ಕೇಂದ್ರ ಸರ್ಕಾರದಿಂದ ತೆರಿಗೆ ಅನ್ಯಾಯ ಆಗಿಲ್ಲ: ಎಚ್‌.ಡಿ. ಕುಮಾರಸ್ವಾಮಿ

By Kannadaprabha NewsFirst Published Feb 16, 2024, 6:53 AM IST
Highlights

15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿಲ್ಲ. ವಸ್ತುನಿಷ್ಠವಾಗಿ ಅಂಕಿ-ಅಂಶ ನೀಡಿ ರಾಜ್ಯ ಸರ್ಕಾರ ಅನ್ಯಾಯ ಆಗಿದೆ ಎಂಬುದನ್ನು ಸಮರ್ಥಿಸಲಿ. ಅನ್ಯಾಯವಾಗಿರುವುದು ಸತ್ಯವಾಗಿದ್ದರೆ ನಿಮ್ಮ ಜತೆಯಲ್ಲೇ ನಾವೂ ಹೋರಾಟ ಮಾಡುತ್ತೇವೆ: ಎಚ್‌.ಡಿ. ಕುಮಾರಸ್ವಾಮಿ 

ವಿಧಾನಸಭೆ(ಫೆ.16): ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆರ್ಥಿಕ ಅನ್ಯಾಯ ಆಗಿದೆ ಎಂಬುದು ಸುಳ್ಳು. ರಾಜ್ಯದಿಂದ ಕೇಂದ್ರ ಸರ್ಕಾರ ಸಂಗ್ರಹಿಸುತ್ತಿರುವ 100 ರು. ತೆರಿಗೆಯಲ್ಲಿ ಕೇವಲ 13 ರು. ಮಾತ್ರ ರಾಜ್ಯಕ್ಕೆಬರುತ್ತಿದೆ ಎಂಬುದು ಸರಿಯಲ್ಲ. ನನ್ನ ಪ್ರಕಾರ 58 ರು. ರಾಜ್ಯಕ್ಕೆ ವಾಪಸ್ಸಾಗುತ್ತಿದೆ ಎಂದು ಜೆಡಿಎಸ್‌ ಸದಸ್ಯ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಇನ್ನು 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿಲ್ಲ. ವಸ್ತುನಿಷ್ಠವಾಗಿ ಅಂಕಿ-ಅಂಶ ನೀಡಿ ರಾಜ್ಯ ಸರ್ಕಾರ ಅನ್ಯಾಯ ಆಗಿದೆ ಎಂಬುದನ್ನು ಸಮರ್ಥಿಸಲಿ. ಅನ್ಯಾಯವಾಗಿರುವುದು ಸತ್ಯವಾಗಿದ್ದರೆ ನಿಮ್ಮ ಜತೆಯಲ್ಲೇ ನಾವೂ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ನಾಯಕರ ಸಲಹೆಯಂತೆ ಕುಪೇಂದ್ರ ರೆಡ್ಡಿ ಕಣಕ್ಕೆ: ಎಚ್.ಡಿ.ಕುಮಾರಸ್ವಾಮಿ

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ರಾಜ್ಯದ ಶಾಸಕರು ದೆಹಲಿಗೆ ಹೋರಾಟ ಮಾಡಿ ಬಂದಿದ್ದಾರೆ. ನಮ್ಮ ತೆರಿಗೆ ನಮ್ಮ ಹಕ್ಕು ಎಂದಿರುವ ಅವರನ್ನು ಅಭಿನಂದಿಸುತ್ತೆನೆ. ಆದರೆ ಅವರು ಅನ್ಯಾಯದ ಬಗ್ಗೆ ನೀಡಿರುವ ಅಂಕಿ-ಅಂಶಗಳ ಬಗ್ಗೆ ನನ್ನ ತಕರಾರು ಇದೆ ಎಂದು ಹೇಳಿದರು.

