್ಲಿ ಬನ್ನೂರು ಕ್ಷೇತ್ರದ ಮಾಜಿ ಶಾಸಕಿ ಜೆ. ಸುನೀತಾ ವೀರಪ್ಪಗೌಡ, ಪುರಸಭಾ ಮಾಜಿ ಸದಸ್ಯರಾದ ಎಸ್‌. ಸಿದ್ದೇಗೌಡ, ಡಾ. ಜ್ಞಾನಪ್ರಕಾಶ್‌, ತಾಪಂ ಮಾಜಿ ಅಧ್ಯಕ್ಷ ಬಸವೇಗೌಡ, ಸದಸ್ಯ ತೊಟ್ಟವಾಡಿ ಮಹದೇವಸ್ವಾಮಿ, ಗ್ರಾಪಂ ಮಾಜಿ ಸದಸ್ಯ ಬಸವೇಗೌಡ ಸೇರಿದಂತೆ ಜೆಡಿಎಸ್‌ನ ಹಲವು ನಾಯಕರು ಕಾಂಗ್ರೆಸ್‌ ಸೇರಿದರು. ಸಿದ್ದರಾಮಯ್ಯ, ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರು ಪಕ್ಷದ ಶಾಲನ್ನು ಹಾಕುವ ಮೂಲಕ ಸ್ವಾಗತಿಸಿದರು.

ಯಾರಿಗೆ ಟಿಕೆಟ್‌ ಕೊಟ್ಟರು ಗೆಲ್ಲಿಸಿ: ಜಿಪಂ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ಕೆ. ಮರಿಗೌಡ ಮಾತನಾಡಿ, 2018ರ ಚುನಾವಣೆ ಸೋಲನ್ನು ಮರೆಸಲು ಈ ಬಾರಿ ಐತಿಹಾಸಿಕ ತೀರ್ವಾನ ಮಾಡಬೇಕು. ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್‌ ನೀಡಿದರು ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷ ಗೆಲ್ಲಿಸಿ ಇತಿಹಾಸ ಸೃಷ್ಟಿಸಬೇಕು ಎಂದರು. ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರು ಕಾಂಗ್ರೆಸ್‌, ಬಿಜೆಪಿ ಸೇರುತ್ತೇನೆ ಎಂದು ಬುಡುಬುಡಿಕೆ ಮಾತುಗಳನ್ನಾಡಿದರು. ಸ್ವ ಪಕ್ಷದ ಮುಖಂಡರಿಗೆ ಅನ್ಯಾಯ ಮಾಡಿದರು. ಸಿದ್ದರಾಮಯ್ಯ ಕಾಲದಲ್ಲಿ ಮಂಜೂರಾಗಿದ್ದ ಯೋಜನೆಗಳಿಗೆ ಗುದ್ದಲಿ ಪೂಜೆ, ಉದ್ಘಾಟನೆ ನೆರವೇರಿಸುವ ಕೆಲಸ ವಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಸಿದ್ದರಾಮಯ್ಯಗೆ ಅದ್ಧೂರಿ ಸ್ವಾಗತ: ಚಾಮುಂಡೇಶ್ವರಿ ಕ್ಷೇತ್ರದ ಸ್ವಾಭಿವಾನಿ ಪಡೆ ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕಾರ್ಯಕರ್ತರು ಆತ್ಮೀಯ ಸ್ವಾಗತ ಕೋರಿದರು. ಹಲವು ತಿಂಗಳ ಬಳಿಕ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದ ಸಿದ್ದರಾಮಯ್ಯ ಅವರಿಗೆ ಭರ್ಜರಿ ಸ್ವಾಗತ ಕೋರಲಾಯಿತು. ಹಿನಕಲ್‌ ಗ್ರಾಮದ ನನ್ಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ ಅವರು ಕಾರ್ಯಕರ್ತರ ಬೈಕ್‌ ರಾರ‍ಯಲಿಗೆ ಚಾಲನೆ ನೀಡಿದರು. ಅಲ್ಲಿಂದ ಹೊರಟು ಹಿನಕಲ್‌ ಮುಖ್ಯ ರಸ್ತೆಗೆ ಬರುತ್ತಿದ್ದಂತೆ ಕ್ರೇನ್‌ನಲ್ಲಿ ಬೃಹತ್‌ ಗಾತ್ರದ ಸೇಬಿನ ಹಾರ ಹಾಕಿ, ಪಟಾಕಿ ಸಿಡಿಸಲಾಯಿತು. ನಂತರ ಹೂಟಗಳ್ಳಿ ಮುಖ್ತ ರಸ್ತೆಯಲ್ಲಿ ಜವಾಯಿಸಿದ್ದ ಮುಖಂಡರು ಹಾರ ಹಾಕಿದರೆ, ಕ್ರೇನ್‌ ನಲ್ಲಿ ಪುಷ್ಪರಾಶಿ ಸುರಿಯಲಾಯಿತು.

ನನಗೆ ಮೋದಿ ಕಂಡರೆ ಭಯವಿಲ್ಲ, ನನ್ನನ್ನು ಕಂಡರೆ ಬಿಜೆಪಿಯವರಿಗೆ ಭಯ: ಸಿದ್ದರಾಮಯ್ಯ

ಹೌಸಿಂಗ್‌ ಬೋರ್ಡ್‌ ಕಾಲೋನಿ, ರಿಂಗ್‌ ರಸ್ತೆಯಲ್ಲೂ ಸ್ವಾಗತ ಕೋರಲಾಯಿತು. ಲಿಂಗದೇವರ ಕೊಪ್ಪಲು ಪ್ರವೇಶಿಸುತ್ತಿದ್ದಂತೆಯೇ ಪೂರ್ಣಕುಂಭದೊಡನೆ ಸ್ವಾಗತಿಸಲಾಯಿತು. ಒಂದು ಸಾವಿರಕ್ಕೂ ಹೆಚ್ಚು ಬೈಕ್‌ಗಳಲ್ಲಿ ಕಾರ್ಯಕರ್ತರು ಕಾಂಗ್ರೆಸ್‌ ಬಾವುಟ ಕಟ್ಟಿಕೊಂಡು ದಾರಿ ಉದ್ದಕ್ಕೂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಪರ ಘೋಷಣೆ ಕೂಗಿದರು. ವೇದಿಕೆ ಏರುತ್ತಿದ್ದಂತೆಯೇ ಸಭೀಕರತ್ತ ಕೈ ಬೀಸಿದ, ಎರಡೂ ಕೈಗಳಿಂದ ನಮಸ್ಕಾರ ಮಾಡಿದರು. ಕಾರ್ಯಕರ್ತರು ಶಿಳ್ಳೆ, ಚಪ್ಪಾಳೆ ಹೆಚ್ಚಾದಂತೆಯೇ ವೇದಿಕೆಯ ಎಡ, ಬಲ ಮಧ್ಯದಲ್ಲಿ ಕುಳಿತವರಿಗೆ ನಮಸ್ಕರಿಸಿದರು.

click me!