ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಧಮ್ ಇದ್ದರೆ, ತಾಕತ್ ಇದ್ದರೆ ಎಲ್ಲಾ ಕಡೆಯಿಂದ ಅಕ್ಕಿ ಶೇಖರಿಸಿ ಕೇಂದ್ರ ಸರ್ಕಾರದ 5 ಕೆ.ಜಿ. ಜತೆಗೆ 10 ಕೆ.ಜಿ. ಸೇರಿಸಿ ಪ್ರತಿಯೊಬ್ಬರಿಗೆ 15 ಕೆ.ಜಿ. ಅಕ್ಕಿ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಬೆಂಗಳೂರು (ಜೂ.21): ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಧಮ್ ಇದ್ದರೆ, ತಾಕತ್ ಇದ್ದರೆ ಎಲ್ಲಾ ಕಡೆಯಿಂದ ಅಕ್ಕಿ ಶೇಖರಿಸಿ ಕೇಂದ್ರ ಸರ್ಕಾರದ 5 ಕೆ.ಜಿ. ಜತೆಗೆ 10 ಕೆ.ಜಿ. ಸೇರಿಸಿ ಪ್ರತಿಯೊಬ್ಬರಿಗೆ 15 ಕೆ.ಜಿ. ಅಕ್ಕಿ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಮಂಗಳವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ನುಡಿದಂತೆ ರಾಜ್ಯದ ಜನತೆಗೆ ಅಕ್ಕಿ ನೀಡಬೇಕು. ಒಂದು ಕುಟುಂಬದಲ್ಲಿ 5 ಮಂದಿ ಇದ್ದಲ್ಲಿ ತಲಾ 15 ಕೆ.ಜಿ.ಯಂತೆ ಒಟ್ಟು 75 ಕೆ.ಜಿ. ಅಕ್ಕಿ ಕೊಡಬೇಕು. ಇದನ್ನು ಮಾಡದೆ, ಪ್ರತಿಭಟಿಸುತ್ತೀರಾ? ಪ್ರತಿಭಟನೆ ಮಾಡಲು ನಿಮಗೆ ಅಧಿಕಾರ ಕೊಟ್ಟಿದ್ದಾ? ನಿಮಗೆ ನಾಚಿಕೆ ಇಲ್ಲವಾ? ಜವಾಬ್ದಾರಿ ಇಲ್ಲವಾ? ಇದೊಂದು ಸುಳ್ಳು-ಮಳ್ಳ ಬೇಜಾವಾಬ್ದಾರಿ ಸರ್ಕಾರ ಎಂದು ಟೀಕಿಸಿದರು.
9ನೇ ವಿಶ್ವ ಯೋಗ ದಿನಾಚರಣೆ: ವಿಧಾನಸೌಧ ಮುಂಭಾಗ ಯೋಗಾಸನ ಮಾಡಿ ಗಮನಸೆಳೆದ ಗಣ್ಯರು
ಆಪತ್ತಿನ ಮಿತ್ರ ಮೋದಿ: ಸುಳ್ಳು ಹೇಳುವ ಕಾಂಗ್ರೆಸ್‌ನಿಂದ ನಾವು ಪಾಠ ಕಲಿಯಬೇಕಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು ಎರಡು ವರ್ಷ ಗರೀಬ್ ಕಲ್ಯಾಣ ಯೋಜನೆಡಿ 10 ಕೆ.ಜಿ. ಅಕ್ಕಿ ನೀಡಿದ್ದಾರೆ. ಸಂಕಷ್ಟಎದುರಾದಾಗ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೆರವಿಗೆ ಧಾವಿಸಿದೆ. ಕೋವಿಡ್, ಪ್ರವಾಹದ ಸಂದರ್ಭಗಳಲ್ಲಿ ಆಪತ್ತಿನ ಮಿತ್ರರಾಗಿ ಪ್ರಧಾನಿ ಮೋದಿ ನೆರವಿಗೆ ಬಂದಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಬಸ್ ಬಂದ್: ರಾಜ್ಯದಲ್ಲಿ ಶೀಘ್ರದಲ್ಲೇ ಬಸ್‌ಗಳು ಸಂಚಾರ ನಿಲ್ಲಿಸಲಿವೆ. ಈಗಾಗಲೇ ಹಲವು ಶೆಡ್ಯೂಲ್‌ಗಳು ನಿಂತಿವೆ. ಶಾಲಾ ಮಕ್ಕಳಿಗೆ ಬಸ್ ಇಲ್ಲದೆ ಪ್ರತಿಭಟನೆಗಳಾಗುತ್ತಿವೆ. ಇನ್ನು ಈ ಕರೆಂಟ್ ಶಾಕ್‌ನಿಂದ ಕೈಗಾರಿಕೆಗಳೂ ಶೀಘ್ರದಲ್ಲೇ ಕೆಲಸ ನಿಲ್ಲಿಸಲಿವೆ. ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಲಿದೆ ಎಂದು ಬೊಮ್ಮಾಯಿ ಕಿಡಿಕಾರಿದರು.
