
ಹೈದರಾಬಾದ್ (ಮೇ.29): ‘ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು 2022ರ ‘ಬಿಆರ್‌ಎಸ್ ಶಾಸಕರ ಖರೀದಿ ಪ್ರಕರಣ’ವನ್ನು ಬಳಸಿಕೊಂಡು ಬಿಜೆಪಿಗೆ ಬ್ಲಾಕ್‌ಮೇಲ್ ಮಾಡಲು ಯತ್ನಿಸಿದ್ದರು. ಜಾರಿ ನಿರ್ದೇಶನಾಲಯದ (ಇ.ಡಿ.) ಪ್ರಕರಣದಲ್ಲಿ ಸಿಲುಕಿದ್ದ ತಮ್ಮ ಪುತ್ರಿ ಮತ್ತು ಎಂಎಲ್‌ಸಿ ಕೆ. ಕವಿತಾ ಅವರನ್ನು ಆ ಪ್ರಕರಣದಿಂದ ಮುಕ್ತ ಮಾಡಿದರೆ, ಬಿಜೆಪಿ ನಾಯಕರ ವಿರುದ್ಧದ ಶಾಸಕರ ಖರೀದಿ ಪ್ರಕರಣವನ್ನೂ ಕೈಬಿಡಲು ಮುಂದಾಗಿದ್ದರು’ ಎಂದು ತೆಲಂಗಾಣ ಫೋನ್ ಟ್ಯಾಪಿಂಗ್ ಹಗರಣದ ಆರೋಪಿ ಆಗಿರುವ ನಿವೃತ್ತ ಡಿಸಿಪಿ ಪಿ. ರಾಧಾಕೃಷ್ಣ ರಾವ್ ‘ಸ್ಫೋಟಕ ತಪ್ಪೊಪ್ಪಿಗೆ ಹೇಳಿಕೆ’ ನೀಡಿದ್ದಾರೆ.ಇದಲ್ಲದೆ, ‘ಶಾಸಕರ ಖರೀದಿ ಹಗರಣದಲ್ಲಿ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನೂ ಬಂಧಿಸಲು ಕೆಸಿಆರ್ ಪ್ಲಾನ್ ಮಾಡಿದ್ದರು. ಈ ಮೂಲಕ ಬಿಜೆಪಿ ತಮ್ಮೆದುರು ರಾಜಿ ಸಂಧಾನಕ್ಕೆ ಬರಲಿದೆ. ಆಗ ಪುತ್ರಿಯ ಮೇಲಿನ ಪ್ರಕರಣ ರದ್ದುಗೊಳಿಸಿಕೊಳ್ಳಬಹುದು ಎಂದು ಯೋಚಿಸಿದ್ದರು’ ಎಂದೂ ರಾಧಾಕೃಷ್ಣ ರಾವ್ ಹೇಳಿದ್ದಾರೆ.
ಕದ್ದಾಲಿಕೆ ಹಗರಣದಲ್ಲಿ ಬಂಧಿತರಾಗಿರುವ ರಾವ್ ತಪ್ಪೊಪ್ಪಿಗೆ ಹೇಳಿಕೆ ನೀಡಿ, ಕೆಸಿಆರ್ ಅವರನ್ನು ‘ಪೆದ್ದಾಯಣ’ (ಹಿರಿಯಣ್ಣ/ ಬಿಗ್ ಬಾಸ್) ಎಂದು ಉಲ್ಲೇಖಿಸಿದ್ದಾರೆ. ‘ಪೆದ್ದಾಯಣ (ಕೆಸಿಆರ್) ಅವರು ಸಿಎಂ ಆಗಿದ್ದಾಗ, ಅವರ ಬಿಆರ್‌ಎಸ್ ಶಾಸಕರ ಖರೀದಿಗೆ ಬಿಜೆಪಿ ಯತ್ನಿಸುತ್ತಿದೆ ಎಂದು ಎಸ್‌ಐಟಿ ಪ್ರಕರಣ ದಾಖಲಿಸಿತ್ತು. ಖರೀದಿಯು ಬಿಜೆಪಿ ರಾಷ್ಟ್ರೀಯ ಮುಖಂಡ ಬಿ.ಎಲ್. ಸಂತೋಷ್ ಅಣತಿಯ ಮೇಲೆ ನಡೆದಿತ್ತು ಎಂಬ ಆರೋಪ ಕೇಳಿಬಂದಿತ್ತು. ಇದೇ ವೇಳೆ ಕೆಸಿಆರ್ ಪುತ್ರಿ ಕೆ. ಕವಿತಾ ಅವರ ಮೇಲೆ ಇ.