
ಹಾಸನ/ರಾಮನಗರ(ನ.25): ಕಾಂಗ್ರೆಸ್ ಸರ್ಕಾರವು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ವಾಪಸ್ ಪಡೆದಿರುವುದನ್ನು ನೋಡಿದರೆ ಇವರೆಲ್ಲ ಸಂವಿಧಾನ ಉಳಿಸುವ ಕಾನೂನು ರಕ್ಷಕರಾ? ಎನ್ನುವ ಅನುಮಾನ ಮೂಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ಹಾಸನದಲ್ಲಿ ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಇಡೀ ಕ್ಯಾಬಿನೆಟ್ ಶಿವಕುಮಾರ್ ಅವರ ಪಾದದಡಿ ಇದೆ. ಈ ದೇಶದ ಕಾನೂನು ವ್ಯವಸ್ಥೆಯನ್ನು ಅವರ ಪಾದದಡಿ ತೆಗೆದುಕೊಂಡು ಹೋಗೋ ಕೆಲಸ ಮಾಡಿದ್ದಾರೆ. ಈಗಾಗಲೇ ಹಲವಾರು ಸುಪ್ರೀಂ ಕೋರ್ಟ್, ಹೈಕೋರ್ಟ್ ತೀರ್ಪುಗಳಿವೆ. ಈ ರೀತಿ ತನಿಖೆಗಳಿದ್ದಾಗ, ಇದಕ್ಕೆ ಕ್ಯಾಬಿನೆಟ್‌ನಲ್ಲಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರಲ್ಲದೆ, ಸಿದ್ದರಾಮಯ್ಯ ನವರು ಪಾಪ ಹಲವಾರು ವಕೀಲ ವೃತ್ತಿ ಮಾಡೋರಿಗೆ ಉಪನ್ಯಾಸ ಮಾಡಿರೋರು ಅವರ ಕ್ಯಾಬಿನೆಟ್‌ನಲ್ಲೇ ಇಂತಹ ತೀರ್ಮಾನ ಮಾಡಿರುವುದು ಸರಿಯೇ? ಎಂದು ವ್ಯಂಗ್ಯವಾಡಿದರು.
ಡಿಕೆಶಿ ಸಿಬಿಐ ಕೇಸ್ ವಾಪಸ್, ಇವರೆಲ್ಲಾ ಸಂವಿಧಾನ ಉಳಿಸುವ ಕಾನೂನು ರಕ್ಷಕರಾ?: ಎಚ್‌ಡಿಕೆ
‘ಸುಪ್ರೀಂ’ ಛೀಮಾರಿ ಬೀಳಲಿದೆ:
ಇನ್ನು ರಾಮನಗರದಲ್ಲೂ ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಸಿಬಿಐ ತನಿಖೆ ನಡೆಸುತ್ತಿ ರೋ ಇಂಥ ಸೂಕ್ಷ್ಮ ವಿಚಾರ ಸುಪ್ರಿಂ ಕೋರ್ಟಿನಲ್ಲಿರುವಾಗ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಆ ಪ್ರಕರಣವನ್ನು ವಾಪಸ್ ಪಡೆಯುವ ನಿರ್ಧಾರ ಮಾಡಿರುವುದು ಅಕ್ಷಮ್ಯ. ಇದಕ್ಕೆ ಕೋರ್ಟ್‌ನಿಂದ ಛೀಮಾರಿ ಬಿದ್ದರೂ ಬೀಳಬಹುದು ಎಂದರಲ್ಲದೇ, ಮುಂದಿನ ಅಧಿವೇಶನದಲ್ಲಿ ಈ ವಿಷಯವಾಗಿ ಚರ್ಚೆ ಮಾಡುತ್ತೇನೆ ಎಂದರು.
ಹಿಂದೆ ಎರಡು ಬಾರಿ ಮನವಿ ಸಲ್ಲಿಸಿದರೂ ಅರ್ಜಿ ವಜಾ ಆಗಿಲ್ಲ. ಪಾಪ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಪ್ರಕರಣದ ವಿಚಾರ ಚರ್ಚೆ ಆಗುತ್ತದೆ ಎಂಬ ಕಾರಣಕ್ಕೆ ಗುರುವಾರದ ಸಚಿವ ಸಂಪುಟ ಸಭೆಗೂ ಹೋಗಿಲ್ಲ. ಅಂತಹ ದೊಡ್ಡತನ ತೋರಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.