ಈ ಹಿಂದೆ ಮನೊಮೋಹನಾಮಿಕ್ಸ್‌, ಮೋದಿನಾಮಿಕ್ಸ್‌, ಅಬೆನೊಮಿಕ್ಸ್‌ ಎನ್ನುತ್ತಿದ್ದರು. ಈಗ ಸಿದ್ದರಾಮಯ್ಯ ಅವರ ಆರ್ಥಿಕ ಲೆಕ್ಕಾಚಾರ ನೋಡಿ ಸಿದ್ದನಾಮಿಕ್ಸ್‌ ಜಾರಿಗೆ ತರಬಹುದು ಎಂದು ವ್ಯಂಗ್ಯವಾಡಿದರು.
15ನೇ ಹಣಕಾಸು ಆಯೋಗದ ಶಿಫಾರಸಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎನ್ನುತ್ತಾರೆ. ಆದರೆ ಇದಕ್ಕೆ ಸಲಹೆಗಳನ್ನು ನೀಡಿದ್ದು ರಘುರಾಮ್‌ ರಾಜನ್‌ ಎಂಬುದು ತಿಳಿದುಬಂದಿದೆ. ಹಿಂದೆ ನನ್ನ ನೀರು ನನ್ನ ಹಕ್ಕು ಎಂದು ಮೇಕೆದಾಟು ಪಾದಯಾತ್ರೆ ಮಾಡಿದ್ದರು. ತಮಿಳ್ನಾಡಿಗೆ ಈಗಲೂ ಕಾವೇರಿ ನೀರು ಹರಿದು ಹೋಗುತ್ತಿದೆ.

ಇದೀಗ ನನ್ನ ತೆರಿಗೆ ನನ್ನ ಹಕ್ಕು ಎನ್ನುತ್ತಿದ್ದಾರೆ. ಚಿನ್ನದ ಮೊಟ್ಟೆ ಇಡುವ ಕೋಳಿಯ ಕತ್ತು ಕತ್ತರಿಸುತ್ತಿದೆ ಕೇಂದ್ರ ಸರಕಾರ ಎಂದು ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದಾರೆ. ಐದು ಗ್ಯಾರಂಟಿಯಿಂದ ರಾಮರಾಜ್ಯ ಮಾಡಿದ್ದೇವೆ ಎಂದು ಹೇಳಿ ಮುದ್ರಾಂಕ ಶುಲ್ಕ, ಮಾರ್ಗಸೂಚಿ ದರ, ಅಬಕಾರಿ ಸುಂಕ ಸೇರಿ ರಾಜ್ಯದಲ್ಲಿ ತೆರಿಗೆಗಳನ್ನೆಲ್ಲಾ ಹೆಚ್ಚಿಸಲಾಗಿದೆ. ಮತ್ತೊಂದೆಡೆ 90 ಸಂಪುಟ ಸಚಿವ ಸ್ಥಾನಗಳನ್ನು ಮಾಡಿ ಸಾರ್ವಜನಿಕರ ಹಣ ಪೋಲು ಮಾಡಲಾಗುತ್ತಿದೆ ಎಂದು ದೂರಿದರು

ಉತ್ತರಕ್ಕೆ ಅನ್ಯಾಯ ಮಾಡಿದವರು ಯಾರು:

ಉತ್ತರ ಭಾರತದ ಅಭಿವೃದ್ಧಿ ಮಾಡದೆ ಅಭಿವೃದ್ಧಿಯಾಗಿರುವ ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ದೂರುತ್ತಿದೆ. ದೇಶದಲ್ಲಿ 17 ವರ್ಷ ಪ್ರಧಾನಿಯಾಗಿದ್ದ ನೆಹರೂ ಉತ್ತರ ಭಾರತದವರು. ಲಾಲ್‌ ಬಹದ್ದೂರ್‌ ಶಾಸ್ತ್ರಿ, ಇಂದಿರಾಗಾಂಧಿ, ರಾಜೀವ್‌ಗಾಂಧಿ ಸೇರಿದಂತೆ 48 ವರ್ಷ ವರ್ಷಗಳ ಕಾಲ ಉತ್ತರ ಪ್ರದೇಶದಿಂದ ಬಂದ ಕಾಂಗ್ರೆಸ್ಸಿಗರೇ ದೇಶವನ್ನು ಆಳಿದ್ದಾರೆ. ಉತ್ತರ ಪ್ರದೇಶ ಅಭಿವೃದ್ಧಿ ಆಗದಿದ್ದಕ್ಕೆ ಯಾರನ್ನು ದೂರಬೇಕು ಎಂದು ಪ್ರಶ್ನಿಸಿದರು.
ಜನಸ್ಪಂದನ ಬಗ್ಗೆ ಟೀಕಿಸಿದ ಅವರು, ಗ್ಯಾರಂಟಿಗಳಿಂದ ರಾಮರಾಜ್ಯ ನಿರ್ಮಾಣವಾಗಿದ್ದರೆ ಜನಸ್ಪಂದನಕ್ಕೆ ಏಕೆ 20 ಸಾವಿರ ಜನ ಬಂದರು? ಅದಕ್ಕೆ ಯಾಕೆ ಅಷ್ಟು ಪ್ರಚಾರ ಪಡೆದಿರಿ ಎಂದು ಟೀಕಿಸಿದರು.