ಡಿ. ಅಕ್ರಮ ಹಣ ವರ್ಗಾವಣೆ ಆರೋಪ ಹೊರಿಸಿತ್ತು. ಈ ಸಂದರ್ಭವನ್ನು ಬಳಸಿಕೊಂಡ ಕೆಸಿಆರ್, ‘ಸಂತೋಷ್ ಅವರನ್ನು ಬಂಧಿಸಬೇಕು. ಅವರನ್ನು ಬಂಧಿಸಿದರೆ ಬಿಜೆಪಿ ರಾಷ್ಟ್ರೀಯ ನಾಯಕತ್ವವು ತಮ್ಮೆದುರು ಮಂಡಿಯೂರಿ, ‘ಕೇಸಿನಿಂದ ಸಂತೋಷ್‌ರನ್ನು ಬಿಡುಗಡೆ ಮಾಡಿ’ ಎಂದು ರಾಜಿ ಸಂಧಾನಕ್ಕೆ ಬರಲಿದೆ’ ಎಂದು ಭಾವಿಸಿದ್ದರು. ಹಾಗೆ ಸಂಧಾನಕ್ಕೆ ಬಂದಾಗ, ‘ಕವಿತಾ ಮೇಲಿನ ಕೇಸು ಬಿಡಿ. ನಾವೂ ಸಂತೋಷ್ ಮೇಲಿನ ಪ್ರಕರಣ ಕೈಬಿಡುತ್ತೇವೆ’ ಎಂದು ಹೇಳಲು ಕೆಸಿಆರ್ ಇಚ್ಛಿಸಿದ್ದರು’ ಎಂದು ರಾಧಾಕೃಷ್ಣ ರಾವ್ ಹೇಳಿದ್ದಾರೆ.
‘ಆದರೆ ಶಾಸಕರ ಖರೀದಿ ಹಗರಣದ ತನಿಖೆಯಲ್ಲಿ ಕೆಲವು ಪೊಲೀಸರು ಲೋಪ ಎಸಗಿದರು. ಒಬ್ಬ ಮಹತ್ವದ ವ್ಯಕ್ತಿ ಪೊಲೀಸರ ಕೈಗೆ ಸಿಗದೇ ಪರಾರಿಯಾದ. ಹೀಗಾಗಿ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತು. ಯಾರನ್ನೂ ಬಂಧಿಸಬೇಡಿ ಎಂದು ಹೈಕೋರ್ಟ್ ಆದೇಶಿಸಿತು. ತೆಲಂಗಾಣ ಎಸ್‌ಐಟಿ ನಡೆಸುತ್ತಿದ್ದ ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಬೇಕು ಎಂದು ಹೈಕೋರ್ಟ್ ಆದೇಶಿಸಿತು. ಆಗ ಕೆಸಿಆರ್ ಲೆಕ್ಕಾಚಾರ ಎಲ್ಲ ಉಲ್ಟಾ ಆಯಿತು. ಆಗ ಸಿಟ್ಟಿನಿಂದ ನಮ್ಮ ಮೇಲೆ ಕೆಸಿಆರ್ ಕೂಗಾಡಿದರು’ ಎಂದು ರಾಧಾಕೃಷ್ಣ ಹೇಳಿದ್ದಾರೆ.
‘2020ರಲ್ಲಿ ನಿವೃತ್ತಿ ನಂತರವೂ ಕೆಸಿಆರ್ ನನ್ನ ಸೇವೆ ವಿಸ್ತರಣೆ ಮಾಡಿ ಹೈದರಾಬಾದ್ ಪೊಲೀಸ್‌ನ 2 ಮಹತ್ವದ ಹುದ್ದೆಗಳಿಗೆ ನನ್ನನ್ನು ನಿಯೋಜಿಸಿದ್ದರು. ಅವರ ಮೇಲಿನ ಋಣದಿಂದ ಇಷ್ಟು ದಿನ ಈ ವಿವರಗಳನ್ನು ಬಹಿರಂಗಪಡಿಸದೇ ಸುಮ್ಮನಿದ್ದೆ’ ಎಂದೂ ರಾಧಾಕೃಷ್ಣ ರಾವ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.