ಶಾಸಕರಿಗೆ ಯೋಗಾಭ್ಯಾಸ ಮಾಡಿಸಲಿ: ರಾಜಕೀಯ ತೊಳಲಾಟದಿಂದ ನಿರಾಳರಾಗಲು ಸರ್ಕಾರ ಎಲ್ಲ ಶಾಸಕರಿಗೂ ಯೋಗ ತರಬೇತಿ ನೀಡಲು ಕ್ರಮ ವಹಿಸಬೇಕೆಂದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು. ಶ್ವಾಸಗುರು, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ನೇತೃತ್ವದ ಶ್ವಾಸ ಯೋಗ ಸಂಸ್ಥೆಯಿಂದ ನಗರದ ಚಾಮರವಜ್ರ ಸಭಾಂಗಣದಲ್ಲಿ ಮಂಗಳವಾರ ನಡೆದ ‘ಯೋಗರತ್ನ ಪ್ರಶಸ್ತಿ ಪ್ರದಾನ -2023’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿತ್ಯದ ರಾಜಕೀಯದಿಂದ ಒತ್ತಡದಲ್ಲಿರುವ ರಾಜಕಾರಣಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಸಾಧ್ಯತೆ ಹೆಚ್ಚು.
ಹೀಗಾಗಿ ಸರ್ಕಾರ ಪಕ್ಷಬೇಧ ಮರೆತು ಎಲ್ಲ ಶಾಸಕರಿಗೂ ಯೋಗಾಭ್ಯಾಸ ಮಾಡಿಸಬೇಕು. ಪ್ರತಿ ರಾಜಕಾರಣಿಗಳು ಯೋಗಾಭ್ಯಾಸ ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ದೇಶ ವಿದೇಶಗಳಲ್ಲಿ ಯೋಗ ಇಂದು ಪ್ರಚಲಿತ ಆಗುತ್ತಿದ್ದು, ಇಡೀ ವಿಶ್ವವೇ ಒಪ್ಪಿಕೊಂಡಿದೆ. ವಿಶ್ವ ಯೋಗ ದಿನದಂದು ವಿಶ್ವಸಂಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಯೋಗ ನಡೆಯುತ್ತಿರುವುದು ಭಾರತಕ್ಕೆ ಹೆಮ್ಮೆಯ ವಿಚಾರ ಎಂದು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಬೊಮ್ಮಾಯಿ ಅವರ ಸಲಹೆಯಂತೆ ಸರ್ಕಾರದಿಂದ ಶಾಸಕರ ಭವನದಲ್ಲಿ ಯೋಗ ತರಬೇತುದಾರರ ಮೂಲಕ ಆಸಕ್ತ ಶಾಸಕರಿಗೆ ಯೋಗ ತರಬೇತಿ ನೀಡಲು ಕ್ರಮ ವಹಿಸಲಾಗುವುದು. ಈ ಕುರಿತು ಸ್ಪೀಕರ್ ಯು.ಟಿ.ಖಾದರ್ ಅವರ ಜೊತೆಗೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದರು.
ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲ್ಲ: ಬಾಲಚಂದ್ರ ಜಾರಕಿಹೊಳಿ
‘ಶ್ವಾಸಗುರು, ದ ಮೇಕಿಂಗ್ ಆಫ್ ದ ಹಿಮಾಲಯನ್ ಮಾಸ್ಟರ್ ಸ್ವಾಮಿ ವಚನಾನಂದ’ ಕಾಫಿ ಟೇಬಲ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಆರ್ಚ್ ಆಫ್ ಲಿವಿಂಗ್ ರವಿಶಂಕರ ಗುರೂಜಿ, ಹಿಂದೆ ಯೋಗವೆಂದರೆ ಸನ್ಯಾಸಿಗಳಿಗೆ ಸೀಮಿತವಾಗಿದ್ದು, ವೃದ್ಧರು ಮಾಡುವಂತದ್ದು ಎಂಬ ಅಭಿಪ್ರಾಯವಿತ್ತು. ಆದರೆ ಇದೀಗ ಈ ಅಭಿಪ್ರಾಯ ಬದಲಾಗಿದೆ. ಪ್ರಪಂಚದಲ್ಲಿ 250 ಕೋಟಿ ಜನ ಯೋಗಾಭ್ಯಾಸ ಮಾಡುತ್ತಿದ್ದಾರೆ. ಮಾನಸಿಕ, ಭೌತಿಕ ಕಾಯಿಲೆಗಳು ಹೆಚ್ಚಾದಂತೆ ರೋಗಮುಕ್ತ ಜೀವನಕ್ಕಾಗಿ ಯೋಗದ ಮೊರೆ ಹೋಗಲಾಗುತ್ತಿದೆ ಎಂದು ತಿಳಿಸಿದರು.