ಗ್ಯಾರಂಟಿಗಳ ಹೆಸರಿನಲ್ಲಿ ಲೂಟಿ ಜಾತ್ರೆ:

ದಿ ಪಾಲಿಸಿ ಫ್ರಂಟ್‌ ಕಂಪನಿಗೆ 7.20 ಕೋಟಿ ರು. ಗುತ್ತಿಗೆ ವಿಷಯ ಪ್ರಸ್ತಾಪಿಸಿದ ಕುಮಾರಸ್ವಾಮಿ, ಗ್ಯಾರಂಟಿಗಳ ಹೆಸರಿನಲ್ಲಿ ಲೂಟಿ ಜಾತ್ರೆ ನಡೆಯುತ್ತಿದೆ. ಪಾಲಿಸಿ ಫ್ರಂಟ್‌ ಕಡತದ ಶರವೇಗಕ್ಕೆ ಯಾವ ‘ಪಟ್ಟು?ʼ ಯಾವ ‘ಮಟ್ಟು?ʼ ಕೆಲಸ ಮಾಡಿದೆ ಎನ್ನುವ ‘ಗುಟ್ಟು?ʼ ಬಿಚ್ಚಿಡಿ ಎಂದು ಪರೋಕ್ಷವಾಗಿ ಟೀಕಿಸಿದರು.

‘ದ ಪಾಲಿಸಿ ಪ್ರಂಟ್‌ʼ ಎನ್ನುವ ದಿಕ್ಕಿಲ್ಲದ ಸಂಸ್ಥೆಗೆ ಸಮೀಕ್ಷೆ ಮಾಡುವುದಕ್ಕೆ 7.20 ಕೋಟಿ ರು. ಮೊತ್ತದ ಗುತ್ತಿಗೆ ಕೊಡಲಾಗಿದೆ. ಆದರೆ, ಕಂಪನಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅದರ ಹಿಂದೆ ಮುಂದೆ ಯಾರಿದ್ದಾರೆ ಎನ್ನುವುದೂ ತಿಳಿದಿಲ್ಲ. ಆದರೂ, ಸರಕಾರ ಇಷ್ಟು ಪ್ರಮಾಣದಷ್ಟು ಹಣವನ್ನು ಆ ಕಂಪನಿಗೆ ಕೊಟ್ಟಿದೆ. ಹಾಗಾದರೆ, ಆ ಕಂಪನಿ ಯಾರದು? ಎಂದು ಪ್ರಶ್ನಿಸಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಎಚ್‌ಡಿಕೆ ಸ್ಪರ್ಧೆ ಮಾಡಲ್ವಾ?: ಶಾಸಕ ಬಾಲಕೃಷ್ಣ

ಎಂ2ಎಂ ಎಂಬ ಇನ್ನೊಂದು ಸಂಸ್ಥೆಗೆ ಒಂದು ಕೋಟಿ ರುಪಾಯಿ ಕೊಡಲಾಗಿದೆ. ಮಂಡ್ಯ ಜಿಲ್ಲೆಯ ಶಾಸಕರೊಬ್ಬರ ಪತ್ನಿ ನಿರ್ದೇಶಕಿ ಆಗಿರುವ ಕಂಪನಿಗೆ ಕೂಡ ಗ್ಯಾರಂಟಿಗಳ ಪ್ರಚಾರಕ್ಕಾಗಿ ಕೋಟಿ ರುಪಾಯಿ ನೀಡಲಾಗಿದೆ ಎಂದು ದೂರಿದರು.

ಪ್ರಚಾರಕ್ಕಾಗಿಯೇ ಈವರೆಗೂ ೧೪೦ ಕೋಟಿ ರು.ಗಳನ್ನು ರಾಜ್ಯ ಸರಕಾರ ವೆಚ್ಚ ಮಾಡಿದೆ. ಬೆಳಗ್ಗೆ ಯಾವ ಟೀವಿ ನೋಡಿದರೂ, ಯಾವ ಪೇಪರ್ ನೋಡಿದರೂ ನಿಮ್ಮದೇ (ಸರಕಾರದ್ದು) ದರ್ಶನ ಆಗುತ್ತಿದೆ. ಎದ್ದ ಕೂಡಲೇ ದೇವರ ದರ್ಶನದ ಬದಲು ನಿಮ್ಮದೇ ದರ್ಶನ ಆಗುತ್ತಿದೆ ಎಂದು ಸರಕಾರದ ವಿರುದ್ಧ ಅವರು ಪ್ರಹಾರ ನಡೆಸಿದರು.

click me!